ಸಂಚಾರ ದಟ್ಟಣೆ ನಿಯಂತ್ರಣ, ಸುವ್ಯವಸ್ಥಿತ ಪಾರ್ಕಿಂಗ್, ಲಿಂಕ್ ರೋಡ್ ಅಭಿವೃದ್ಧಿ

0

ನಗರಸಭೆ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ, ಲಿಂಕ್ ರೋಡ್‌ಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡುವಲ್ಲಿ ಸಹಕರಿಸುವಂತೆ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಇಂಡಿಯಾ ಇದರ ಪುತ್ತೂರು ಘಟಕದ ಅಧ್ಯಕ್ಷರಾಗಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಮೋದ್ ಕೆ.ಎಸ್ ಅವರನ್ನು ವಿನಂತಿಸಲಾಗಿದ್ದು ಅವರು ತಮ್ಮ ಸಂಸ್ಥೆಯಿಂದ ಹಾಗು ನಗರಸಭೆ ಇಂಜಿನಿಯರ್‌ಗಳ ಜಂಟಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುವಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ.‌


ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ, ವಾಹನಗಳಿಗೆ ಪಾರ್ಕಿಂಗ್ ಸ್ಥಳಾವಕಾಶ ಇಲ್ಲದೇ ಇರುವುದು, ಅನಗತ್ಯ ವಾಹನಗಳ ಸಂಚಾರಕ್ಕೆ ಸಂಪರ್ಕ ರಸ್ತೆಯ ವ್ಯವಸ್ಥೆ ಕುರಿತು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಡಿ.17ರಂದು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ಸಭೆ ನಡೆಯಿತು. ನಗರಸಭೆಯಲ್ಲಿ ರಸ್ತೆ ಮತ್ತು ವಾಹನ ಪಾರ್ಕ್‌ಗಳ ಅಭಿವೃದ್ಧಿ ವಿಚಾರದಲ್ಲಿ ಒಟ್ಟು ಮಾಸ್ಟರ್ ಪ್ಲ್ಯಾನ್ ಮಾಡಿಕೊಡುವಂತೆ ಪ್ರಮೋದ್ ಅವರನ್ನು ಕೇಳಿಕೊಳ್ಳಲಾಯಿತು. ಇಲ್ಲಿ ನಾನೊಬ್ಬನೇ ಅಲ್ಲ, ನಮ್ಮ ಸಂಸ್ಥೆ ಮತ್ತು ನಗರಸಭೆಯ ಇಂಜಿನಿಯರ್‌ಗಳ ಸಹಕಾರದಿಂದ ಮಾಸ್ಟರ್ ಪ್ಲ್ಯಾನ್ ಮಾಡಿಕೊಡುವ ಕುರಿತು ಪ್ರಮೋದ್ ಅವರು ಭರವಸೆ ನೀಡಿದರು. ನೆಲ್ಲಿಕಟ್ಟೆ ಜಾಗವನ್ನು ಕಮರ್ಷಿಯಲ್ ಮಾಡಲು ಪ್ರಸ್ತಾವನೆ ಮಾಡಬೇಕು. ಕಾಂಪ್ಲೆಕ್ಸ್ ಬದಲು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಮಾಡುವ ಯೋಜನೆ ರೂಪಿಸಬೇಕು. ಲೋಕೋಪಯೋಗಿ ಇಲಾಖೆಯ 30 ಸೆಂಟ್ಸ್ ಜಾಗವೂ ಅಲ್ಲಿದೆ. ಪ್ರಸ್ತುತ ದಿನಗಳಲ್ಲಿ ಮಲ್ಪಿಲೆವೆಲ್ ಕಾರ್ ಪಾರ್ಕಿಂಗ್ ನಗೆರಸಭೆಗೆ ಉತ್ತಮ ಆದಾಯ ತರುತ್ತದೆ. ಜೊತೆಗೆ ಈಗಿನ ಬಸ್ ನಿಲ್ದಾಣವನ್ನು ಸಿಟಿ ಬಸ್ ನಿಲ್ದಾಣ ಮಾಡಿ ಮುಕ್ರಂಪಾಡಿಯ ಡಿಪೋವನ್ನು ಗ್ರಾಮೀಣ ಬಸ್ ನಿಲ್ದಾಣ ಮಾಡಬೇಕು.