ಪುತ್ತೂರು: ವಿಶೇಷ ಚೇತನರಿಗೆ ಅದರಲ್ಲೂ ಮಲಗಿದ್ದಲ್ಲೇ ಇರುವ ಮಕ್ಕಳಿಗೆ ಅವರ ಪೋಷಕರು ತೀರಿಕೊಂಡ ಬಳಿಕ ಅವರನ್ನು ನೋಡಿಕೊಳ್ಳುವವರು ಯಾರು? ಇಂತಹ ಬಹಳಷ್ಟು ವಿಶೇಷ ಚೇತನರು ನಮ್ಮ ತಾಲೂಕಿನಲ್ಲಿದ್ದಾರೆ ಆದ್ದರಿಂದ ಅಂತಹ ಮಕ್ಕಳಿಗೆ ಸರಕಾರದ ವತಿಯಿಂದ ತಾಲೂಕಿನಲ್ಲಿ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಆಗಬೇಕು ಎಂದು ಒಳಮೊಗ್ರು ಗ್ರಾಪಂನಲ್ಲಿ ನಡೆದ ವಿಶೇಷ ಚೇತನರ ಸಮನ್ವಯ ಗ್ರಾಮಸಭೆಯಲ್ಲಿ ಪೋಷಕರು ಮನವಿ ಮಾಡಿಕೊಂಡರು.
ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.21 ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ರಾಧಾ ಎಸ್.ಉರ್ವರವರು, ನನ್ನ ಮಗಳು ಸಂಪೂರ್ಣ ವಿಶೇಷ ಚೇತನರಾಗಿದ್ದು ಮಲಗಿದ್ದಲ್ಲೇ ಇದ್ದಾಳೆ. ನಾನೇ ಅವಳಿಗೆ ಊಟದಿಂದ ಹಿಡಿದು ಎಲ್ಲವನ್ನು ಮಾಡಿಸಬೇಕಾಗಿದೆ. ನಾನು ತೀರಿಕೊಂಡ ಬಳಿಕ ಅವಳ ಪರಿಸ್ಥಿತಿ ಎಲ್ಲಿಗೆ ಬಂದೀತು ಅವಳನ್ನು ನೋಡಿಕೊಳ್ಳುವವರು ಯಾರು? ಇದು ನನ್ನೊಬ್ಬಳ ನೋವಲ್ಲ, ವಿಶೇಷ ಚೇತನ ಮಕ್ಕಳನ್ನು ಹೊಂದಿರುವ ಅನೇಕ ತಾಯಂದಿರ ನೋವಾಗಿದೆ ಆದ್ದರಿಂದ ಇಂತಹ ವಿಶೇಷ ಚೇತನ ಮಕ್ಕಳ ಪೋಷಕರು ತೀರಿಕೊಂಡ ಬಳಿಕ ಅವರನ್ನು ಸರಕಾರವೇ ನೋಡಿಕೊಳ್ಳುವ ರೀತಿಯಲ್ಲಿ ಒಂದು ಪುನರ್ವಸತಿ ಕೇಂದ್ರದ ಅಗತ್ಯತೆ ಇದೆ ಎಂದು ಅವರು ಬಹಳ ನೋವಿನಲ್ಲಿ ಕೇಳಿಕೊಂಡರು. ಇದಕ್ಕೆ ಎಲ್ಲಾ ಪೋಷಕರು ಧ್ವನಿಗೂಡಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಅದರಂತೆ ನಿರ್ಣಯಿಸಲಾಯಿತು.
ಮತದಾನ ಮಾಡಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬರುತ್ತಿಲ್ಲ…!?
ನಡೆಯಲು ಸಾಧ್ಯವಿಲ್ಲದೇ ಇರುವ ವಿಶೇಷ ಚೇತನರ ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ಮತದಾನ ಮಾಡಿಸಿಕೊಂಡು ಹೋಗಬೇಕು ಎಂಬ ಕಾನೂನು ಇದ್ದರೂ ನನ್ನ ಮನೆ ಬಾಗಿಲಿಗೆ ಅಧಿಕಾರಿಗಳು ಈ ತನಕ ಬಂದಿಲ್ಲ, ನನ್ನ ಮಗಳನ್ನು ನಾನು ಎತ್ತಿಕೊಂಡು ಬಂದು ಮತದಾನ ಮಾಡಿಸುತ್ತಿದ್ದೇನೆ. ಇದಲ್ಲದೆ ಒಂದೊಮ್ಮೆ ಆಧಾರ್ ಕಾರ್ಡ್ ತಂದಿಲ್ಲ ಎಂದುಕೊಂಡು ಅಧಿಕಾರಿಯೊಬ್ಬರು ಮಗಳಿಗೆ ಮತದಾನ ಮಾಡಿಸಲು ಒಪ್ಪಲಿಲ್ಲ ಸುಮಾರು 1 ಗಂಟೆ ಕಾಯಿಸಿದ್ದಾರೆ. ಮತದಾನದ ಚೀಟಿ ಇದ್ದರೂ ಆಧಾರ್ ಕಾರ್ಡ್ ತಂದ ಬಳಿಕವೇ ಮತದಾನ ಮಾಡಲು ಅವಕಾಶ ನೀಡಿದ್ದಾರೆ. ಇಂತಹ ಕಠೋರ ಅಧಿಕಾರಿಗಳು ಕೂಡ ಇದ್ದಾರೆ. ಇದು ನ್ಯಾಯವೇ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಸುಬು ಕೆ.ಅಡ್ಕ ಪ್ರಶ್ನಿಸಿದರು. ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆಯಿತು. ಕೊನೆಗೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಗ್ರಾಮ ಆಡಳಿತ ಅಧಿಕಾರಿಯವರನ್ನು ಸಭೆಗೆ ಕರೆಸಿ ವಿಷಯ ತಿಳಿಸಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಗ್ರಾಮ ಆಡಳಿತ ಅಧಿಕಾರಿ ಸುಮನ್ರವರು ತಿಳಿಸಿದರು.
