ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ವಿಕಸಿತ ಸಂಭ್ರಮ ನಡೆಯಿತು.ಅನಂತಾಡಿ ಸ.ಹಿ.ಪ್ರಾ ಉನ್ನತೀಕರಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ರೈ ಧ್ಜಜಾರೋಹಣಗೈದು, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಉದ್ಘಾಟಿಸಿ, ಉತ್ತಮ ಆಹಾರಾಭ್ಯಾಸ, ಕ್ರೀಡಾ ತರಬೇತಿ ಮತ್ತು ಪ್ರೇರಣೆಯಿಂದಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಸಂಸ್ಥೆ ಗುರುತಿಸುವಂತಾಗಿದೆ ಅದೇ ರೀತಿ ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನಿಸಿ ಎಂದರು. ಕ್ರೀಡಾಕೂಟದ ಪಥ ಸಂಚಲನದ ವಂದನಾ ಸ್ವೀಕಾರ ಮಾಡಿದ ಮಹಿಳಾ ಪೋಲೀಸ್ ಠಾಣೆಯ PSI ಸವಿತಾ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಗಳ ಬಗ್ಗೆಯೂ ಅರಿವನ್ನು ಬೆಳೆಸಿಕೊಳ್ಳಬೇಕು ಮತ್ತು ಪೋಲೀಸ್ ಇಲಾಖೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ರಕ್ಷಣೆಯಲ್ಲಿ ಸದಾ ನೆರವನ್ನು ನೀಡಲು ಸಿದ್ಧವಿದೆ ಎಂದು ಹೇಳಿದರು.
ಅಭ್ಯಾಗತ ಶಾಲಾ ಹಿರಿಯ ವಿದ್ಯಾರ್ಥಿ ಐ.ಟಿ ಇಂಡಸ್ಟ್ರಿ ಬೆಂಗಳೂರಿನಲ್ಲಿ ಸೀನಿಯರ್ ಟೆಕ್ನಿಕಲ್ ರೈಟರ್ ಆಶಿಶ್ ಜೆ.ಜಿ ಮಾತನಾಡಿ ಕಲಿಕೆಯಲ್ಲಿ ಮಾಧ್ಯಮ ಮುಖ್ಯವಲ್ಲ, ಮಕ್ಕಳಲ್ಲಿ ಸಾಧಿಸುವ ಛಲ ನಿರಂತರವಿದ್ದರೆ ಯಶಸ್ಸು ತಾನಾಗಿ ಲಭಿಸುತ್ತದೆ ಎಂದರು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹದಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಳುಗಳು ಹೆಚ್ಚಿನ ಪದಕ ಪಡೆಯಲು ಸಾಧ್ಯವಾಗುತ್ತಿದೆ ಮತ್ತು ಶಾಲೆಯಲ್ಲಿ ಸಿಗುತ್ತಿರುವ ಕ್ರೀಡಾ ಪ್ರೋತ್ಸಾಹವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು. ಶಾಲಾ ಕ್ರೀಡಾಮಂತ್ರಿ ಪವನ್ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ಚಂದ್ರ, ಸಂಚಾಲಕ ವಸಂತ ಸುವರ್ಣ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಜ್ಞಾ ನಿಡ್ವಣ್ಣಾಯ ಪ್ರಾರ್ಥಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ನಮಿತಾ ಕೆ.ಕೆ ಸ್ವಾಗತಿಸಿ, ಸಹಶಿಕ್ಷಕಿ ಸುಶ್ಮಿತಾ ವಂದಿಸಿದರು. ಶಿಕ್ಷಕಿಯರಾದ ಗೀತಾ ಮತ್ತು ಪ್ರತೀಕ್ಷಾ ನಿರೂಪಿಸಿದರು.