ಮಕ್ಕಳಿಗೆ ಜೀವ ಸುರಕ್ಷತೆಗಳನ್ನು ಕಲಿಸುವ ಅಗತ್ಯತೆ ಇದೆ: ಈಶ್ವರ್ ಮಲ್ಪೆ
ಪುತ್ತೂರು: ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಬದುಕನ್ನು ನಾವೇ ಹಾಳು ಮಾಡುತ್ತಿದ್ದೇವೆ, ಇಂದಿನ ದಿನಗಳಲ್ಲಿ ಮಕ್ಕಳಿಗೆ ಜೀವ ಸುರಕ್ಷತೆಗಳನ್ನು ಕಲಿಸುವ ಅಗತ್ಯತೆ ಬಹಳಷ್ಟಿದೆ. ಮೊಬೈಲ್ ಕೊಡುವ ಬದಲಾಗಿ ಅವರಿಗೆ ಈಜು, ಕರಾಟೆ ಸೇರಿದಂತೆ ಜೀವವನ್ನು ಸುರಕ್ಷಿತವಾಗಿಸುವ ವಿದ್ಯೆಗಳನ್ನು ಕಲಿಸಬೇಕಾಗಿದೆ. ಇದನ್ನು ಪ್ರತಿಯೊಬ್ಬ ಹೆತ್ತವರು ಅರ್ಥ ಮಾಡಿಕೊಳ್ಳಬೇಕು ಎಂದು ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗದ ಆಶ್ರಯದಲ್ಲಿ ದ.8ರಂದು ಮಜ್ಜಾರಡ್ಕದ ದಿ.ಜಯಂತಿ ಮಜ್ಜಾರ್ ವೇದಿಕೆಯಲ್ಲಿ ನಡೆದ ೭ ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದು ಬಹಳಷ್ಟು ಮಂದಿ ಈಜು ಗೊತ್ತಿಲ್ಲದೆ ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿರುವುದನ್ನು ನೋಡಿದರೆ ಬಹಳ ದುಃಖವಾಗುತ್ತಿದೆ ಎಂದ ಈಶ್ವರ್ ಮಲ್ಪೆಯವರು ನಾವು ನಮ್ಮ ಮಕ್ಕಳಿಗೆ ಈಜುವುದನ್ನು ಕಲಿಸಿಕೊಟ್ಟರೆ ಅದರಿಂದ ಬಹಳಷ್ಟು ಪ್ರಯೋಜನವಿದೆ. ಇದನ್ನು ಪ್ರತಿಯೊಬ್ಬ ಹೆತ್ತವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಮಜ್ಜಾರಡ್ಕ ಸಂಘಟನೆಯ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ ಅವರು ಸಂಘಟನೆಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸಂಪ್ಯ ಪೊಲೀಸ್ ಠಾಣಾ ಹೆಡ್ ಕಾನ್ಸ್ಸ್ಟೇಬಲ್, ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಪ್ರವೀಣ್ ರೈ ನಡುಕೂಟೇಲು ಮಾತನಾಡಿ, ಮಜ್ಜಾರಡ್ಕ ಸಂಘಟನೆ ಎಲ್ಲಾ ವಿಧದಲ್ಲೂ ಒಂದು ಉತ್ತಮ ಸಂಘಟನೆಯಾಗಿ ಮೂಡಿಬರುತ್ತಿದೆ. ಶ್ರಮ,ಸೇವೆ,ಸಹಾಯದ ಮೂಲಕ ಸಮಾಜಕ್ಕೆ ಒಂದು ಮಾದರಿ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮೂರಿನಿಂದಲೂ ಯುವಕರು ಸರಕಾರಿ ಉದ್ಯೋಗಕ್ಕೆ ಸೇರುವ ಮೂಲಕ ಗ್ರಾಮದ ಅಭಿವೃದ್ದಿಗೆ ನಾಂದಿ ಹಾಡಬೇಕು ಎಂದು ಹೇಳಿ ಶುಭ ಹಾರೈಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ರೈ ಉಜಿರೆಮಾರು ಮಾತನಾಡಿ, ಮನೆಯಿಲ್ಲದವರಿಗೆ ಮನೆ ನಿರ್ಮಾಣ, ಚಿಕಿತ್ಸೆಗೆ ಧನ ಸಹಾಯದಂತಹ ನೂರಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಮಜ್ಜಾರಡ್ಕ ಸಂಘಟನೆಯು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಮಂಗಳೂರು ಶ್ರೀಕಟೀಲ್ ಲಾಜಿಸ್ಟಿಕ್ಸ್ನ ಮಾಲಕ ಜನಾರ್ದನ ಪೂಜಾರಿ ಪದಡ್ಕ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿ ನವ್ಯಾ, ಮಂಗಳೂರು ಬಿಜೆಪಿ ಕಾರ್ಯದರ್ಶಿ ಭರತ್ರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷ ಸದಾಶಿವ ಮಣಿಯಾಣಿ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮನ್ಮಿತ್ ರೈ ಓಲೆಮುಂಡೋವುರವರು ಕೊಡುಗೆಯಾಗಿ ನೀಡಿದ ವೀಲ್ ಚೆಯರ್ ಅನ್ನು ಸಂಘಟನೆಯ ವತಿಯಿಂದ ಈಶ್ವರ್ ಮಲ್ಪೆಯವರಿಗೆ ನೀಡಲಾಯಿತು. ಇದನ್ನು ಅವಶ್ಯವಿರುವವರಿಗೆ ಕೊಡುವಂತೆ ಈಶ್ವರ್ ಮಲ್ಪೆಯವರಲ್ಲಿ ವಿನಂತಿಸಿಕೊಳ್ಳಲಾಯಿತು. ಸಂಘಟನೆಯ ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶೋಭಿತಾ ಭಂಡಾರಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ಸಂಘಟನೆಯ ಸಂಘಟಕ ರಾಜೇಶ್ ಕೆ.ಮಯೂರ ಅತಿಥಿಗಳಿಗೆ ಶಾಲು, ವೀಳ್ಯ ನೀಡಿ ಸ್ವಾಗಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಆಟೋಟ ಸ್ಪರ್ಧೆಗಳು
ಕೆಸರುಡೊಂಜಿ ದಿನದ ಅಂಗವಾಗಿ ವಾಲಿಬಾಲ್, ಮುಕ್ತ ಹಗ್ಗಜಗ್ಗಾಟ ಸೇರಿದಂತೆ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಟ್ರೋಪಿ ನೀಡಿ ಗೌರವಿಸಲಾಯಿತು.
ಮನರಂಜಿಸಿದ ‘ಶಾಂಭವಿ’ ತುಳು ನಾಟಕ
ಸಮಾರೋಪ ಸಮಾರಂಭದ ಬಳಿಕ ಅಭಿನಯ ಕಲಾವಿದರು ಉಡುಪಿ ಅಭಿನಯಿಸಿದ ಸಾಮಾಜಿಕ ನಾಟಕದ ಇತಿಹಾಸದಲ್ಲಿಯೇ ಅದ್ದೂರಿ ರಂಗವಿನ್ಯಾಸದ ‘ಶಾಂಭವಿ’ ಎನ್ನು ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕದ 185ನೇ ಪ್ರಯೋಗ ಮಜ್ಜಾರಡ್ಕದಲ್ಲಿ ನಡೆಯಿತು. ನೂರಾರು ನಾಟಕ ಪ್ರೇಮಿಗಳು ನಾಟಕ ವೀಕ್ಷಿಸಿ ಸಂಭ್ರಮಿಸಿದರು. ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ಆದ್ಯ ಆರ್.ಜೆ ಗೋಳ್ತಿಲ ಮತ್ತು ಶೋಭಿತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕರವರು ತೆಂಗಿನ ಕಾಯಿ ಒಡೆಯುವ ಮೂಲಕ ಕೆಸರುಡೊಂಜಿ ದಿನಕ್ಕೆ ಚಾಲನೆ ನೀಡಿದರು ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಜ್ಜಾರಡ್ಕದ ಯುವಕರ ಬಳಗವು ಒಳ್ಳೆಯ ಸಮಾಜ ಮೆಚ್ಚುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇಂತಹ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಕುತ್ಯಾಡಿ, ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರ.ಕಾರ್ಯದರ್ಶಿ ಸಾರ್ಥಕ್ ರೈ ಪಾಪೆಮಜಲು, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲಾ ಸುರೇಶ್, ಸಂಘಟನೆಯ ಹಿರಿಯ ಸದಸ್ಯ ಲೋಕನಾಥ್ ಪೂಜಾರಿ ಮಜ್ಜಾರು,ಕೆಯ್ಯೂರು ಗ್ರಾಪಂ ಸದಸ್ಯ ಮೀನಾಕ್ಷಿ ವಿ.ರೈ, ಅರಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ, ಸಂಘಟನೆಯ ಗೌರವ ಸಲಹೆಗಾರರಾದ ತಿಮ್ಮಪ್ಪ ಪೂಜಾರಿ ಮಜ್ಜಾರು ಉಪಸ್ಥಿತರಿದ್ದರು. ಸಂಘಟನೆಯ ಉಪಾಧ್ಯಕ್ಷ ಸಮಿತ್ ಮಜ್ಜಾರ್ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಹುಮಾನದ ಪ್ರಾಯೋಜಕರಾದ ಭವಿತ್ ಕುಮಾರ್ ಪಾಲ್ತಾಡಿ ಇವರ ತಾಯಿ ಕಾವೇರಿ ಅಮೆಚ್ಚೋಡು ಮತ್ತು ಕುಣಿತ ಭಜನಾ ತಂಡದ ಪ್ರಾಯೋಜಕರಾದ ಅಜಿತ್ ರೈ ದೇರ್ಲರವರುಗಳಿಗೆ ಸನ್ಮಾನ ನಡೆಯಿತು. ಜೈ ತುಳುನಾಡ್ ಮಂಗಳೂರು ಇದರ ವತಿಯಿಂದ ನಡೆದ ತುಳು ಲಿಪಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಚಿತ್ರಾಕ್ಷಿ ತೆಗ್ಗುರವರು ಪ್ರಮಾಣ ಪತ್ರ ನೀಡಿದರು. ಶೋಭಿತಾ ಭಂಡಾರಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ಶ್ರೀನಿಧಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು ಸಹಕರಿಸಿದ್ದರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮುಳುಗು ತಜ್ಞ ಈಶ್ವರ್ ಮಲ್ಪೆ, ಸಮಾಜ ಸೇವಕ ಚಿಂತು ಸುಳ್ಯ, ಪುತ್ತೂರು ಹಿಂದೂ ರುದ್ರಭೂಮಿಯ ಸೇವಕ ಪಿ.ಬಿ.ಸತೀಶ್ ಮಡಿವಾಳ, ಧಾರ್ಮಿಕತೆಯ ಸಾಹಿತಿ, ವಿಶೇಷ ಚೇತನ ಮೋಹನ್ ದರ್ಬೆತ್ತಡ್ಕ ಹಾಗೂ ಕಾರ್ಯಕ್ರಮಕ್ಕೆ ಅನ್ನದಾನ ಪ್ರಾಯೋಜಕರುಗಳಾದ ಬೆಂಗಳೂರಿನ ಉದ್ಯಮಿಗಳಾದ ಶರತ್ ರೈ ಮತ್ತು ಶ್ರೀಧರ ಶೆಟ್ಟಿಯವರುಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು,ಹಾರ,ಪೇಟಾ, ಫಲಪುಷ್ಪ, ಸ್ಮರಣಿಕೆಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಯುವ ಪ್ರಶಸ್ತಿ ಪ್ರದಾನ
ಪ್ರತಿವರ್ಷ ಸಂಘಟನೆಯ ಓರ್ವ ಸದಸ್ಯರಿಗೆ ಯವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು 2024ನೇ ಸಾಲಿನ ಯುವ ಪ್ರಶಸ್ತಿಯನ್ನು ವಿನೋದ್ ಸ್ವಾಮಿನಗರರವರಿಗೆ ಪ್ರದಾನ ಮಾಡಲಾಯಿತು. ಶಾಲು,ಪೇಟಾ,ಫಲಪುಷ್ಪ,ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಿ.ಜಗದೀಶ್ ಕೋಡಿಯಡ್ಕ ನೆನಪಲ್ಲಿ ಸ್ಕಾಲರ್ಶಿಫ್
ಸಂಘಟನೆಯ ಸಕ್ರೀಯ ಕಾರ್ಯಕರ್ತ ಹಾಗೇ ಕ್ರೀಡಾ ಕಾರ್ಯದರ್ಶಿಯಾಗಿದ್ದು ರಸ್ತೆ ಅಪಘಾತದಲ್ಲಿ ವಿಧಿವಶರಾದ ಜಗದೀಶ್ ಕೋಡಿಯಡ್ಕರವರಿಗೆ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿಶೇಷವಾಗಿ ಜಗದೀಶ್ರವರ ನೆನಪಲ್ಲಿ 81 ಸಾವಿರ ರೂಪಾಯಿಗಳನ್ನು ಈಗಾಗಲೇ ಸಂಗ್ರಹ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ತಿಂಗಳಾಡಿ ಶಾಲೆಯ ಪ್ರತಿಭಾನಿತ ವಿದ್ಯಾರ್ಥಿಗಳಿಗೆ ಜಗದೀಶ್ ಕೋಡಿಯಡ್ಕರವರ ಸ್ಮರಣಾರ್ಥ ಸ್ಕಾಲರ್ಶಿಫ್ ನೀಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿಸುವ ಕೆಲಸವನ್ನು ಸಂಘಟನೆಯ ವತಿಯಿಂದ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು.
‘ಸಂಘಟನೆಯ ಗೌರವಾಧ್ಯಕ್ಷ ಓಲೆಮುಂಡೋವು ಮೋಹನ್ ರೈಯವರಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ್ದ ಸರ್ವರಿಗೂ ಸಂಘಟನೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತಾ, ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ರಾಜೇಶ್ ಕೆ.ಮಯೂರ, ಸಂಘಟಕ, ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