ನೈತ್ತಾಡಿಯಲ್ಲಿ ಈಗಾಗಲೇ ಶಾಸಕರು ಕ್ರೀಡಾಂಗಣಕ್ಕೆ ಜಾಗ ನೋಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿ ಇನ್ನಷ್ಟು ಜಾಗ ಇದ್ದರೆ ಬಸ್ ಡಿಪೋ ಮಾಡಬಹುದು. ನೆಲ್ಲಿಕಟ್ಟೆಯಲ್ಲಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಒಂದೇ ಕಡೆ ಮಾಡಬೇಕು. ಇರುವ ಜಾಗವನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಚಿಂತನೆ ಮಾಡಬೇಕು. ಜೊತೆಗೆ ಸಂಪರ್ಕ ರಸ್ತೆಗಳು ಆಗಬೇಕು. ಈಗಾಗಲೇ ಕೇಪುಳುವಿನಿಂದ ಬೆದ್ರಾಳಕ್ಕೆ ಸಂಪರ್ಕ ರಸ್ತೆ ಅಭಿವೃದ್ದಿಯಾಗಲಿದೆ ಎಂದರು ಪ್ರಮೋದ್ ಹೇಳಿದರು. ಅವರ ಅಭಿವೃದ್ಧಿಪರ ಚಿಂತನೆಗಳಿಗೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡುವಂತೆ ನಗರಸಭೆಯಿಂದ ವಿನಂತಿಸಲಾಯಿತು.


ಖಾಸಗಿ ಬಸ್‌ನಿಲ್ದಾಣಕ್ಕೆ ಬಸ್‌ಗಳು ಬರಬೇಕು: ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಬರುತ್ತಿಲ್ಲವೆಂಬ ದೂರುಗಳು ಈಗಾಗಲೇ ಸಹಾಯಕ ಕಮಿಷನರ್ ಅವರಿಗೆ ಬಂದಿವೆ. ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯವೂ ಇದೆ.ಆದರೆ ಬಸ್‌ಗಳು ಅಲ್ಲಿಗೆ ಬರುತ್ತಿಲ್ಲ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಪ್ರಸ್ತಾಪಿಸಿದರು. ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ, 2003ರಲ್ಲಿ ಖಾಸಗಿ ಬಸ್‌ಗಳು ಖಾಸಗಿ ಬಸ್‌ನಿಲ್ದಾಣಕ್ಕೆ ಬಂದು ಅಲ್ಲಿಂದ ಒಂದೊಂದಾಗಿ ಹೊರಡುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ವಿಶ್ವನಾಥ ಅಜಿಲ ಅವರು ಖಾಸಗಿ ಬಸ್ ಮಾಲಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.ಮೂಲ ಸೌಕರ್ಯದ ಕೊರತೆ ಇದೆ ಎಂಬ ಆರೋಪವಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ತಿಳಿಸಿದರು.ಈಗಾಗಲೇ ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ದುರಸ್ತಿ ಪಡಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ ಎಂದು ಸದ್ಯ ಬಂದ್ ಮಾಡಿದ್ದೇವೆ ಎಂದು ಪೌರಾಯುಕ್ತರು ತಿಳಿಸಿದರು.ಎಲ್ಲಾ ಸೌಕರ್ಯ ಇದೆ. ಆದರೆ ಮಳೆಗಾಲದಲ್ಲಿ ಮಳೆ ನೀರು, ಬೇಸಿಗೆಯಲ್ಲಿ ಬಿಸಿಲು ನಿಲ್ದಾಣದ ಒಳಗೆ ಬರುತ್ತದೆ. ಅದಕ್ಕೆ ನಿಲ್ದಾಣದ ಮೇಲ್ಛಾವಣಿ ಮುಂದೆ ಶೀಟ್ ಅಳವಡಿಕೆ ಮಾಡಬೇಕು. ಜೊತೆಗೆ ಪಕ್ಕದಲ್ಲಿರುವ ಪಾರ್ಕ್ ಅನ್ನು ಸೌಂದರ್ಯಗೊಳಿಸಬೇಕು. ಮುಂದೆ ಬಸ್ ಮಾಲಕರ ಸಭೆ ಕರೆದು, ಎಲ್ಲಾ ಖಾಸಗಿ ಬಸ್‌ಗಳು ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಿ ಒಂದೊಂದಾಗಿ ಬರುವಂತೆ ಅವರಿಗೆ ತಿಳಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸಲಹೆ ನೀಡಿದರು.


