ಪುತ್ತೂರು: ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ದ.13 ರಂದು ಜರಗಿದ್ದು, ಈ ವಾರ್ಷಿಕ ಕ್ರೀಡಾಕೂಟದಲ್ಲಿ ದೀಪ್ತಿ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಸ್ಫೂರ್ತಿ ತಂಡವು ರನ್ನರ್ಸ್ ಪ್ರಶಸ್ತಿಗೆ ಭಾಜನರಾದರೆ ಜ್ಯೋತಿ ತಂಡವು ತೃತೀಯ, ಕೀರ್ತಿ ತಂಡವು ಚತುರ್ಥ ಸ್ಥಾನವನ್ನು ಗಳಿಸಿಕೊಂಡಿತು.
ಆರು ವಿಭಾಗಗಳಲ್ಲಿ ನಡೆದ ಈ ಕ್ರೀಡಾಕೂಟದ ಸಬ್ ಜ್ಯೂನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ಜ್ಯೋತಿ ತಂಡದ ಮಹಮದ್ ಆನಾಸ್(6ನೇ), ಬಾಲಕಿಯರ ವಿಭಾಗದಲ್ಲಿ ಜ್ಯೋತಿ ತಂಡದ ಕ್ಷಮ ಎಚ್.ಎಸ್(6ನೇ), ಜ್ಯೂನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ದೀಪ್ತಿ ತಂಡದ ಶಶಾಂಕ್(8ನೇ), ಬಾಲಕಿಯರ ವಿಭಾಗದಲ್ಲಿ ಸ್ಫೂರ್ತಿ ತಂಡದ ಎ.ಲೋಸಿನಿ(7ನೇ), ಸೀನಿಯರ್ ವಿಭಾಗದ ಬಾಲಕರ ವಿಭಾಗದಲ್ಲಿ ಸ್ಫೂರ್ತಿ ತಂಡದ ವಿಘ್ನೇಶ್ ಸಿ.ರೈ(10ನೇ), ದೀಪ್ತಿ ತಂಡದ ಗಗನ್ ಎ.ಜಿ(9ನೇ), ಬಾಲಕಿಯರ ವಿಭಾಗದಲ್ಲಿ ದೀಪ್ತಿ ತಂಡದ ಅನಿಖಾ ಯು(10ನೇ)ರವರುಗಳು ವೈಯಕ್ತಿಕ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ವರುಣ್ ಬ್ಯಾಡ್ಮಿಂಟನ್ ಅಕಾಡೆಮಿಯ ವರುಣ್ ಪಿ.ಎಚ್ರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ರೀಡೆಯನ್ನು ಮನೋರಂಜನಾ ಆಟವನ್ನಾಗಿ ಪರಿಗಣಿಸದೆ ಅದರಲ್ಲಿ ವಿಶೇಷ ತರಬೇತಿ, ಪರಿಣತಿಯನ್ನು ಪಡೆಯಲು ಶ್ರಮಿಸಬೇಕು. ನಿರಂತರವಾಗಿ ಅಭ್ಯಾಸ ನಿರತರಾಗಬೇಕು. ಯಾವುದೇ ವೃತ್ತಿಯಲ್ಲಿ ಇದ್ದರೂ ಕ್ರೀಡಾಸಕ್ತಿಯನ್ನು ಕೈ ಬಿಡದೆ ಮುಂದುವರಿಸಿದಾಗ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಆಸ್ಕರ್ ಆನಂದ್ರವರು ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಶಾಲಾ ಆಡಳಿತ ಸಮಿತಿ ಸದಸ್ಯ ಸುಶಾಂತ್ ಹಾರ್ವಿನ್, ಶಾಲಾ ಮುಖ್ಯಗುರು ಶೋಭಾ ನಾಗಾರಾಜ್, ಕ್ರೀಡಾ ಮಂತ್ರಿ ಅನಿಖಾ ಯುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಕ್ರೀಡಾ ಮಂತ್ರಿ ನಿಕೋಲಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ವಂದಿಸಿದರು.
ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ..
ಸಮಾರೋಪ ಸಮಾರಂಭದ ಕೊನೆಗೆ ವಿದ್ಯಾರ್ಥಿಗಳು ಕ್ರೀಡಾ ಧ್ವಜವನ್ನು ಹಿಡಿದು, ಕ್ರೀಡಾಂಗಣಕ್ಕೆ ಪಥಸಂಚಲನದ ಮೂಲಕ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕ್ರೀಡಾಂಗಣದ ಮತ್ತೊಂದು ತುದಿಯಲ್ಲಿನ ಪೀಠದಲ್ಲಿ ಉರಿಸಿ ಇರಿಸಲಾಗಿದ್ದ ಕ್ರೀಡಾದೀಪವನ್ನು ಸ್ತಂಭನ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಸಂಭ್ರಮದಿಂದ ತೆರೆ ಎಳೆಯಲಾಯಿತು.