ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿರುವ ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ಶಿಕ್ಷಣ ಸಂಯೋಜಕಿ ಅಮೃತಕಲಾ ಮಾತನಾಡಿ ವಿದ್ಯಾರ್ಥಿನಿಯರು ಬಾಲ್ಯದಿಂದಲೇ ತಮ್ಮ ಹೆತ್ತವರು ನೀಡಿದ ಸಂಸ್ಕಾರಗಳನ್ನು ತಮ್ಮಲ್ಲಿ ಬೆಳೆಸಿಕೊಂಡು ಬರಬೇಕು. ಅವಕಾಶ ಹಾಗೂ ಉತ್ತಮ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕು. ಈ ಶಾಲೆಯಲ್ಲಿ ಸಂಸ್ಕಾರಯುತ ಶಿಕ್ಷಣ ವಿದ್ಯಾರ್ಥಿನಿಯರಿಗೆ ದೊರೆತಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವು ಉತ್ತಮ ನಿದರ್ಶನ ಎಂದು ಹೇಳಿದರು.
ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಭೆ ಎಂಬುವುದು ಪ್ರತಿಯೊಬ್ಬರಲ್ಲೂ ಸುಪ್ತವಾಗಿರುತ್ತದೆ. ಆ ಪ್ರತಿಭೆ ಹೊರಬರಲು ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಆಗ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಆಗ ಬಹುಮಾನ, ಪುರಸ್ಕಾರಗಳು ತಾವಾಗಿ ಅರಸಿ ಬರುತ್ತದೆ. ಪ್ರತಿಯೊಂದರಲ್ಲೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಹೇಳಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ.ಎಂ ಆಶ್ರಫ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್, ರಕ್ಷಕ-ಶಿಕ್ಷಕ ಸಂಘದ ಸದಸ್ಯ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಮಹೇಶ್ಚಂದ್ರ ಸಾಲ್ಯಾನ್, ಮುಖ್ಯೋಪಾಧ್ಯಾಯಿನಿ ರೋಸಲಿನ್ ಪ್ಲೇವಿ ಲೋಬೊ, ಶಾಲಾ ನಾಯಕಿ ಸಮೀಕ್ಷಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
2024-25ನೇ ಶೈಕ್ಷಣಿಕ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಸಂಬಂಧಿಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಬಹುಮಾನ ನೀಡಲಾಯಿತು. ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಸ್ವಾಗತಿಸಿ, ಶಾಲಾ ಉಪನಾಯಕಿ ಮಾನ್ಯ ವಂದಿಸಿದರು. ವಿದ್ಯಾರ್ಥಿಗಳಾದ ತಾಜುನ್ನೀಸ, ಗಾಯನ ಹಾಗೂ ಫಾತಿಮತ್ ಝೈಮಾ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್‌ಗೆ ಸನ್ಮಾನ
ಸುಮಾರು 65 ಬಾರಿ ರಕ್ತದಾನ ಮಾಡಿದ ಜಿಲ್ಲಾ ಪ್ರಶಸ್ತಿ ವಿಜೇತ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್‌ರವರನ್ನು ಶಾಲು, ಫಲಪುಷ್ಪ, ಹಾರ ಹಾಕಿ ಸನ್ಮಾನಿಸಲಾಯಿತು.