ಸಂಪರ್ಕ ರಸ್ತೆ ಅಗತ್ಯ: ನಗರಸಭೆ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳ ನಿಯಂತ್ರಣಕ್ಕೆ ಸಂಪರ್ಕ ರಸ್ತೆ ಅಗತ್ಯವಾಗಿ ಬೇಕು.ಈ ನಿಟ್ಟಿನಲ್ಲಿ 2004ರಲ್ಲಿ ಸಂಪರ್ಕ ರಸ್ತೆಗೆ ಮಡಿವಾಳ ಕಟ್ಟೆಯ ಬಳಿಯಿಂದ ಹಾರಾಡಿ ಸಂಪರ್ಕಕ್ಕೆ ಯೋಜನೆ ರೂಪಿಸಲಾಗಿತ್ತು.ಕಾಮಗಾರಿ ಎರಡೂ ಕಡೆಯಿಂದ ನಡೆದಿದೆ.ನಡುವೆ ಸ್ವಲ್ಪ ಬಾಕಿ ಆಗಿದೆ. ಹೀಗೆ ಅನೇಕ ಕಡೆ ಸಂಪರ್ಕ ರಸ್ತೆ ಆಗಬೇಕಾಗಿದೆ ಎಂದು ಕೆ.ಜೀವಂಧರ್ ಜೈನ್ ಹೇಳಿದರಲ್ಲದೆ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯಿಂದ ಹಾರಾಡಿ ಶಾಲೆ ಬಳಿ ಸಂಪರ್ಕಿಸುವ ರಸ್ತೆ ಅಗಲೀಕರಣ ಮಾಡುವುದು ಅಗತ್ಯ ಎಂದರು.


2 ಕಡೆ ಪೇ ಪಾರ್ಕ್, 22 ಕಡೆ ಅಧಿಕೃತ ರಿಕ್ಷಾ ತಂಗುದಾಣ: ನಗರಸಭೆ ವ್ಯಾಪ್ತಿಯಲ್ಲಿ ದರ್ಬೆ, ದೀಪಕ್ ಗ್ಯಾರೇಜ್ ಬಳಿ ಹಾಗು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಪೇ ಪಾರ್ಕ್ ಇದೆ.ಉಳಿದಂತೆ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಒಟ್ಟು 28 ಕಡೆ ಆಟೋ ರಿಕ್ಷಾ ತಂಗುದಾಣವಿದೆ.ಅದರಲ್ಲಿ 22 ಅಧಿಕೃತ, ಇನ್ನು 6 ಕಡೆಯದ್ದು ಅಧಿಕೃತಗೊಂಡಿಲ್ಲ. ಇನ್ನೂ ಹೆಚ್ಚುವರಿ ಪಾರ್ಕ್‌ಗಳಿಗೆ ಬೇಡಿಕೆ ಇದೆ. ಜಿ.ಎಲ್.ಒನ್ ಮಾಲ್ ಬಳಿಯೂ ಪಾರ್ಕಿಂಗ್ ಬೇಡಿಕೆ ಇದೆ.ಆದರೆ ರಸ್ತೆ ಅಗಲವನ್ನು ಪರಿಶೀಲಿಸಬೇಕಾಗಿದೆ. ಈಗಿರುವ ಅಧಿಕೃತ ಪಾರ್ಕ್‌ನಲ್ಲಿ 4 ರಿಕ್ಷಾ ನಿಲ್ಲುವಲ್ಲಿ 15ಕ್ಕೂ ಹೆಚ್ಚು ರಿಕ್ಷಾಗಳು ನಿಲ್ಲುತ್ತಿವೆ ಎಂದು ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು.


