ಆಳ್ವಾಸ್ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕೋತ್ಸವಕ್ಕೆ ಅದ್ದೂರಿ ಚಾಲನೆ:ದೇಶದ ಸಂಸ್ಕೃತಿಯನ್ನು ಗೌರವಿಸುವುದು ಅತೀಮುಖ್ಯ-ಡಾ|ಹೆಗ್ಗಡೆ

0

ಮಂಗಳೂರು:ದೇಶದ ಸಂಸ್ಕೃತಿಯನ್ನು ಗೌರವಿಸುವುದು ಅತೀಮುಖ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ,ರಾಜ್ಯಸಭಾ ಸಂಸದರೂ ಆಗಿರುವ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ನುಡಿದರು.
ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ 30ನೇ ವರುಷದ ಆಳ್ವಾಸ್ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕೋತ್ಸವ 30ನೇ ಆವೃತ್ತಿಯ ಆಳ್ವಾಸ್ ವಿರಾಸತ್ ವೈಭವವನ್ನು ದೀಪ ಪ್ರಜ್ವಲನಗೊಳಿಸುವ ಮೂಲಕ ಡಾ|ಹೆಗ್ಗಡೆಯವರು ಉದ್ಘಾಟಿಸಿ ಮಾತನಾಡಿದರು.

ವಿರಾಸತ್ ಶಬ್ಧವೇ ಒಂದು ಸಂಭ್ರಮವಾದದ್ದು, ಇದು ವಿಶ್ವವನ್ನು ಪ್ರತಿನಿಧಿಸುತ್ತದೆ, ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ.ಇದೊಂದು ಅಭೂತಪೂರ್ವ ಕಾರ್ಯಕ್ರಮ.ಅವಿಭಜಿತ ದಕ್ಷಿಣ ಕನ್ನಡ ಜನತೆಯ ಕಲಾಸಕ್ತರ ಹೃದಯ ಬೆಸೆಯುವ ಕಾರ್ಯಕ್ರಮ ಎಂದು ಡಾ|ವೀರೇಂದ್ರ ಹೆಗ್ಗಡೆಯವರು ವಿಶ್ಲೇಷಿಸಿದರು.ಸಂಸ್ಕೃತಿ ಮತ್ತು ಕಲೆಯನ್ನು ಬೆಸೆಯುವ ಕಾರ್ಯಕ್ರಮ ಈ ವಿರಾಸತ್ ಎಂದು ಹೇಳಿದ ಡಾ|ಹೆಗ್ಗಡೆಯವರು, ಸಮಾಜದ ಪ್ರತಿಯೊಬ್ಬರ ಮನಸ್ಸು ಅರಳುವಂತಾಗಬೇಕು, ಈ ನಿಟ್ಟಿನಲ್ಲಿ ಡಾ.ಎಂ.ಮೋಹನ ಆಳ್ವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಸಿದರು.ಸಮಾಜದಲ್ಲಿ ಸಾಂಸ್ಕೃತಿಕ ಸಂಪತ್ತು ಹೆಚ್ಚಾಗಬೇಕು.ಇದಕ್ಕಾಗಿ ಸಂಕಲ್ಪ ಮಾಡಬೇಕು.

ಆಳ್ವಾಸ್ ವಿರಾಸತ್ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ, ನೆಲ, ಜಲ, ಸಂಸ್ಕೃತಿಯನ್ನು ಉದ್ದೀಪನಗೊಳಿಸುವ ಮಹತ್ಕಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಡಾ|ವೀರೇಂದ್ರ ಹೆಗ್ಗಡೆಯವರ, ಪ್ರತಿಯೊಂದು ಮನೆಯಲ್ಲಿ ಹಸಿರು ನಳನಳಿಸುವಂತಾಗಲಿ, ಹೂಗಿಡಗಳು ಬೆಳೆಯಲಿ, ಕೃಷಿ ಸಂಸ್ಕೃತಿ ಉಳಿಯಲಿ. ಭೂಮಿ, ಪ್ರಕೃತಿಯ ಪ್ರೀತಿ ಪ್ರತಿಯೊಬ್ಬರಲ್ಲಿ ಮೂಡಲಿ ಎಂದು ಆಶಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕೋತ್ಸವ ದ.10ರಂದು ಸಂಜೆ ವಿಧ್ಯುಕ್ತವಾಗಿ ಪ್ರಾರಂಭಗೊಂಡಿತು.ನಲುವತ್ತು ಸಹಸ್ರಕ್ಕೂ ಮೀರಿದ ಕಲಾಸಕ್ತರ ಕರತಾಡನ ಮುಗಿಲು ಮುಟ್ಟಿತ್ತು.ತನ್ಮೂಲಕ ಸಾರ್ಥಕ ಮೂವತ್ತನೇ ವರ್ಷದ ವಿರಾಸತ್‌ಗೆ ಮುನ್ನುಡಿ ಬರೆಯಲಾಯಿತು.ಪುತ್ತಿಗೆಯ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿರುವ ಬೃಹತ್ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭ ಹೊಸ ದಾಖಲೆಗೆ ಪಾತ್ರವಾಯಿತು.ಮುಸ್ಸಂಜೆ ಸಮಯ ಗಂಟೆ 5.30 ಆಗುತ್ತಿದ್ದಂತೆಯೇ ಆರಂಭಗೊಂಡ ಕಾರ್ಯಕ್ರಮ ಡಾ.ಎಂ.ಮೋಹನ ಆಳ್ವರ ಸಮಯ ಪ್ರಜ್ಞೆ ಮತ್ತು ಶಿಸ್ತಿಗೆ ಕೈಗನ್ನಡಿಯಾಯಿತು.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯದ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪಿನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಪ್ರಸನ್ನ ಕುಮಾರ್ ಶೆಟ್ಟಿ, ಎಂ.ರವೀಂದ್ರನಾಥ ಆಳ್ವ, ಐಕಳ ಹರೀಶ್ ಶೆಟ್ಟಿ, ಮಿಥುನ್ ರೈ, ಜಯಶ್ರೀ ಅಮರನಾಥ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಉದ್ಯಮಿ ಮುಸ್ತಾಫ ಎಸ್.ಎಂ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭವ್ಯ ಸಾಂಸ್ಕೃತಿಕ ಮೆರವಣಿಗೆ ಸೇರಿದ್ದ ಸಹಸ್ರ ಸಹಸ್ರ ಸಂಖ್ಯೆಯ ಕಲಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.ರಾತ್ರಿ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಥಾರತಿ ನಡೆದವು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಅಂಚೆ ಚೀಟಿ ಬಿಡುಗಡೆ: ಆಳ್ವಾಸ್ ವಿರಾಸತ್ 30ನೇ ಆವೃತ್ತಿಯ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಚೀಟಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here