ನೆಲ್ಯಾಡಿಯ ವಿನ್ಸೆಂಟ್ ಮಿನೇಜಸ್ ಕ್ರಿಸ್ಮಸ್ ಸಾಂತಾಕ್ಲಾಸ್ ದ್ವಿಚಕ್ರ ಯಾತ್ರೆಗೆ ಬೆಳ್ಳಿ ಹಬ್ಬದ ಸಂಭ್ರಮ-ಡಿ.19ರಿಂದ ಆರಂಭ

0

ಪುತ್ತೂರು: ಕ್ರಿಸ್ಮಸ್ ಹಬ್ಬ ಅಂದರೆ ಸಾಕು ಥಟ್ಟನೆ ನೆನಪಿಗೆ ಬರುವುದು ಕೈಯಲ್ಲೊಂದು ಕೋಲು, ಜೊತೆಗೆ ಸಿಹಿತಿಂಡಿಯ ಪೊಟ್ಟಣಗಳು, ಬಿಳಿ ಗಡ್ಡದ ಜೊತೆಗೆ ದಪ್ಪ ಮೀಸೆ, ಕೆಂಪು ಬಿಳಿಯುಡುಗೆಯ ಸಾಂತಾಕ್ಲಾಸ್, 4ನೇ ಶತಮಾನದಲ್ಲಿ ಗ್ರೀಕ್‌ನಲ್ಲಿ ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ಹಬ್ಬದ ಸಂದೇಶ ಸಾರುವ ಸಲುವಾಗಿ ಬಡವರಿಗೆ ಉಡುಗೊರೆ ನೀಡುವ ಮೂಲಕ ಏಸುಕ್ರಿಸ್ತ ಹುಟ್ಟಿದ ಶುಭಾಶಯ ಸಾರುತ್ತಿದ್ದರು. ಅದು ಪಾಶ್ಚಿಮಾತ್ಯ ರಾಷ್ಟ್ರದ ಕಥೆಯಾದರೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುತ್ತಾಡುವ ಒಬ್ಬ ಸಾಂತಾಕ್ಲಾಸ್ ಇದ್ದಾರೆ. ಆತ ಆಸ್ಪತ್ರೆ, ಆಶ್ರಮಗಳಿಗೆ ತೆರಳಿ ಕ್ರಿಸ್ಮಸ್ ಶುಭಾಶಯ ತಿಳಿಸುತ್ತಾರೆ.


ಅವರ ಹೆಸರೇ ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ವಿನ್ಸೆಂಟ್ ಮಿನೇಜಸ್. ಇವರು ಕಳೆದ 24 ವರ್ಷಗಳಿಂದ ದ್ವಿಚಕ್ರ ವಾಹನದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲರಿಗೂ ಸಿಹಿ ಹಂಚಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸುತ್ತಾರೆ. 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಕೇವಲ ಎರಡು ಬಲೂನ್‌ಗಳನ್ನು ತನ್ನ ಗಾಡಿಗೆ ಕಟ್ಟಿ, ಸಾಂತಾಕ್ಲಾಸ್ ವೇಷದೊಂದಿಗೆ ತನ್ನ ಊರಿನಲ್ಲಿ ಶುಭಾಶಯ ಹಂಚಲು ಹೋಗಿದ್ದನ್ನು ವಿನ್ಸೆಂಟ್ ನೆನಪಿಸಿಕೊಳ್ಳುತ್ತಾರೆ.