ಸರಕಾರದ ಅನುದಾನಗಳ ಮಾಹಿತಿ ಕೊರತೆ
ಸರಕಾರದಿಂದ ಶಾಸಕರ, ಸಂಸದರ, ಜಿಲ್ಲೆ,ತಾಲೂಕು ಪಂಚಾಯತ್ನಿಂದ ವಿಶೇಷ ಚೇತನರಿಗೆ ಯಾವುದಾದರೂ ಅನುದಾನ ಬಂದಿರುವ ಮಾಹಿತಿ ಇದೆಯಾ ಎಂದು ಯೂಸುಫ್ ಪ್ರಶ್ನಿಸಿದರು.ಈ ಬಗ್ಗೆ ಗ್ರಾಪಂ ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತ ಮೋಹನ್ರವರು ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಸುಬು ಕೆ.ರವರು ಯಾರಿಗೂ ಬಂದಿಲ್ಲ, ಬಂದಿರುವುದಾದರೆ ನಮಗೆ ಪೋಷಕರಿಗೆ ಗೊತ್ತಿರಬೇಕು ಆದರೆ ಯಾರಿಗೂ ಯಾವುದೇ ಅನುದಾನಗಳು ಬಂದಿಲ್ಲ ಎಂದು ಅವರು ತಿಳಿಸಿದರು. ವಿಶೇಷ ಚೇತನರಿಗೆ ಸರಕಾರದಿಂದ ವಿವಿಧ ಅನುದಾನಗಳು ಲಭ್ಯವಿದೆ. ಆದರೆ ಪೋಷಕರಿಗೆ ಇದರ ಮಾಹಿತಿ ಕೊರತೆ ಇದೆ. ಈ ಬಗ್ಗೆ ಮಾಹಿತಿ ಕೊಡುವ ಕೆಲಸ ಆಗಬೇಕು ಎಂದು ಪೋಷಕರು ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು
ವಿಶೇಷ ಚೇತನರ ಬಗ್ಗೆ ಹೇಳಿಕೊಳ್ಳಲು ಬಹಳಷ್ಟು ಸಮಸ್ಯೆಗಳಿವೆ. ಆದರೆ ಈ ಸಮಸ್ಯೆಗಳಿಗೆ ಸರಿಯಾದ ಉತ್ತರ ನೀಡುವವರು ಇಲ್ಲದಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿಶೇಷ ಚೇತನರ ಗ್ರಾಮಸಭೆಗಳಿಗೆ ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಹರೀಶ್ ಆಚಾರ್ಯ ಪರ್ಪುಂಜ, ಲಕ್ಷ್ಮಣ ನಾಯ್ಕ ಅಜ್ಜಿಕಲ್ಲು ಮತ್ತಿತರರು ತಿಳಿಸಿದರು. ಇದಕ್ಕೆ ಎಲ್ಲಾ ಪೋಷಕರು ಸಹಮತ ವ್ಯಕ್ತಪಡಿಸಿದರು.
