ಪುತ್ತೂರು: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪುತ್ತೂರಿನ ಕೃಷ್ಣನಗರ ನಿವಾಸಿ ಐತ್ತಪ್ಪ ನಾಯ್ಕ್ ಗುಂಪೆ ಅವರನ್ನು ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಡಿ.15ರಂದು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೈದರಾಬಾದ್ ಮೂಲದ ಬಹುಜನ ಸಾಹಿತ್ಯ ಅಕಾಡೆಮಿ ಸಂಸ್ಥೆಯು 2023-24ನೇ ಸಾಲಿನ ಸೇವಾರತ್ನ ರಾಷ್ಟಿಯ ಪ್ರಶಸ್ತಿಗೆ ಐತ್ತಪ್ಪ ನಾಯ್ಕ್ ಅವರನ್ನು ಆಯ್ಕೆ ಮಾಡಿದೆ. ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಐತ್ತಪ್ಪ ನಾಯ್ಕ್ ಅವರು, ಪ್ರಸ್ತುತ ಆಯುರ್ವೇದದಿಂದ ಆರೋಗ್ಯ ಎಂಬ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದು, ಇದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಸೇವೆ ಗುರುತಿಸಿ ಬಹುಜನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಹೊಸದಿಲ್ಲಿಯ ಆಂಧ್ರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಮಾಜ ಕಲ್ಯಾಣ ಖಾತೆಯ ಸಚಿವರಾದ ಮುಕೇಶ್ ಕುಮಾರ್ ಅಹ್ಲಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಬಹುಜನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ನಲ್ಲ ರಾಧಾಕೃಷ್ಣನ್ ಮತ್ತು ಸಮಾಜ ಸೇವಕಿ ವೆಂಕಮ್ಮ ಅವರು ಉಪಸ್ಥಿತರಿದ್ದರು.