ಸ್ವಂತ ಹಣದಿಂದ ಸುತ್ತಾಟ:
ವಿನ್ಸೆಂಟ್ ಅವರು ತನ್ನ ಊರು ಬಿಟ್ಟು ಮಂಗಳೂರು, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಆಯ್ದ ಭಾಗಗಳಲ್ಲಿ ಮುಖ್ಯರಸ್ತೆಯಲ್ಲಿ ಹೋಗದೆ ಓಳ ಮಾರ್ಗವಾಗಿ ಸುತ್ತಾಡುತ್ತಾರೆ. ಕಳೆದ 24 ವರ್ಷಗಳಿಂದ ದ್ವಿಚಕ್ರ ವಾಹನಕ್ಕೆ ಇಂಧನ ಜೊತೆಗೆ ಚಾಕಲೇಟು, ಬಲೂನು ಸೇರಿ ವಿವಿಧ ವಸ್ತುಗಳಿಗೆ ತನ್ನ ಸ್ವಂತ ಹಣವನ್ನು ವಿನಿಯೋಗಿಸುತ್ತಾರೆ. ವರ್ಷಂಪ್ರತಿ 300 ರಿಂದ 450 ಕಿಲೋಮೀಟರ್ ಪ್ರಯಾಣ ಮಾಡುವ ಇವರು ಕ್ರಿಸ್ಮಸ್ ಹಬ್ಬದ ಮುಂಚಿನ ದಿವಸ ಅಂದರೆ ಡಿಸೆಂಬರ್ 19, 20ರಂದು ಜಿಲ್ಲೆಯಿಡಿ ಸುತ್ತಾಡಿ ಡಿಸೆಂಬರ್ 25ರಂದು ಮನೆಮಂದಿಗೆ ಸಮಯ ಕೊಡುತ್ತಾರೆ. ಕ್ರಿಸ್ಮಸ್‌ನ ಮೊದಲ ಮೂರು ದಿನದಂದು ಜಿಲ್ಲೆಯಲ್ಲಿರುವ ಆಶ್ರಮ, ಶಾಲಾ ಕಾಲೇಜು, ವೃದ್ಧಾಶ್ರಮ, ಅನಾಥಾಶ್ರಮ, ಚರ್ಚ್, ಕಾನ್ವೆಂಟ್, ಆಸ್ಪತ್ರೆ ಮತ್ತು ಸ್ಲಂ ಏರಿಯಾ ಸೇರಿದಂತೆ ವಿವಿಧ ಕಡೆಗಳಿಗೆ ಇವರು ಭೇಟಿ ನೀಡುತ್ತಾರೆ.


ಗಾಡಿ ಪೂರ್ತಿ ಬಲೂನ್‌ಗಳು:
ವರ್ಷದ 11 ತಿಂಗಳೂ ಮನೆಯಲ್ಲಿಯೇ ಕೃಷಿ ಕೆಲಸ ಮಾಡುವ ಇವರು ಇದಕ್ಕಾಗಿಯೇ 15 ದಿನದ ಮೊದಲೇ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಕ್ರಿಸ್ಮಸ್ ಕಳೆದ ನಂತರ ಸಾಂತಾಕ್ಲಾಸ್ ಡ್ರೆಸ್‌ನ್ನು ಶುಭ್ರವಾಗಿ ತೊಳೆದು ಅತ್ಯಂತ ಜಾಗರೂಕತೆಯಿಂದ ತೆಗೆದಿಡುತ್ತಾರೆ. ಇದರ ಜೊತೆ ಜೊತೆಗೆ ಗಾಡಿ ಸಿಂಗರಿಸುವುದರಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಪತ್ನಿ ತನಗೆ ಬೆಂಬಲ ನೀಡುತ್ತಾರೆ. ಈ ಎರಡು ದಿನಗಳ ಕಾಲ ಬೆಳಿಗ್ಗೆ 5 ಗಂಟೆಗೆ ಏಳುವ ಇವರು 8.30ರ ತನಕ ಬಲೂನು ಕಟ್ಟಿ ಗಾಡಿ ಸಿಂಗರಿಸುತಾರೆ. ಯಾಕೆಂದರೆ ಪ್ರತಿದಿನವೂ ಗಾಡಿ ಪೂರ್ತಿ ಬೆಲೂನುಗಳಿಂದ ಸಿಂಗರಿಸುವ ಕೆಲಸವನ್ನು ಮಾಡುತ್ತಾರೆ. ಮಂಗಳೂರು ನಗರದಿಂದ 70 ರಿಂದ 75 ಕಿಲೋಮೀಟರ್ ದೂರವಿರುವ ಅವರು ಒಂದು ದಿನ ಮಂಗಳೂರು ನಗರ ಸೇರಿ ವಿವಿಧೆಡೆ ಸುತ್ತಾಡುತ್ತಾರೆ. ಜತೆಗೆ ಎಷ್ಟು ದೂರ ತೆರಳಿದರೂ ಕತ್ತಲಾದರೂ ಪ್ರತಿದಿನ ಮನೆಗೆ ಸೇರುತ್ತೇನೆ ಎನ್ನುತ್ತಾರೆ ಸಾಂತಾಕ್ಲಾಸ್ ವಿನ್ಸೆಂಟ್‌ರವರು.


