ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್‌ನ ಡಿಸೆಂಬರ್ ತಿಂಗಳ ಸಾಮಾನ್ಯ ಸಭೆ ಡಿ.9ರಂದು ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಗ್ರಾಮಕ್ಕೆ ಆಶಾ ಕಾರ್ಯಕರ್ತೆ ನೇಮಕ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಕುಂತೂರು ಗ್ರಾಮದ ಆಶಾ ಕಾರ್ಯಕರ್ತೆಯಾದ ರೋಸ್ಲಿ ಅವರು ರಾಜೀನಾಮೆ ನೀಡಿದ್ದು ಈ ಬಗ್ಗೆ ವೈದ್ಯಾಧಿಕಾರಿಯವರು ಗ್ರಾಮ ಪಂಚಾಯತ್‌ಗೆ ಪತ್ರ ಬರೆದಿರುವ ವಿಚಾರವನ್ನು ಪಿಡಿಒ ಅವರು ಸಭೆಗೆ ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ತೆರವಾದ ಸ್ಥಾನಕ್ಕೆ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ನೀಡುವಂತೆ ವೈದ್ಯಾಧಿಕಾರಿಯವರಿಗೆ ಬರೆದುಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ತಡವಾಗಿ ಸಭೆ ಆರಂಭ:
ಸಭೆಯ ಆರಂಭದಲ್ಲಿ ಸದಸ್ಯರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಸಭೆ ನಡೆಸಲು ಕೋರಂ ಕೊರತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಗಂಟೆ ತಡವಾಗಿ ಆರಂಭಿಸಲಾಯಿತು. ಸದಸ್ಯರು ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗುವಂತೆ ಅಧ್ಯಕ್ಷೆ ಸಂಧ್ಯಾ ಕೆ.ಅವರು ಸೂಚಿಸಿದರು.
ಹಿಂದಿನ ಸಭೆಯ ವರದಿ ಹಾಗೂ ಜಮಾಖರ್ಚುಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸರಕಾರದಿಂದ ಹಾಗೂ ವಿವಿಧ ಇಲಾಖೆಗಳಿಂದ ಬಂದ ಸುತ್ತೋಲೆಗಳನ್ನು ಪಿಡಿಒ ಶಾಲಿನಿ ಕೆ.ಬಿ.ಅವರು ಸಭೆಗೆ ಮಂಡಿಸಿದರು. ಸಾರ್ವಜನಿಕ ಅರ್ಜಿಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ ಕೆ., ಸದಸ್ಯರಾದ ಮೋಹನ್‌ದಾಸ್ ರೈ, ಚಂದ್ರಶೇಖರ ರೈ, ಸುಶೀಲ, ಕಾವೇರಿ, ಸಿ.ಯಂ.ಫಯಾಜ್, ಲೀಲಾವತಿ, ಸದಾನಂದ, ಮೋನ್ಸಿ ಸಾಜನ್, ಬಿ.ಕೆ.ಕುಮಾರ, ಮೋಹಿನಿ, ಪಿ.ಜಿ.ರಾಜು ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ.ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.