ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಲಯ ಉದ್ಘಾಟನೆ

0

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಾರಥ್ಯದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ಮತ್ತು 29ರಂದು ನಡೆಯುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆಯು ಡಿ.15ರಂದು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರದ ಎದುರು ನಡೆಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಪ್ರಥಮ ವರ್ಷ ಅದ್ದೂರಿಯಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಈ ವರ್ಷ ಅದಕ್ಕಿಂತ ಅದ್ದೂರಿಯಾಗಿ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ ಅವರು ಹಿಂದೂಗಳ ಒಳಿತಿಗಾಗಿ ನಡೆಯುವ ಕಲ್ಯಾಣೋತ್ಸವದಲ್ಲಿ ಯಾವುದೇ ವೈಮನಸ್ಸಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಬೇಕು ಎಂದರು.


ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ, ಈ ಬಾರಿ ನಾವೆಲ್ಲ ಒಂದಾಗಿದ್ದೇವೆ. ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನಮ್ಮ ಒಗ್ಗಟ್ಟೊಂದೇ ಪರಿಹಾರ. ಇಂತಹ ಧಾರ್ಮಿಕ ಕಾರ್ಯಕ್ರಮದಿಂದ ನಾವೆಲ್ಲ ಒಂದು ಎನ್ನುವುದನ್ನು ಸಾರಬಹುದು ಎಂದ ಅವರು ಶ್ರೀನಿವಾಸ ಕಲ್ಯಾಣೋತ್ಸವದ ಎರಡು ದಿನದ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗವಹಿಸಬೇಕು ಎಂದರು.


ಮನೆ ಮನೆಗೆ ಆಮಂತ್ರಣ:
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಎಲ್ಲಾ ಹಿಂದೂಗಳ ಮನೆಗೆ ತಲುಪಲಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಂಧುಗಳು ಪಾಲ್ಗೊಳ್ಳಬೇಕು ಮತ್ತು ಪ್ರತಿ ಮನೆಗಳಿಂದ ಹೊರಕಾಣಿಕೆ ಸಮರ್ಪಣೆಯಾಗಬೇಕೆಂದು ಹೇಳಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಕಾರ್ಯಾಲಯದಲ್ಲಿ ದೀಪ ಪ್ರಜ್ವಲಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಶಶಾಂಕ್ ಕೊಟೇಚಾ, ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಸ್ವಾಗತ ಸಮಿತಿ ಸಂಚಾಲಕ ಅನಿಲ್ ತೆಂಕಿಲ, ಅಧ್ಯಕ್ಷ ರಾಜು ಶೆಟ್ಟಿ, ಲಕ್ಷ್ಮಣ ಸಂಪ್ಯ, ಮಹಿಳಾ ಘಟಕದ ಸಂಚಾಲಕಿ ರಜತಾ ಗಿರೀಶ್ ಭಟ್, ಸಹಸಂಚಾಲಕಿ ಪುಷ್ಪಾ ರಾಜೇಶ್, ಹರಿಣಿ ಪುತ್ತೂರಾಯ, ಮಲ್ಲಿಕಾ ಪ್ರಸಾದ್, ಕಡಬ ಘಟಕದ ಕಾರ್ಯಾಧ್ಯಕ್ಷ ವೆಂಕಟರಮಣ ಕಡಬ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹಸಂಚಾಲಕ ಮನೀಶ್ ಕುಲಾಲ್ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.


ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here