ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಗುರುಶ್ರೀ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ, ಉಡುಗೊರೆ ವಿತರಣೆ

0

ಆಲಂಕಾರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಗುರುಶ್ರೀ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ಹಾಗೂ ಉಡುಗೊರೆ ವಿತರಣೆ ಕಾರ್ಯಕ್ರಮ ಡಿ.8ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನ ದಯಾಳು ಉಪಾಧ್ಯಾಯ ರೈತ ಸಭಾಭವನದಲ್ಲಿ ನಡೆಯಿತು.


ದೀಪ ಪ್ರಜ್ವಲಿಸಿದ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಚಂದ್ರ ರೈ ಅವರು ಮಾತನಾಡಿ, ಸ್ವಸಹಾಯ ಸಂಘಗಳು ಸದಸ್ಯರ ಆರ್ಥಿಕ ಪುನಶ್ಚೇತನ ಹಾಗೂ ಸದಸ್ಯರ ಕುಟುಂಬದ ಅಭಿವೃದ್ಧಿಯ ಜೊತೆಗೆ ಸಂಘದ ಅಭಿವೃದ್ಧಿಯಲ್ಲೂ ಪೂರಕವಾಗಿರುತ್ತವೆ. ಸ್ವಸಹಾಯಗಳನ್ನು ಆರಂಭಿಸಿ ಅದರ ಸದಸ್ಯರಿಗೆ ಲಾಭಾಂಶದ ಜೊತೆಗೆ ಉಡುಗೊರೆ ನೀಡುವಂತಹ ವ್ಯವಸ್ಥೆ ಯಾವುದೇ ಬೇರೆ ಸಂಘ ಸಂಸ್ಥೆಗಳಲ್ಲಿ ಇಲ್ಲ. ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.


ಲಾಭಾಂಶ ವಿತರಣೆ ಮಾಡಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ ಅವರು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲೀಕರಣ ಸಾಧ್ಯವಿದೆ. ಆಲಂಕಾರು ಮೂರ್ತೆದಾರರ ಸಹಕಾರ ಸಂಘದಲ್ಲಿ 82 ಗುರುಶ್ರೀ ಸ್ವಸಹಾಯ ಸಂಘಗಳಲ್ಲಿ 774 ಮಂದಿ ತೊಡಗಿಕೊಂಡಿರುವುದು ಸಂಘದ ಬೆಳವಣಗೆಯಲ್ಲೂ ಪೂರಕವಾಗಿದೆ ಎಂದರು.
ಗುರುಶ್ರೀ ಸ್ವಸಹಾಯ ಸಂಘದ ಸದಸ್ಯರಿಗೆ ಉಡುಗೊರೆ ವಿತರಣೆ ಮಾಡಿ ಮಾತನಾಡಿದ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು, ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಳದ ವ್ಯಾಪ್ತಿಗೆ ಬರುವ 18 ಮೂರ್ತೆದಾರರ ಸೇವಾ ಸಹಕಾರ ಸಂಘಗಳ ಪೈಕಿ ಆಲಂಕಾರು ಸಂಘವು ಅತ್ಯುತ್ತಮ ಸಹಕಾರ ಸಂಘವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಸಹಾಯ ಸಂಘ ಸೇರಿದವರಲ್ಲಿ ಯಾರೂ ಸೋತವರಿಲ್ಲ. ಇದರಿಂದ ಸಂಘವೂ ಸೋತಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸ್ವಸಹಾಯ ಸಂಘಗಳ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಅತಿಥಿಯಾಗಿದ್ದ ದ.ಕ.ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಅವರು ಮಾತನಾಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕಾರ್ಯಚಟುವಟಿಕೆಗಳನ್ನು ಅತೀ ಸಮೀಪದಿಂದ ಗಮನಿಸಿದ್ದೇನೆ. ಈ ಸಂಘ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ ಕಂಡಿದೆ ಎಂದು ಮೆಚ್ಚುಗೆ ಸೂಚಿಸಿದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಅವರು ಮಾತನಾಡಿ, 1991ರಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘ ಸ್ಥಾಪನೆಗೊಂಡಿದ್ದು 2005ರಲ್ಲಿ ಬ್ಯಾಂಕಿAಗ್ ಸೇವೆ ಪ್ರಾರಂಭಿಸಲಾಯಿತು. 2008ರಲ್ಲಿ ಸ್ವಸಹಾಯ ಸಂಘ ಪ್ರಾರಂಭಿಸಲಾಗಿದೆ. ಪ್ರಸ್ತುತ 82 ಸ್ವಸಹಯ ಸಂಘಗಳಿದ್ದು 777 ಸದಸ್ಯರಿದ್ದಾರೆ. 82.28 ಲಕ್ಷ ರೂ.ಉಳಿತಾಯವಾಗಿದೆ. ಕಳೆದ 3 ವರ್ಷದ ಅವಧಿಯಲ್ಲಿ 2.03 ಕೋಟಿ ರೂ.ಆಂತರಿಕ ಸಾಲ ವಿತರಣೆಯಾಗಿದೆ. 47 ಸಂಘಗಳು ಬ್ಯಾಂಕ್ ಸಾಲ ಪಡೆದುಕೊಂಡಿದೆ. 1,33,89,000 ರೂ. ಬ್ಯಾಂಕ್ ಸಾಲ ವಿತರಣೆಯಾಗಿದೆ ಎಂದ ಅವರು ಕಳೆದ ಮೂರು ವರ್ಷದ ಅವಧಿಯಲ್ಲಿ 16,16,401 ರೂ.ಲಾಭಾಂಶ ಬಂದಿದೆ. ಈ ಲಾಭಾಂಶವನ್ನು ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗುವುದು. ಜೊತೆಗೆ ಸಂಘದ ವತಿಯಿಂದ ಉಡುಗೋರೆ ನೀಡಲಾಗಿದೆ. ಸ್ವಸಹಾಯ ಸಂಘಗಳ ಸದಸ್ಯರು ತಾವು ಅಭಿವೃದ್ದಿಯಾಗುವುದರೊಂದಿಗೆ ಸಂಘದ ಅಭಿವೃದ್ಧಿಗೂ ಕೈಜೋಡಿಸಬೇಕೆಂದು ಹೇಳಿದರು.


ಅತಿಥಿಗಳಾಗಿದ್ದ ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ಬಿ.ಸಿ.ರೋಡ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಕುಂತೂರುಪದವು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜು ಕೆ.ಎಸ್., ಅವರು ಶುಭಹಾರೈಸಿದರು. ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸಂತೋಷ್‌ಕುಮಾರ್ ಮತ್ರಾಡಿ, ಗಂಗಾರತ್ನ ವಸಂತ ಅಗತ್ತಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ಸಂತೋಷ್‌ಕುಮಾರ್ ಮತ್ರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಜಯಕರ ಪೂಜಾರಿ ಕಲ್ಲೇರಿ ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ ವಂದಿಸಿದರು. ಶಾಖಾ ವ್ಯವಸ್ಥಾಪಕ ಮಿಥುನ್ ಸುಂದರ್ ನಿರೂಪಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್ ಹಾಗೂ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಸ್ವಾತಿ ಮತ್ತು ಚೈತನ್ಯ ಪ್ರಾರ್ಥಿಸಿದರು. ಸಂಘದ ಶಾಖಾ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here