ಬೊಳುವಾರಿನಲ್ಲಿ ಚತುಷ್ಪಥ ರಸ್ತೆಗೆ ರಿಕ್ಷಾ ನಿಲ್ದಾಣ ತೆರವು: ಬೊಳುವಾರು ಭಾಗದಲ್ಲಿ ಚತುಷ್ಪಥ ರಸ್ತೆ ಆಗಲಿದೆ.ರಸ್ತೆ ಅಗಲೀಕರಣ ಸಂದರ್ಭ ಅಲ್ಲಿರುವ ರಿಕ್ಷಾ ನಿಲ್ದಾಣ ತೆರವಾಗಲಿದೆ. ಹಾಗಾಗಿ ರಿಕ್ಷಾ ನಿಲ್ದಾಣಕ್ಕೆ ಬೇರೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಮೋದ್ ಅವರು ಸಭೆಗೆ ತಿಳಿಸಿದರು.


ಮಲ್ಟಿ ಸ್ಟೋರೇಜ್ ಪಾರ್ಕಿಂಗ್ ಅಗತ್ಯ: ದೇವಣ್ಣ ಕಿಣಿ ಎದುರಿನ ನಗರಸಭೆ ಕಟ್ಟಡ ನೂರಕ್ಕೆ ಶೇ.70 ಮಾತ್ರ ಉಪಯೋಗ. ಅದನ್ನು ಮಲ್ಟಿಸ್ಟೋರೇಜ್ ಮಾಡಬೇಕು.ಅಲ್ಲಿ ಕಾರ್ ಪಾರ್ಕಿಂಗ್‌ಗೆ ಅವಕಾಶ ಮಾಡಿದರೆ ಇನ್‌ಕಮ್ ಜನರೇಟ್ ಆಗುತ್ತದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ಹೇಳಿದರು. ಉತ್ತರಿಸಿದ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಪುತ್ತೂರು ಸಿಟಿಯಲ್ಲಿ ಜಾಗದ ಕೊರತೆ ಇದೆ.ಆದಷ್ಟು ಪುತ್ತೂರು ವಿಶಾಲವಾಗಬೇಕು. ಅದಕ್ಕಾಗಿ ಹೊರ ಭಾಗದಲ್ಲೂ ಪಾರ್ಕಿಂಗ್ ವ್ಯವಸ್ಥೆಗೆ ನೋಡಬೇಕು. ಈಗಿರುವ ಕಟ್ಟಡಗಳು ಬಹುತೇಕ ಹಳೆಯ ಕಟ್ಟಡಗಳು. ಹೊಸ ಕಟ್ಟಡ ನಿರ್ಮಾಣ ಆದಾಗ ಅಲ್ಲಿ ಪಾರ್ಕಿಂಗ್ ಸೌಲಭ್ಯ ಸಿಗುತ್ತದೆ.ಹಾಗಾಗಿ ಹೊಸ ಮಾದರಿಯಲ್ಲಿ ಪುತ್ತೂರು ವಿಸ್ತಾರವಾಗಿ ಬೆಳೆಯಬೇಕು ಎಂದರು.ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಈ ಹಿಂದೆ ಅರಣ್ಯ ಇಲಾಖೆಯ ಒಂದೂವರೆ ಎಕ್ರೆ ಜಾಗ ಪಾರ್ಕಿಂಗ್‌ಗೆ ಕೇಳಿದ್ದೆವು. ಅವರಿಗೆ ಬದಲಿಯಾಗಿ 3 ಎಕ್ರೆ ಜಾಗವನ್ನು ನಗರದ ಹೊರವಲಯದಲ್ಲಿ ಕೊಡುವ ಭರವಸೆ ನೀಡಲಾಗಿತ್ತು. ಸರಕಾರದ ನಿರ್ಣಯಕ್ಕೂ ಅದು ಹೋಗಿತ್ತು. ಆದರೆ ಅದು ಆಗಿಲ್ಲ. ಮಡಿವಾಳಕಟ್ಟೆಯ ಬಳಿಯೂ ಸಂತೆಗೆಂದು ಹಿಂದೊಮ್ಮೆ ಜಾಗ ಖರೀದಿಗೆ ಸಿದ್ದತೆ ಮಾಡಲಾಗಿತ್ತು.ಆ ಜಾಗಕ್ಕೆ ಮತ್ತೊಮ್ಮೆ ಪಾರ್ಕಿಂಗ್‌ಗಾಗಿ ಖರೀದಿ ಮಾಡುವ ಯೋಜನೆ ರೂಪಿಸಬಹುದು ಎಂದರು.


