ಮಹನೀಯರ ಜಯಂತಿ,ಸಾವುಗಳಿಗೆ ರಜೆ ಬೇಕೇ? ಅಥವಾ ಆಚರಣೆಯೊಂದಿಗೆ ಕೆಲಸ ಜಾಸ್ತಿ ಮಾಡಬೇಕೇ? ಎಂದು ಸುದ್ದಿ ಬಿಡುಗಡೆ ಸಂಪಾದಕ ಡಾ.ಯು.ಪಿ.ಶಿವಾನಂದ ಅವರು, 2018ರಲ್ಲಿ ಕೇಂದ್ರ ಸಚಿವ ಅನಂತ ಕುಮಾರ ನಿಧನದ ಹಿನ್ನೆಲೆಯಲ್ಲಿ ಸರಕಾರ ರಜೆ ಘೋಷಿಸಿದ್ದ ಸಂದರ್ಭ ಬರೆದಿದ್ದ (3-12-2018)‘ರಜೆ ಬದಲು ಕೆಲಸ ಜಾಸ್ತಿ ಮಾಡಲಿ’-ಅಬ್ದುಲ್ ಕಲಾಂ ಆದರ್ಶಕ್ಕೆ ವ್ಯಾಪಕ ಬೆಂಬಲ: ಜಯಂತಿಗೆ, ಸಾವಿಗೆ ರಜೆ ಬೇಡ,ಕಾನೂನು ಆಗಲು ಕೋರ್ಟ್‌ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಲಿ’ ಎಂಬ ಲೇಖನಕ್ಕೆ ಓದುಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.ಆ ನಂತರ ಡಾ|ಶಿವಗಂಗಾಶ್ರೀ ಶಿವಕುಮಾರ ಸ್ವಾಮಿಯವರ ನಿಧನದ ಸಂದರ್ಭ ಸರಕಾರ ರಜೆ ಘೋಷಿಸಿದಾಗ ಬರೆದಿದ್ದ(22-01-2019)‘ಗಣ್ಯರ ನಿಧನಕ್ಕೆ ರಜೆ ಘೋಷಣೆ ಗೌರವವಲ್ಲ.ಆ ಸಂಪ್ರದಾಯದ ವಿರುದ್ಧ ಹೋರಾಡುವ ಅಗತ್ಯವಿದೆ ಎಂಬ ಸಂಪಾದಕೀಯ ಲೇಖನಕ್ಕೂ ವ್ಯಾಪಕ ಜನಬೆಂಬಲ ವ್ಯಕ್ತವಾಗಿತ್ತು.ಇದೀಗ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಜೆ ಘೋಷಣೆ ಮಾಡಿರುವ ಸಂದರ್ಭವೂ ಈ ಲೇಖನ ಅನ್ವಯವಾಗುವ ಕಾರಣದಿಂದ ಅಂದು ಪ್ರಕಟಗೊಂಡಿದ್ದ ಸಂಪಾದಕೀಯ ಲೇಖನವನ್ನು ಯಥಾವತ್ತಾಗಿ ಮರು ಪ್ರಕಟ ಮಾಡಲಾಗಿದೆ- ಸಂ.
‘ರಜೆ ಬದಲು ಕೆಲಸ ಜಾಸ್ತಿ ಮಾಡಲಿ’- ಅಬ್ದುಲ್ ಕಲಾಂ ಆದರ್ಶಕ್ಕೆ ವ್ಯಾಪಕ ಬೆಂಬಲ
ಜಯಂತಿಗೆ, ಸಾವಿಗೆ ರಜೆ ಬೇಡ, ಕಾನೂನು ಆಗಲು ಕೋರ್ಟ್‌ನಲ್ಲಿ P.I.L. ಅರ್ಜಿ ಸಲ್ಲಿಸಲಿ
ಮಹಾತ್ಮರ ಜಯಂತಿ ಮತ್ತು ಸಾವುಗಳಿಗೆ ರಜೆ ಕೊಡುವ ಬದಲು ಅವರ ಆದರ್ಶಗಳ ಆಚರಣೆಗೆ ಪ್ರಾಶಸ್ತ್ಯ ನೀಡಿ ಅವರ ಹೆಸರಿನಲ್ಲಿ ದೇಶದ ಅಭಿವೃದ್ಧಿಗೆ ಹೆಚ್ಚು ದುಡಿಯೋಣ ಎಂಬ ಸಂಪಾದಕೀಯಕ್ಕೆ ಹಾಗೂ ಖ್ಯಾತ ವಿಜ್ಞಾನಿ, ದೇಶದ ಮಾಜಿ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಹೇಳಿದ್ದ ‘ನನ್ನ ಸಾವಿಗೆ ರಜೆ ಕೊಡಬೇಡಿ, ಒಂದು ಗಂಟೆ ಹೆಚ್ಚು ದುಡಿಯಿರಿ’ ಎಂಬ ಆದರ್ಶಕ್ಕೆ ವ್ಯಾಪಕ ಬೆಂಬಲ ದೊರಕಿದೆ. ಜನರ ಮನಸ್ಸಿನಲ್ಲಿದ್ದ ಭಾವನೆಗಳನ್ನು ಹೊರತಂದ ‘ಸುದ್ದಿ’ ಪತ್ರಿಕೆಯ ಕೆಲಸ ಶ್ಲಾಘನೆಗೆ ಕಾರಣವಾಗಿದೆ.
