ನೆಲ್ಯಾಡಿ: ಖಾಸಗಿ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಕೊಕ್ಕಡ-ಧರ್ಮಸ್ಥಳ ರಸ್ತೆಯ ಕೊಕ್ಕಡ ಸಮೀಪ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಡಿ.15ರಂದು ಸಂಜೆ ನಡೆದಿದೆ.
ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ಮಾಧವ ಆಚಾರಿ(52ವ.) ಮೃತಪಟ್ಟ ಬೈಕ್ ಸವಾರ. ಮಾಧವ ಆಚಾರಿ ಅವರು ಬೈಕ್ನಲ್ಲಿ ಕೊಕ್ಕಡದಿಂದ ಕಾಪಿನಬಾಗಿಲು ಕಡೆಗೆ ಬರುತ್ತಿದ್ದ ವೇಳೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಆಂಧ್ರ ಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸು ನಡುವೆ ಕಾಪಿನಬಾಗಿಲು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಾಧವ ಆಚಾರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.