ವಿವಿಧ ರಂಗಗಳಲ್ಲೂ ಮಿಂಚು:
ಇವರ ಪತ್ನಿ ಕ್ರಿಸ್ಟಿನ್ ಮಾರ್ಟಿಸ್ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ವಿವಿಯಲ್ ಮತ್ತು ಕ್ರಿಸ್ಟಲ್ ಎನ್ನುವ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ. ನೆಲ್ಯಾಡಿಯಲ್ಲಿ 22 ಚರ್ಚ್‌ಗಳು ಒಟ್ಟಿಗೆ ಸೇರಿ ಆಚರಿಸುವ ಕ್ರಿಸ್ಮಸ್ ಹಬ್ಬದಲ್ಲಿ ಇವರು ನಿರೂಪಣೆಯನ್ನೂ ಮಾಡುತ್ತಾರೆ. ಅದೇ ರೀತಿ ಲಯನ್ಸ್ ಕ್ಲಬ್ ಸೇರಿ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಂದಿನಿಂದಲೇ ತುಳು, ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸ್ವತಃ ಹಾಡುಗಳನ್ನು ರಚಿಸಿ ಹಾಡುವ ಹವ್ಯಾಸವೂ ಇವರಿಗಿದೆ. ಇವರಿಗಿರುವ ಒಂದೇ ಒಂದು ಆಸೆ ಅಂದರೆ ಏಸುಕ್ರಿಸ್ತ ಹೇಳಿದಂತೆ ಎಲ್ಲರಲ್ಲೂ ಶತ್ರುಗಳನ್ನು ಪ್ರೀತಿಸುವಂತಹ ಗುಣ ಬೆಳೆಯಲಿ ಎನ್ನುವುದು.

ಜಾಗೃತಿ ಮೂಡಿಸುವ ಘೋಷಣಾ ಫಲಕ..
‘ನಾನೊಬ್ಬ ಮನುಷ್ಯಪ್ರೇಮಿ ನನಗೆ ಎಲ್ಲಾ ಧರ್ಮದವರೊಂದಿಗೆ ಬೆರೆಯುವುದು ಅಂದರೆ ತುಂಬಾ ಖುಷಿ. ಆದ್ದರಿಂದ ಈ ಹಬ್ಬವನ್ನೇ ಸದವಕಾಶವಾಗಿ ಉಪಯೋಗಿಸಿಕೊಂಡು ಸಾಂತಾಕ್ಲಾಸ್ ವೇಷ ಧರಿಸಿ ತೆರಳುತ್ತಿದ್ದೇನೆ. ಬೇರೆ ಯಾವ ಸಂದರ್ಭದಲ್ಲೂ ಈ ರೀತಿಯಾಗಿ ಹೋಗಲು ಸಾಧ್ಯವಿಲ್ಲ. ಸಾಂತಾಕ್ಲಾಸ್ ನೋಡುವುದು ಅಂದ್ರೆ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಏನೋ ಒಂಥರಾ ಖುಷಿ. ನಾನು ನನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭ ನನ್ನ ವೇಷಭೂಷಣ ನೋಡಿದ ಕೂಡಲೇ ಪುಳಕಿತರಾಗುತ್ತಾರೆ. ಅದು ನನಗೆ ತುಂಬಾ ಖುಷಿ ಕೊಡುತ್ತದೆ’ ಎಂದು ವಿನ್ಸೆಂಟ್‌ರವರು ಹೇಳುತ್ತಾರೆ. ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರುವ ಫಲಕ, ಹಿಂಭಾಗದಲ್ಲಿ “ಗಿಡ ಮರ ಬೆಳೆಸಿ, ಪರಿಸರ ಉಳಿಸಿ, ಸ್ವಚ್ಛ ಭಾರತ ನಿರ್ಮಿಸಿ, ಡ್ರಗ್ಸ್ ಮುಕ್ತ ಜೀವನ ನಡೆಸಿ” ಎಂಬ ಫಲಕ ಅಳವಡಿಸಿರುತ್ತಾರೆ. ಧ್ವನಿವರ್ಧಕದಲ್ಲಿ ಕ್ರಿಸ್ಮಸ್ ಗೀತೆಗಳು, ಝಿಂಗಲ್ ಬೆಲ್, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಧ್ವನಿ ಹೊಂದಿದೆ.

LEAVE A REPLY

Please enter your comment!
Please enter your name here