ಈ ವ್ಯಾಪಕ ಜನಾಭಿಪ್ರಾಯ ಕಾರ‍್ಯರೂಪಕ್ಕೆ ಬರುವಂತಾಗಬೇಕಾದರೆ ಜನಪ್ರತಿನಿಧಿಗಳನ್ನು ಮತ್ತು ಆಡಳಿತದವರನ್ನು ತಲುಪಬೇಕಿದೆ. ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಯವರಿಗೂ ತಲುಪಿಸಬೇಕಿದೆ. ಅದರೊಂದಿಗೆ ಅದಕ್ಕೊಂದು ಕಾನೂನಿನ ಶಾಶ್ವತ ಚೌಕಟ್ಟು ದೊರಕುವಂತಾಗಲು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಕೇಸನ್ನು (P.I.L.) ಎತ್ತಿಕೊಳ್ಳಲು ಯಾರಾದರು ಮುಂದೆ ಬರಬೇಕು. ಅದಕ್ಕೆ ಬೀಳಬಹುದಾದ ಖರ್ಚನ್ನು ಸಾರ್ವಜನಿಕ ವತಿಯಿಂದ ಮತ್ತು ‘ಸುದ್ದಿ ಮಾಹಿತಿ ಟ್ರಸ್ಟ್’ ವತಿಯಿಂದ ಭರಿಸಿ ಮಾಡಬಹುದು ಎಂಬ ಅಭಿಪ್ರಾಯವನ್ನು ಜನರ ಮುಂದಿಡಲು ಬಯಸುತ್ತೇವೆ.
____________________________________________________________________
ಗಣ್ಯರ ನಿಧನಕ್ಕೆ ರಜೆ ಘೋಷಣೆ ಗೌರವವಲ್ಲ,
ಆ ಸಂಪ್ರದಾಯದ ವಿರುದ್ಧ ಹೋರಾಡುವ ಅಗತ್ಯವಿದೆ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತನ್ನ ನಿಧನಕ್ಕೆ ರಜೆ ನೀಡಬೇಡಿ ಹೆಚ್ಚು ಕೆಲಸ ಮಾಡಿ ಎಂದು ಹೇಳಿದ್ದರೂ, ವಿದೇಶಗಳಲ್ಲಿ ಗಣ್ಯರು ನಿಧನರಾದಾಗ ರಜೆ ನೀಡುವುದಿಲ್ಲ ಅವರಿಗೆ ಗೌರವಾರ್ಥವಾಗಿ ಹೆಚ್ಚು ಕೆಲಸ ಮಾಡುತ್ತಾರೆ ಎಂದು ತಿಳಿದಿದ್ದರೂ ಮಹನೀಯರು ಮೃತರಾದಾಗ ರಜೆ ಘೋಷಣೆ ಮಾಡುವುದು ಅತ್ಯಂತ ಕೆಟ್ಟ ಸಂಪ್ರದಾಯ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಡಾ.ಶಿವಗಂಗಾಶ್ರೀ ಶಿವ ಕುಮಾರ ಸ್ವಾಮೀಜಿಯವರ ನಿಧನಕ್ಕೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಿರುವುದಕ್ಕೆ ಕಾರಣ ಏನು?. ಆ ರೀತಿಯ ರಜೆಗಳು ಜನರ ಕಷ್ಟ ನಷ್ಟಗಳನ್ನು ಜಾಸ್ತಿ ಮಾಡುತ್ತದೆ (ಹೆಚ್ಚು ಕೆಲಸ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ) ಎಂದು ತಿಳಿದಿದ್ದರೂ ಕಾಯಕವೇ ಕೈಲಾಸ ಎಂದು ನಂಬಿದ್ದ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಕೊಟ್ಟಿದ್ದ ಡಾ.ಸಿದ್ಧಗಂಗಾಶ್ರೀಯವರಂತಹ ಸಂತರ ಮರಣಕ್ಕೆ ರಜೆ ಘೋಷಣೆ ಮಾಡಿದ್ದು ಅವರಿಗೆ ಸಂದ ಗೌರವವಲ್ಲ ಎಂದು ಖಡಾ ಖಂಡಿತವಾಗಿ ತಿಳಿಸುವ ಕಾಲ ಬಂದಿದೆ. ರಾಜಕೀಯದ ಕಾರಣಕ್ಕಾಗಿ ಮಹನೀಯರುಗಳು ನಿಧನರಾದಾಗ ಆ ರೀತಿ ರಜೆಗಳನ್ನು ನೀಡುತ್ತಾ ಬಂದರೆ ರಜೆಗಳು ಎಷ್ಟಾಗಬಹುದು?. ಜನ ಸಾಮಾನ್ಯರ ಪಾಡು ಏನಾಗಬಹುದು? ದೇಶದ ಅಭಿವೃದ್ಧಿಯಾಗಲು ಸಾಧ್ಯವೇ? ಆ ಕೆಟ್ಟ ಸಂಪ್ರದಾಯ ನಿಲ್ಲಬೇಕು ಎಂದು ಈಗಾಗಲೇ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಕಾನೂನು ರೀತಿಯಲ್ಲಿ ಉಚ್ಛ ನ್ಯಾಯಾಲಯಕ್ಕೆ ಹೋಗುವ ಮೂಲಕವಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲೇ ಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಇರುವುದರಿಂದ ಈ ಕಾರ್ಯಕ್ಕೆ ಯಾರಾದರೂ ಮುಂದೆ ಬಂದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಲು ಇಚ್ಛಿಸುತ್ತೇವೆ.