ಗ್ರಾಮ ಅಥವಾ ತಾಲೂಕು ಮಟ್ಟದಲ್ಲಿ ಆರೋಗ್ಯ ತಪಾಸಣೆ ನಡೆಯಲಿ
ವಿಶೇಷ ಚೇತನರಿಗೆ ಹಾಗೂ ಎಂಡೋ ಪೀಡಿತರಿಗೆ ದೂರದ ಕೊಯಿಲದಲ್ಲಿ ಹಾಗೂ ಸೌತಡ್ಕದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿವೆ. ಇದು ಬಹಳಷ್ಟು ದೂರ ಆಗುವುದರಿಂದ ಇಷ್ಟು ದೂರಕ್ಕೆ ಒಬ್ಬ ವಿಶೇಷ ಚೇತನ ಮಗುವನ್ನು ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಆದ್ದರಿಂದ ತಾಲೂಕಿನಲ್ಲಿ ಅಥವಾ ಗ್ರಾಮ ಮಟ್ಟದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕು ಎಂದು ಪೋಷಕರು ಆಗ್ರಹಿಸಿದರು. ಇಸುಬು ಕೆ, ಇಬ್ರಾಹಿಂ ಉಜಿರೋಡಿ, ಸಲಾಂ ಶೇಖಮಲೆ, ವಿಜಯ ಕುಮಾರ್ ರೈ ಮುಗೇರು, ರಾಧಾ ಎಸ್.ಉರ್ವ, ರುಕ್ಯಾ ಬೊಳ್ಳಾಡಿ, ಹರೀಶ್ ಆಚಾರ್ಯ ಪರ್ಪುಂಜ, ಲಕ್ಷ್ಮಣ ನಾಯ್ಕ ಅಜ್ಜಿಕಲ್ಲು ಸೇರಿದಂತೆ ಹಲವು ಮಂದಿ ಪೋಷಕರು ಪ್ರಶ್ನೆ, ಮಾಹಿತಿಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಪಂ ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತ ಮೋಹನ್ ಕೆ.ಪಿ ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ, ಲತೀಪ್ ಕುಂಬ್ರ, ಸುಂದರಿ ಪರ್ಪುಂಜ ಸೇರಿದಂತೆ ವಿಶೇಷ ಚೇತನರು, ಅವರ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸ್ವಾಗತಿಸಿ, ವಿಶೇಷ ಚೇತನರಿಗೆ ಪಂಚಾಯತ್ನಿಂದ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಪಂಚಾಯತ್ ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಲೋಕನಾಥ ಸಹಕರಿಸಿದ್ದರು.
ಹಕ್ಕನ್ನು ಪಡೆಯುವಲ್ಲಿ ಹಿಂದೇಟು ಹಾಕಬಾರದು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಶಿವಪ್ಪ ರಾಥೋಡ್ರವರು ಅಂಗವಿಕಲ ಕಾನೂನು ಅಧಿನಿಯಮ ೨೦೧೬ ಮತ್ತು ಸವಲತ್ತುಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿದರು. ಪೋಷಕರು ಅಂಗವಿಕಲರ ಹಕ್ಕುಗಳು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಹೊಂದಬೇಕು, ಹಕ್ಕನ್ನು ಪಡೆಯುವುದರಲ್ಲಿ ಹಿಂದೇಟು ಹಾಕಬಾರದು, ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಇತರೆ ನಾಗರೀಕರಂತೆ ಮುಂದುವರಿಯಲು ಸಾಧ್ಯವಿದೆ ಎಂದ ಅವರು, ವಿಶೇಷ ಚೇತನರಿಗೆ ಯಾವುದೇ ರೀತಿಯ ತೊಂದರೆ ನೀಡಿದ್ದಲ್ಲಿ ಜೈಲು ಮತ್ತು ದಂಡ ಹಾಗೇ ವಿಶೇಷ ನ್ಯಾಯಾಲಯ ಇರುವ ಬಗ್ಗೆ ರಾಥೋಡ್ರವರು ಮಾಹಿತಿ ನೀಡಿದರು.
ಒಳಮೊಗ್ರು ಗ್ರಾಮದಲ್ಲಿ 91 ಮಂದಿ ವಿಶೇಷ ಚೇತನರು ಇದ್ದಾರೆ. 90 ಮಂದಿಗೂ ಆಧಾರ್ ಮತ್ತು ಯುಡಿಐಡಿ ಕಾರ್ಡ್ ಆಗಿರುತ್ತದೆ. ಬಿಪಿಎಲ್ ಕಾರ್ಡ್ದಾರರಿಗೆ ಮಾಸಿಕ ವೇತನ ಬರುತ್ತಿದೆ.
‘ ಸಭೆಯಿಂದ ಕೇಳಿ ಬಂದ ಬೇಡಿಕೆಗಳಾದ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಸ್ಥಾಪನೆ, ಸಭೆಗೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು, ತಾಲೂಕು, ಗ್ರಾಮ ಮಟ್ಟದಲ್ಲಿ ಆರೋಗ್ಯ ತಪಾಸಣೆ ನಡೆಯಬೇಕು ಇತ್ಯಾದಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು ಸರಕಾರಕ್ಕೆ ಸಲ್ಲಿಸಲಾಗುತ್ತದೆ. ವಿಶೇಷ ಚೇತನರನ್ನು ಅಧಿಕಾರಿಗಳು ಅತ್ಯಂತ ತಳಮಟ್ಟದಲ್ಲಿ ಕಾಣುತ್ತಿದ್ದಾರೆ ಎನ್ನುವುದನ್ನು ತಿಳಿದು ಬೇಸರವಾಗಿದೆ. ವಿಶೇಷ ಚೇತನರಿಗೂ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಹಕ್ಕಿದೆ. ಇದನ್ನು ನಾವುಗಳು ತಿಳಿದುಕೊಳ್ಳಬೇಕು ಮತ್ತು ಅವರಿಗೆ ಗೌರವ ನೀಡಬೇಕಾಗಿದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