ಸ್ಪೀಡ್ ಬ್ರೇಕರ್, ಜೀಬ್ರಾಕ್ರಾಸ್ ಅಳವಡಿಕೆ: ಖಾಸಗಿ ಬಸ್ ನಿಲ್ದಾಣದ ಬಳಿ, ಚೇತನಾ ಆಸ್ಪತ್ರೆಯ ಬಳಿ, ಅಂಬಿಕಾ ವಿದ್ಯಾಲಯದ ಬಳಿ,ಲಿಟ್ಲ್ ಫ್ಲವರ್ ಶಾಲೆ ಬಳಿ, ತೆಂಕಿಲ, ಕರ್ಮಲ ಪಡೀಲ್, ಕೆಮ್ಮಿಂಜೆ ದೇವಸ್ಥಾನದ ಬಳಿ, ಹಾರಾಡಿ ಕಡೆಗಳಲ್ಲಿ ಸ್ಪೀಡ್ ಬ್ರೇಕರ್(ರೋಡ್ ಹಂಪ್ಸ್)ಅಳವಡಿಕೆಯಾಗಲಿದೆ. ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ರಚನೆ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಅವರು ಹಂಪ್ಸ್‌ನ್ನು ಪ್ಲ್ಯಾನ್ ಮಾಡಿ ಮಾಡುವಂತೆ ಸಲಹೆ ನೀಡಿದರು. ಈಗಿನ ವ್ಯವಸ್ಥೆಯಲ್ಲಿ ಹಂಪ್ಸ್‌ಗಳಲ್ಲಿ ಜೀಬ್ರಾ ಕ್ರಾಸ್ ಅಳವಡಿಸಬಹುದು. ಸೋಲಾರ್ ರಿಫ್ಲೆಕ್ಟರ್ ಅಳವಡಿಸುವ ಕುರಿತು ಸಭೆಯಲ್ಲಿ ತಿಳಿಸಲಾಯಿತು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ‍್ಯದರ್ಶಿ ಮನೋಜ್, ಕೋಶಾಧಿಕಾರಿ ಉಲ್ಲಾಸ್ ಪೈ, ರೋಟರಿ ಸಿಟಿ ಅಧ್ಯಕ್ಷ ಮಹಮ್ಮದ್ ಸಾಹೇಬ್ ವಿವಿಧ ಸಲಹೆ ಸೂಚನೆ ನೀಡಿದರು. ನಗರಸಭಾ ಸದಸ್ಯ ಯೂಸುಫ್ ಡ್ರಿಮ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಕುಟ್ಟಿ, ಪ್ರಾದೇಶಿಕ ಸಾರಿಗ ಅಧಿಕಾರಿ ವಿಶ್ವನಾಥ ಅಜಿಲ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್, ಶಬರೀನಾಥ್ ಸಹಿತ ಹಲವಾರು ಮಂದಿ ಅಽಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಎಸಿಸಿಇ(ಐ), ಅಧ್ಯಕ್ಷ ಪ್ರಮೋದ್, ನಗರಸಭೆ ಇಂಜಿನಿಯರ‍್ಸ್ ಸಹಕಾರ
