ಪುತ್ತೂರು: ಗುಜರಾತ್ ರಾಜ್ಯದ ಸೂರತ್ ಸಮೀಪದ ಬಚೂರದಲ್ಲಿ ಡಿ.11ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿ ಸಹಿತ ಇಬ್ಬರು ಮೃತಪಟ್ಟು ಕಲ್ಲಡ್ಕ ನಿವಾಸಿ ಸಹಿತ ನಾಲ್ವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕೆಆರ್ಎಸ್ ಪಕ್ಷದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ,ಚಾರ್ಮಾಡಿಯ ಆದಂ ಎಂಬವರ ಪುತ್ರ ಷರೀಫ್ ಮೂಸಕುಂಞ(46ವ) ಹಾಗೂ ಕೆಆರ್ಎಸ್ ಪಕ್ಷದ ರಾಜ್ಯ ಮುಖಂಡರಾಗಿದ್ದ ಮಂಡ್ಯ ಮೂಲದ ಲಿಂಗೇಗೌಡ ಎಂಬವರು ಮೃತಪಟ್ಟಿದ್ದಾರೆ.
ಕಲ್ಲಡ್ಕದ ಪ್ರವೀಣ್ ಪಿರೇರಾ,ಮಂಗಳೂರಿನ ಬಾಲಕೃಷ್ಣ, ಬೆಳ್ತಂಗಡಿ ಮೂಲದ ಅಮ್ಜದ್ ಮತ್ತು ನೌಫಲ್ ಎಂಬವರು ಗಾಯಗೊಂಡಿದ್ದಾರೆ.ಕೆ.ಆರ್.ಎಸ್.ಪಕ್ಷದ ನೇತೃತ್ವದಲ್ಲಿ ನಡೆದ `ಸ್ಟಾಪ್ ರೇಪ್’ ಪ್ರತಿಭಟನೆಯಲ್ಲಿ ಭಾಗವಹಿಸಲು ಬಚೂರದಲ್ಲಿ ರಸ್ತೆ ಬದಿ ಪಾದಯಾತ್ರೆ ಹೋಗುತ್ತಿದ್ದ ಐವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಚಾರ್ಮಾಡಿಯವರಾಗಿದ್ದು ಪ್ರಸ್ತುತ ಮದ್ದಡ್ಕದಲ್ಲಿ ವಾಸವಾಗಿದ್ದ ಷರೀಫ್ ಮೂಸೆಕುಂಞಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಚಾರ್ಮಾಡಿಯಲ್ಲಿದ್ದಾಗ ಖಾಸಗಿ ಬಸ್ ಪಾಲುದಾರರಾಗಿದ್ದರು. ಮದ್ದಡ್ಕದಲ್ಲಿ ಹೊಟೇಲ್ ನಡೆಸುತ್ತಿದ್ದರು. ಮೃತರು ಪತ್ನಿ,ನಾಲ್ವರು ಮಕ್ಕಳು ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಸಹೋದರರಾದ ಅಶ್ರಫ್, ಅಕ್ಬರ್ ಮತ್ತು ಇಬ್ರಾಹಿಂ ಅವರನ್ನು ಅಗಲಿದ್ದಾರೆ.