ನಿಡ್ಪಳ್ಳಿ: ಸ್ಥಗಿತಗೊಂಡಿದ್ದ ಅಂಬೇಡ್ಕರ್ ಭವನದ ಕಟ್ಟಡ ಕಾಮಗಾರಿ ಪುನರಾರಂಭ – ಸುದ್ದಿ ವರದಿ ಫಲಶ್ರುತಿ

0

ಪುತ್ತೂರು ತಾಲೂಕಿನ ನಿಡ್ಪಳ್ಳಿಯಲ್ಲಿ 2023ನೇ ಜನವರಿ ತಿಂಗಳಲ್ಲಿ ಆರಂಭಿಸಲಾಗಿದ್ದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ತಿಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾರಿ ಅರ್ಧದಲ್ಲೇ ನಿಂತಿತ್ತು, ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕೆಆರ್‌ಐಡಿಎಲ್ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಅಂಬೇಡ್ಕರ್ ಭವನ ಅರ್ದದಲ್ಲೇ ಬಾಕಿಯಾಗಿದೆ ಎನ್ನುವ ಆರೋಪ ಸ್ಥಳೀಯವಾಗಿ ವ್ಯಕ್ತವಾಗಿತ್ತು. ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿದ್ದರ ಬಗ್ಗೆ ಅ.5ರಂದು ಸುದ್ದಿ ಪತ್ರಿಕೆ ಮತ್ತು ವೆಬ್‌ಸೈಟ್ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.

ನಿಡ್ಪಳ್ಳಿ ಗ್ರಾಮದ ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಿದ 18 ಸೆಂಟ್ಸ್ ಜಾಗದ ಪೈಕಿ 10 ಸೆಂಟ್ಸ್ ಸ್ಥಳದಲ್ಲಿ 2023ನೇ ಸಾಲಿನ ಜನವರಿ ತಿಂಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಕಾಂಕ್ರೀಟ್ ಬೆಲ್ಟ್ ಬಳಸಿದ ಅಡಿಪಾಯದೊಂದಿಗೆ ಪಿಲ್ಲರ್ ಅಳವಡಿಸಿ ಆರಂಭಿಸಲಾಗಿದ್ದ ಕಾಮಗಾರಿ ಲಿಂಟಲ್ ಹಂತದಲ್ಲೇ ಸ್ಥಗಿತಗೊಂಡಿತ್ತು. ಕಳೆದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲು ಅಪೂರ್ಣ ಗೋಡೆ ಹಂತದಲ್ಲಿ ಅರ್ಧಂಬರ್ಧ ಸ್ಥಿತಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮತ್ತೆ ಮುಂದುವರಿಸುವ ಕೆಲಸ ಈ ತನಕ ನಡೆದಿಲ್ಲ.
ಅರ್ಧಂಬರ್ಧ ಕಾಮಗಾರಿ ನಿರ್ವಹಿಸಿ ಅರ್ಧದಲ್ಲೇ ಸ್ಥಗಿತಗೊಳಿಸಿ ಹೋದ ಕೆಆರ್‌ಐಡಿಎಲ್ ಸಂಸ್ಥೆಯವರ ಪತ್ತೆಯೇ ಇಲ್ಲ ಎಂದು ಆ ಈ ಭಾಗದ ದಲಿತ ಸಮುದಾಯದವರು ಆರೋಪಿಸಿದ್ದರು. ನಿಡ್ಪಳ್ಳಿಯಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಗೋಡೆ ಹಂತದಲ್ಲೇ ಬಾಕಿಯಾಗಿರುವ ಅಂಬೇಡ್ಕರ್ ಭವನದ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಿಡ್ಪಳ್ಳಿ ಗ್ರಾಮಸ್ಥರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಇತ್ತೀಚೆಗೆ ಮನವಿಯನ್ನೂ ಸಲ್ಲಿಸಿದ್ದರು.

ಸ್ಥಗಿತಗೊಂಡಿದ್ದ ಕಾಮಗಾರಿ ಪುನರಾರಂಭಗೊಂಡಿರುವುದಕ್ಕೆ ಆ ಭಾಗದ ದಲಿತ ಸಮುದಾದವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಭವನಕ್ಕಾಗಿ 2001ರಿಂದ ನಾವು ಹೋರಾಟ ಮಾಡಿದ ಫಲವಾಗಿ ಇಲ್ಲಿಗೆ ಅಂಬೇಡ್ಕರ್ ಭವನ ಮಂಜೂರಾಗಿತ್ತು. ಅರ್ಧದಲ್ಲಿ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸದಿದ್ದಲ್ಲಿ ದಲಿತ ಸಮುದಾಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ನಾವು ಎಚ್ಚರಿಕೆ ನೀಡಿದ್ದೆವು. ಮಾತ್ರವಲ್ಲದೇ ಅಂಬೇಡ್ಕರ್ ಭವನ ಕಟ್ಟಡದ ಕಾಮಗಾರಿ ಅರ್ದದಲ್ಲಿ ಸ್ಥಗಿತಗೊಂಡಿದ್ದರ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ವೆಬ್‌ಸೈಟ್ ವಿಸ್ತೃತವಾದ ವರದಿಯನ್ನು ಇತ್ತೀಚೆಗೆ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದು ಅದಕ್ಕಾಗಿ ‘ಸುದ್ದಿ’ ಸಂಸ್ಥೆಗೆ ಅಭಿನಂದನೆ ಸಲ್ಲಿಸುವುದಾಗಿ ಸ್ಥಳೀಯ ಮುಖಂಡರು, ಸಾಮಾಜಿಕ ಹೋರಾಟಗಾರರೂ ಆಗಿರುವ ಕೃಷ್ಣ ನಿಡ್ಪಳ್ಳಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here