ಪುತ್ತೂರು:“ಇತಿಹಾಸದ ಅರಿವಿದ್ದವರು ವರ್ತಮಾನದಲ್ಲಿ ಕ್ರಿಯಾಶೀಲರಾಗಿರುತ್ತಾರೆ ಮತ್ತು ಭವಿಷ್ಯವನ್ನು ಸಶಕ್ತವಾಗಿ ರೂಪಿಸಿಕೊಳ್ಳುತ್ತಾರೆ” ಎಂಬ ಆದರ್ಶವನ್ನು ಅನುಸರಿಸುತ್ತಾ ಬಂದಿರುವ ಸುದಾನ ವಸತಿ ಶಾಲೆಯಲ್ಲಿ ಡಿ.19, 20 ಮತ್ತು 21ರಂದು ವಾರ್ಷಿಕೋತ್ಸವದ ಸಂಭ್ರಮ ಮೇಳೈಸಲಿದೆ.
ಪ್ರತಿ ವರ್ಷವೂ ಧ್ಯೇಯ ವಾಕ್ಯವೊಂದನ್ನು ವರ್ಷಪೂರ್ತಿ ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸುದಾನ ಶಾಲೆಯು ಈ ವರ್ಷ “ಭವ್ಯ ಭಾರತ ಅಂದು, ಇಂದು, ಮುಂದು” ಎಂಬ ಧ್ಯೇಯ ದೃಷ್ಟಿಯನ್ನು ಹೊಂದಿದೆ. ಇದರನ್ವಯವೇ ಎಲ್ಲಾ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದ್ದು ಭಾರತದ ಇತಿಹಾಸ, ವರ್ತಮಾನ ಮತ್ತು ಭವಿತವ್ಯದ ಬಗೆಗೆ ಚಿಂತಿಸುವಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
1991-92ರಿಂದ 33 ವಸಂತಗಳನ್ನು ದಾಟಿ ಮುನ್ನಡೆಯುತ್ತಿರುವ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿ ವಿವಿಧ ಸಂಘಗಳನ್ನು ರೂಪಿಸಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಉತ್ತೇಜಿಸುತ್ತಿದೆ. ಸಾವಿರಕ್ಕಿಂತಲೂ ಮೀರಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು “ಸರ್ವಧರ್ಮ ಸಮನ್ವಯತೆ, ಭಾರತೀಯತೆ ಮತ್ತು ವೈಜ್ಞಾನಿಕ ಪ್ರಗತಿಯತ್ತ ಯುವಜನತೆ” ಎಂಬುದನ್ನು ಶಿಕ್ಷಣದ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡಿದೆ. ಹಸಿರನ್ನು ಉಳಿಸಿಕೊಂಡು ಪ್ರಕೃತಿಯ ಸಹಜತೆಗೆ ಧಕ್ಕೆಯಾಗದಂತೆ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿರುವ ಸುದಾನ ಶಾಲೆಯಲ್ಲಿ ಪಕ್ಷಿಧಾಮ, ಹೈನುಗಾರಿಕೆ, ಔಷಧೀಯ ಗಿಡಗಳ ಸಂಜೀವಿನಿ ವನ, ಗದ್ದೆ ಬೇಸಾಯ, ಅಲಂಕಾರಿಕ ಮತ್ತು ವಿವಿಧ ಹೂ ಹಣ್ಣುಗಳುಳ್ಳ ನರ್ಸರಿ, ಮುಂತಾದ ಪರಿಸರ ಸ್ನೇಹಿ ಸೌಲಭ್ಯಗಳಿವೆ. ಸಾವಯವ ಕೃಷಿ ಮತ್ತು ಸಹಜ ಪರಿಸರಕ್ಕೆ ಪ್ರಾಮುಖ್ಯತೆ ಕೊಡುವ ಸುದಾನ ಶಾಲೆಗೆ ರಾಜ್ಯಮಟ್ಟದ “ಪರಿಸರ ಮಿತ್ರ” ಪ್ರಶಸ್ತಿ ಲಭಿಸಿದೆ. ಇಷ್ಟೇ ಅಲ್ಲದೆ ಕಿಟ್ಟೆಲ್ ಲೈಬ್ರರಿ, ಕಿಟ್ಟೆಲ್ ಸಂಶೋಧನಾ ಕೇಂದ್ರ, ಕ್ರೀಡಾ ತರಬೇತಿ ಕೇಂದ್ರಗಳೂ ಶಾಲೆಯಲ್ಲಿ ಇವೆ. ಈ ವರ್ಷ ಹೊಸದಾಗಿ ಸುದಾನ ಪದವಿಪೂರ್ವ ಕಾಲೇಜು ಆರಂಭವಾಗಿದ್ದು ವಿಜ್ಞಾನ, ವಾಣಿಜ್ಯ ವಿಭಾಗಗಳಿದ್ದು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ನೀಡಲಾಗುತ್ತಿದೆ.
