ಸುವರ್ಣ ಸೌಧದ ಬಳಿ ನೆಟ್ಟಿದ್ದ ಗಿಡಕ್ಕೆ ಒಂದು ವರ್ಷ- ಪರಿಶೀಲಿಸಿದ ಪುತ್ತೂರು ಶಾಸಕ ಅಶೋಕ್ ರೈ

0

ಪುತ್ತೂರು: ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದಲ್ಲಿ ಭಾಗಿಯಾದ ದಿನದಂದು ಆ ಸವಿನೆನಪಿಗೋಸ್ಕರ ಸುವರ್ಣ ಸೌಧದ ಬಳಿ ಗಿಡವೊಂದನ್ನು ನೆಟ್ಟಿದ್ದು ಆ ಗಿಡವನ್ನು ಒಂದು ವರ್ಷದ ಬಳಿಕ ವೀಕ್ಷಣೆ ಮಾಡಿದ ಪುತ್ತೂರು ಶಾಸಕ ಅಶೋಕ್‌ರೈ ಅವರು ಅದಕ್ಕೆ ಗೊಬ್ಬರ ಹಾಕಿ ನೀರು ಹಾಕುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದರು.

ಪರಿಸರ ಹಾಗೂ ಅದರಲ್ಲೂ ವಿಶೇಷವಾಗಿ ಫಲವಸ್ತುಗಳ ಗಿಡವನ್ನು ಕಡಿಯಬಾರದು ಅವುಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ತಿಂಗಳಲ್ಲೇ ತನ್ನ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದರು. ಕಳೆದ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಕಾಟು ಮಾವು ಹಾಗೂ ಹಲಸಿನ ಗಿಡವನ್ನು ನಾಟಿ ಮಾಡಿಸಿದ್ದರು. ರಸ್ತೆ ಬದಿಯಲ್ಲಿರುವ ಕಾಟುಮಾವು, ಹಲಸಿನ ಗಿಡವನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಮತ್ತು ಕಾಟು ಮಾವು ಆಗುವ ಸಂದರ್ಭದಲ್ಲಿ ಮಾವಿನ ಮಿಡಿಗಾಗಿ ಮರವನ್ನು ಏಲಂ ಕರೆಯದಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಶಾಸಕನಾಗಿ ಆಯ್ಕೆಯಾದ ಬಳಿಕ ಸುವರ್ಣ ಸೌಧದಲ್ಲಿ ನಡೆದ ಅಶೋಕ್ ರೈ ಅವರ ಮೊದಲ ಅಧಿವೇಶನದ ನೆನಪಿಗಾಗಿ ಸೌಧದ ಪಕ್ಕದಲ್ಲೇ ಹಲಸಿನ ಗಿಡವನ್ನು ನೆಟ್ಟಿದ್ದರು. ಮಂಗಳವಾರದಂದು ಗಿಡವನ್ನು ಪರಿಶೀಲನೆ ಮಾಡಿದ ಶಾಸಕರು ಗಿಡಕ್ಕೆ ಗೊಬ್ಬರ ಹಾಗೂ ನೀರು ಹಾಕಿದ್ದಾರೆ ಇವರ ಜೊತೆ ಅಧಿಕಾರಿಗಳೂ ಉಪಸ್ಥಿತರಿದ್ದರು.

ಸುವರ್ಣ ಸೌಧದಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ಭಾಗವಹಿಸಿದ ಸವಿನೆನಪಿಗೋಸ್ಕರ ಸೌಧದ ಬಳಿ ಹಲಸಿನ ಗಿಡವೊಂದನ್ನು ನೆಟ್ಟಿದ್ದೆ. ಗಿಡ ನೆಟ್ಟು ಒಂದು ವರ್ಷದ ಬಳಿಕ ಅದನ್ನು ಪರಿಶೀಲನೆ ಮಾಡಿದೆ, ಗಿಡ ಚೆನ್ನಾಗಿ ಬೆಳೆದಿದೆ. ಅದಕ್ಕೆ ಗೊಬ್ಬರ ಮತ್ತು ನೀರು ಹಾಕಿ ಪೋಷಣೆ ಮಾಡುವಂತೆ ಸೂಚಿಸಿದ್ದೇನೆ. ಆ ಮರ ಬೆಳೆದು ದೊಡ್ಡದಾದರೆ ಅದುವೇ ನನಗೆ ದೊಡ್ಡ ಸಂತೋಷ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಮುಂದಿನ ದಿನಗಳಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಿ ರಸ್ತೆ ಬದಿಯಲ್ಲಿ ಖಾಲಿ ಇರುವ ಜಾಗದಲ್ಲಿ ಫಲವಸ್ತು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇನೆ ಇದಕ್ಕಾಗಿ ಪರಿಸರ ಪ್ರೇಮಿ ಸಾರ್ವಜನಿಕ ಸಂಪೂರ್ಣ ಸಹಕಾರವನ್ನು ಬೇಡುತ್ತಿದ್ದೇನೆ.

ಶಾಸಕ ಅಶೋಕ್ ರೈ

LEAVE A REPLY

Please enter your comment!
Please enter your name here