ಪುತ್ತೂರು: ರೈತರ ಮತ ಪಡೆದ ಈಗಿನ ರಾಜ್ಯ ಸರಕಾರ ರೈತರ ಸವಲತ್ತಿನ ಹಕ್ಕುಗಳನ್ನು ಕಸಿಯುತ್ತಿದೆ. ಈ ಕೀರ್ತಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕೃಷಿಗೆ ಅಲ್ಪಸ್ವಲ್ಪ ಸಹಾಯವಾಗುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯ ಸರಕಾರದಿಂದ ಬರುತ್ತಿದ್ದ ರೂ.4ಸಾವಿರವನ್ನು ನಿಲ್ಲಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ ರೂ. 1.50 ಕಡಿಮೆ ಮಾಡಲಾಗಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಈ ಹಿಂದೆ ರೂ.25ಸಾವಿರದಲ್ಲಿ ಟಿ.ಸಿ, ವಿದ್ಯುತ್ ಕಂಬ, ತಂತಿ ಉಚಿತವಾಗಿ ನೀಡಲಾಗುತ್ತಿತ್ತು. ಈಗ ಕನಿಷ್ಠ ರೂ.1ಲಕ್ಷದಿಂದ ಗರಿಷ್ಠ ರೂ. 5 ಲಕ್ಷದ ತನಕ ಖರ್ಚು ಮಾಡಿ ವಿದ್ಯುತ್ ಸಂಪರ್ಕ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ರೈತರ ಮಕ್ಕಳಿಗಿದ್ದ ರೈತ ವಿದ್ಯಾರ್ಥಿ ನಿಧಿಯನ್ನು ನಿಲ್ಲಿಸಲಾಗಿದೆ. ಆರ್.ಟಿ.ಸಿ ಎಂ.ಆರ್. ಇ.ಸ್ಟ್ಯಾಂಪ್‌ಗಳು ಮತ್ತು ಕಂದಾಯ ಇಲಾಖೆಯ ಇತರೆ ಶುಲ್ಕಗಳನ್ನು ದುಬಾರಿ ಮಾಡಲಾಗಿದೆ ಎಂದು ಹೇಳಿದ ಅವರು ಕೇರಳದ ವ್ಯಕ್ತಿಗೆ ನಮ್ಮ ರಾಜ್ಯದ ಆನೆ ತುಳಿತದಿಂದ ಸತ್ತ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ರೂ.15ಲಕ್ಷ ಪರಿಹಾರ ನೀಡಿದ್ದು, ನಮ್ಮ ರಾಜ್ಯದ ರೈತ ಕೃಷಿ ಚಟುವಟಿಕೆಯಲ್ಲಿದ್ದ ಸಂದರ್ಭ ಆನೆ ತುಳಿತದಿಂದ ಸತ್ತಾಗ ಕೇವಲ ರೂ.1 ರಿಂದ 2 ಲಕ್ಷದ ತನಕ ಪರಿಹಾರ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಇಂತಹ ರೈತ ವಿರೋಧಿ ಸರಕಾರವನ್ನು ಎದುರಿಸಲು ವಿರೋಧ ಪಕ್ಷ ಸಮರ್ಥವಾಗಿಲ್ಲ ಎಂಬುದು ದುರಾದೃಷ್ಟಕರ. ಆದರೆ ರೈತರು ಎಲ್ಲಿಯಾದರೂ ತಿರುಗಿ ಬಿದ್ದರೆ ಸರಕಾರವನ್ನು ಏನೂ ಮಾಡಬಹುದು. ಹಾಗಾಗಿ ಭಾರತೀಯ ಕಿಸಾನ್ ಸಂಘ ರಾಜ್ಯ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದರು.
ಕುಮ್ಮಿ ಹೋರಾಟ ಸಮಿತಿ ಪ್ರಮುಖರಾಗಿರುವ ಸತ್ಯನಾರಾಯಣ ಭಟ್ ಎಂ.ಜಿ ಅವರು ಮಾತನಾಡಿ, ರೈತರ ಬಹುಕಾಲದ ಬೇಡಿಕೆಯಾದ ಕುಮ್ಕಿ, ಕಾನ, ಬಾಣೆ ಭೂಮಿಯ ಸಾಗುವಳಿ ಚೀಟಿಯನ್ನು ಕಾನೂನು ಮಾಡಿ ರೈತರಿಗೆ ಕೊಡಬೇಕು. ಆದರೆ ಈಗಾಗಲೇ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ರೈತರನ್ನು ಹುಡುಕಿ ಹುಡುಕಿ ನೋಟಿಸ್ ನೀಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ರಾಜ್ಯ ಸರಕಾರದ ಆದೇಶವನ್ನು ನಾವು ಮಾಡಲೇಬೇಕು. ನೀವು ಕುಮ್ಕಿಯನ್ನು ಕೊಡಲೇಬೇಕೆಂದು ಹೇಳುತ್ತಿದ್ದಾರೆ. ಮಂಗಳೂರಿನಲ್ಲಿ ಡ್ರೋನ್ ಸರ್ವೆ ಮಾಡುತ್ತಿದ್ದಾರೆ ಎಂದ ಅವರು ರೈತರ ಮೂಲದಾಖಲೆಯಲ್ಲಿರುವ ಕೃಷಿ ಭೂಮಿಯನ್ನು ಸರಿ ಮಾಡಿಕೊಡುವಂತೆ ಆಗ್ರಹಿಸಿದರು.
ಅಡಿಕೆ ಬೆಳಗಾರರು ಎಲೆಚುಕ್ಕಿ ಬಾದೆ ಮತ್ತು ಹಳದಿ ಎಲೆ ರೋಗದಿಂದಾಗಿ ಆತಂಕ ಪಟ್ಟಿದ್ದಾರೆ. ಈ ಕುರಿತು ಇಲಾಖೆಗಳು ಜಾಗೃತಗೊಳ್ಳಬೇಕು ಮತ್ತು ಸೂಕ್ತ ಪರಿಹಾರ ವ್ಯವಸ್ಥೆಯನ್ನು ಕಲ್ಪಸುವಂತೆ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲಾ ಮಹಿಳಾ ಪ್ರಮುಖ್ ಶಾಂಭವಿ ಉಪಸ್ಥಿತರಿದ್ದರು.