ಪ್ರತಿ ವರ್ಷವೂ 10ನೇ ತರಗತಿಯಲ್ಲಿ ರಾಜ್ಯ ರ್ಯಾಂಕ್ ಮತ್ತು ಅತ್ಯುತ್ತಮ ಫಲಿತಾಂಶದೊಂದಿಗೆ ಗುರುತರವಾದ ಸಾಧನೆಯನ್ನು ಮಾಡುವ ಸುದಾನ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಸ್ಕೌಟ್-ಗೈಡ್ಸ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೂರು ದಿನಗಳ ಕಾಲಗಳ ಕಾಲ ನಡೆಯುವ ಈ ವಾರ್ಷಿಕೋತ್ಸವ ಸಂಭ್ರಮದಲ್ಲಿನ ಮೂರು ದಿನಗಳಲ್ಲೂ “ಭವ್ಯ ಭಾರತದ ಇತಿಹಾಸ, ವರ್ತಮಾನದ ಪ್ರಗತಿ ಮತ್ತು ಭವಿಷ್ಯದ ಸಾಧನೆಯ” ಬಗೆಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.
ಡಿ.19ರಂದು..
ಡಿ.19ರಂದು ಶಾಲಾ ವಾರ್ಷಿಕೋತ್ಸವದ ಉದ್ಘಾಟನೆ. ಯು.ಕೆ.ಜಿ ಮಕ್ಕಳ ಘಟಿಕೋತ್ಸವ ಮತ್ತು ಸಾಧಕರ ಪುರಸ್ಕಾರವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ತನುಜಾ ಝೇವಿಯರ್ ಮತ್ತು ವಿದ್ಯಾಮಾತ ಅಕಾಡೆಮಿಯ ನಿರ್ದೇಶಕರಾದ ಭಾಗ್ಯೇಶ್ ರೈಯವರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ಡಿ.20ರಂದು..
ಡಿ.20ರಂದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕೋತ್ಸವವು ನಡೆಯಲಿದ್ದು, ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ವಾಸ್ತವಿ ಎಚ್.ಶೆಟ್ಟಿ ಮತ್ತು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಮಾಸ್ಟರ್ ಅರ್ಮಾನ್ ರಿಯಾಜ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಡಿ.21ರಂದು..
ಡಿ.21ರಂದು ಮೂರನೇ ದಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವು ನಡೆಯಲಿದ್ದು, ಸುದಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ ಮುಖ್ಯ ಅಭ್ಯಾಗತರಾಗಿ ಹಾಲ್ಗೊಳ್ಳಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಶಾಂತ್ ಹಾರ್ವಿನ್, ಉಪಾಧ್ಯಕ್ಷರಾದ ಡಾ|ವಿಖ್ಯಾತ್ ನಾರಾಯಣ, ಕಾರ್ಯದರ್ಶಿ ಸತ್ಯಾತ್ಮ, ಕೋಶಾಧಿಕಾರಿ ಹರ್ಷಿತ್ ಎಂ.ಬಿ ಪಾಲ್ಗೊಳ್ಳಲಿದ್ದಾರೆ.