ಪುತ್ತೂರು: ಡಿ.22ರಂದು ಸಂಜೆ ನರಿಮೊಗರು ಸಮೀಪ ನಡೆದ ಬೈಕ್ ಮತ್ತು ಪಿಕಪ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೈಕ್ ಸಹ ಸವಾರ ಗೌತಮ್(26.ವ) ಚಿಕಿತ್ಸೆಗೆ ಸ್ಪಂಧಿಸದೆ ಡಿ.23ರಂದು ಮೃತಪಟ್ಟಿದ್ದಾರೆ.
ಸವಣೂರಿನಿಂದ ಸೌಂಡ್ಸ್ ಸಿಸ್ಟಮ್ ಹೊತ್ತ ಪಿಕಪ್ ವಾಹನ ಪುತ್ತೂರು ಕೆಮ್ಮಾಯಿ ಕಡೆ ಬರುತ್ತಿದ್ದ ಸಂದರ್ಭ ನರಿಮೊಗರು ಶಾಲಾ ಬಳಿ ತಲುಪುತ್ತಿದ್ದಂತೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸುಳ್ಯ ಕೊಡಿಯಾಳ ನಿವಾಸಿ ಲೋಲಾಕ್ಷ(24.ವ) ಮತ್ತು ಸಹಸವಾರ ಚೊಕ್ಕಾಡಿ ಮೂಲದ ಗೌತಮ್ ಎಂಬವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ಅವರನ್ನು ಆಂಬುಲೆನ್ಸ್‌ನಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಗೌತಮ್ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಪಿಕಪ್ ಚಾಲಕ ಮಾಡ್ನೂರು ಗ್ರಾಮದ ಧನಂಜಯ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.