ಕಾನೂನು ಬಿಟ್ಟು ಹೋಗುವಂತಿಲ್ಲ
2010ರಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆದಂತೆ 2012ರಲ್ಲಿ ಜಿಲ್ಲಾಧಿಕಾರಿಯವರು ಸುತ್ತೋಲೆ ಕಳುಹಿಸಿದ್ದಾರೆ.22 ಕಡೆ ಅಟೋ ರಿಕ್ಷಾ ಪಾರ್ಕಿಂಗ್ ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್, ಏಕಮುಖ ರಸ್ತೆ, ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮಿಷನರ್ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ನಿರ್ಣಯಿಸಿ ಆಗಿರುವ ಅನುಮೋದನೆಗಳು. ಈಗಿನ ಪರಿಸ್ಥಿತಿಯಲ್ಲೂ ಕಾನೂನಿನ ಪ್ರಕಾರ ನಗರಸಭೆ ಅಧಿಕಾರಿಗಳು ಏನು ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲು ಯಾವುದೇ ಸಮಸ್ಯೆ ಇಲ್ಲ.ಇಲ್ಲಿ ಆಟೋ ರಿಕ್ಷಾ ಪಾರ್ಕಿಂಗ್‌ಗೆ ಶುಲ್ಕ ಇಡಬಾರದು. ದ್ವಿಚಕ್ರ ವಾಹನಕ್ಕೆ ಶುಲ್ಕ ಪಾವತಿ ಇರಲಿ. ರಿಕ್ಷಾ ಪಾರ್ಕ್‌ಗೆ ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದ್ದರೆ ಮಾತ್ರ ಕೊಡಬಹುದು. ರಸ್ತೆಯಲ್ಲೇ ಪಾರ್ಕಿಂಗ್ ಕೊಡಲು ಕಾನೂನಿನಲ್ಲಿ ಅವಕಾಶವಿದೆಯಾ?. ಒಂದು ವೇಳೆ ಕೊಟ್ಟರೆ ಯಾರ ಮೇಲೆ ಕ್ರಮ ಎಂಬುದನ್ನು ನೋಡಬೇಕು. ಹಾಗಾಗಿ ಅದನ್ನು ಪೂರ್ತಿಯಾಗಿ ಸಂಚಾರ, ಆರ್‌ಟಿಒ, ನಗರಸಭೆ ಜಂಟಿಯಾಗಿ ಕೂತು ವಿಮರ್ಶೆ ಮಾಡಿ ಕೊಡಿ. ಕೌನ್ಸಿಲ್ ಅನ್ನು ಸಿಕ್ಕಿಸಿ ಹಾಕಬೇಡಿ. ನಾವು ಹೊಣೆಗಾರರಲ್ಲ. ಕೌನ್ಸಿಲ್‌ಗೆ ತರುವ ಮೊದಲು, ಯಾವುದೇ ರೀತಿಯ ನಿಮ್ಮ ವರದಿಯ ಮೇಲೆ ನಾವು ನಿರ್ಣಯ ಕೊಡುತ್ತೇವೆ. ನೀವು ವರದಿಯನ್ನು ಪಕ್ಕಾ ಮಾಡಿಕೊಡಬೇಕು-
ಕೆ.ಜೀವಂಧರ್ ಜೈನ್, ಮಾಜಿ ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here