ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಆನಾಜೆ ವೀರಮಂಗಲ ಇವರ ಸಹಕಾರದೊಂದಿಗೆ 24ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ಕ್ರೀಡಾ ಸಂಭ್ರಮವು ಡಿ.8 ರಂದು ವೀರಮಂಗಲ ಪಿ.ಎಂ.ಶ್ರೀ ಸ.ಹಿ.ಪ್ರಾ ಶಾಲೆ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾ ಸಂಭ್ರಮವನ್ನು ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರ್ಷ ಗುತ್ತು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಪ್ರಾಥಮಿಕ ಶಾಲಾ ಕಿರಿಯ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, ಚಕ್ಕುಲಿ ಆಟ, ಹಿರಿಯ ವಿದ್ಯಾರ್ಥಿಗಳಿಗೆ ಚೆಂಡು ಎಸೆತ, ಬಿಸ್ಕೆಟ್ ಆಟ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೈಲು ಓಟ, ಸಂಗೀತ ಕುರ್ಚಿ, ವಿದ್ಯಾರ್ಥಿನಿಯರಿಗೆ ದಾಸರ ಪದ ಸಂಗೀತ ಕುರ್ಚಿ, ಮಹಿಳೆಯರಿಗೆ ಹಗ್ಗಜಗ್ಗಾಟ, ಇನ್ನಿತರ ಮನೋರಂಜನಾ ಆಟಗಳು, ಸ್ಥಳೀಯ ಪುರುಷರಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಹಾಗೂ ಪುರುಷರ 58 ಕೆಜಿ ವಿಬಾಗದ ಕಬಡ್ಡಿ ಪಂದ್ಯಾಟ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ಮಾತನಾಡಿ, ಸಂಘ-ಸಂಸ್ಥೆಗಳು ಮರವಿದ್ದಂತೆ. ಸದಸ್ಯರು ಅದರಲ್ಲಿರುವ ಎಲೆಗಳಂತೆ. ಮರದಲ್ಲಿರುವ ಎಲ್ಲಾ ಎಲೆಗಳು ಒಟ್ಟು ಸೇರಿದಾಗ ನೆರಳಾಗುವಂತೆ ಸಂಘದ ಸದಸ್ಯರೆಲ್ಲರೂ ಒಟ್ಟು ಸೇರಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು. ವೀರಮಂಗಲ ಮಹಾವಿಷ್ಣು ಸೇವಾ ಸಮಿತಿಯಿಂದ ಕಳೆದ 23 ವರ್ಷಗಳಿಂದ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಸಂಘಟನೆ ಮೂಲಕ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದೆ. ಜಾತಿ, ಧರ್ಮ ಬೇಧವಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯ ಜೊತೆಗೆ ಮನೋರಂಜನೆ, ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲೆಯ ಸಹ ಶಿಕ್ಷಕ ವಿಜಯ ಕುಮಾರ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ವ್ಯಾಯಾಮ ದೊರೆಯುತ್ತದೆ. ಎಲ್ಲಾ ನೋವು-ನಲಿವುಗಳನ್ನು ಮರೆತು ಕ್ರೀಡಾಕೂಟದಲ್ಲಿ ಭಾಗವಹಿಸಲಾಗುತ್ತಿದೆ. ಕೆಲವೊಂದು ಕ್ರೀಡೆಯಿಂದ ಸಾಕಷ್ಟು ಮನರಂಜನೆಯೂ ದೊರೆಯುತ್ತಿದೆ. ಕ್ರೀಡಾಕೂಟದ ಆಯೋಜನೆಯ ಮೂಲಕ ಸಮಾಜದಲ್ಲಿ ಉತ್ತಮ ಸಂಘಟನೆಗೆ ಸಹಕಾರಿಯಾಗಲಿದೆ ಎಂದರು.
ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರ್ಷ ಗುತ್ತು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಪ್ರತಿಯೊಬ್ಬರಿಗೂ ಭಾಗವಹಿಸುವ ಅವಕಾಶ ನೀಡಲಾಗುತ್ತಿದೆ. ಆ ಮೂಲಕ ಗ್ರಾಮೀಣ ಪ್ರತಿಭೆಗಳು ಬೆಳೆಯಲು ಮಹಾವಿಷ್ಣು ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾವತಿ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಪವಿತ್ರ ಕೆ.ಪಿ., ಮಹಾವಿಷ್ಣು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ರೂ.2000, ದ್ವಿತೀಯ ರೂ.1000 ನಗದು ಹಾಗೂ ಶಾಶ್ವತ ಫಲಕ, ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ರೂ.5,555, ದ್ವಿತೀಯ 4,444, ತೃತೀಯ ರೂ.2,222, ಚತುರ್ಥ ರೂ.2,222 ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು. ಮಕ್ಕಳು ಹಾಗೂ ಮಹಿಳೆಯರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಸ್ಮಿತಾ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ವೀರಮಂಗಲ ವಂದಿಸಿದರು.