ಧರ್ಮನಗರ ಮಲರಾಯ ಜೇರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

0

*ಉತ್ತಮ ಕಾರ್ಯವನ್ನು ಎಲ್ಲರೂ ಒಂದಾಗಿ ಮಾಡೋಣ: ಅಶೋಕ್ ಕುಮಾರ್ ರೈ
*ಸಂಘಟನೆಯ ಶಕ್ತಿಗೆ ಈ ಒಂದು ಕಾರ್ಯಕ್ರಮ ಸಾಕ್ಷಿಯಾಗಿದೆ: ಸಂಜೀವ ಮಠಂದೂರು
*ದೈವ ದೇವರ ಆರಾಧನೆಯಲ್ಲಿ ಪರಿಮಿತಿ‌ ಇಲ್ಲ: ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು
*ದೈವ ದೇವರ ಆರಾಧನೆಯಿಂದ ನೆಮ್ಮದಿ ಪ್ರಾಪ್ತಿ: ದಿವಾಕರ ದಾಸ್ ನೇರ್ಲಾಜೆ
*ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕಾರ್ಯಕ್ರಮವಿದು: ಪಂಜಿಗುಡ್ಡೆ ಈಶ್ವರ ಭಟ್
*ಬಹಳಷ್ಟು ಕುಷಿಕೊಡುವ ಕೆಲಸ ಇಲ್ಲಿ ನಡೆದಿದೆ: ಲೊಕೇಶ್ ಶೆಟ್ಟಿ ಕಲ್ಲಂದಡ್ಕ

ಚಿತ್ರ : ಗುಹಾ ಕಬಕ

ವಿಟ್ಲ: ಶ್ರದ್ಧಾ ಭಕ್ತಿಯ ಕೈಂಕರ್ಯ ಇಲ್ಲಿ ನಡೆದಿದೆ. ದೇವಸ್ಥಾನ ದೈವಸ್ಥಾನಗಳು ನಮ್ಮ ಬದುಕಿಗೆ ದಾರಿದೀವಿಗೆ. ಧಾರ್ಮಿಕ ಭಾವನೆ‌ ಎಲ್ಲರಲ್ಲೂ ಜಾಗೃತವಾಗಬೇಕು.
ಆತ್ಮವಿಶ್ವಾಶ ಗಟ್ಟಿಯಾಗಲು ದೈವ – ದೇವರ ಉಪಾಸನೆ ಅತೀ ಅಗತ್ಯ. ದೇಶ – ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು. ತ್ಯಾಗಮಯ ಜೀವನ ನಮ್ಮದಾಗಬೇಕು. ದೇವರನ್ನು ನಂಬಿಕೆಯಿಂದ ನಂಬಬೇಕು. ಇದೊಂದು ಮಾದರಿ ಗ್ರಾಮವಾಗಲಿ ಎಂದು ಕೊಂಡೆಯೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿರವರು ಹೇಳಿದರು.

ಅವರು ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರದಲ್ಲಿ ಡಿ.21ರಿಂದ ಡಿ.25ರ ವರೆಗೆ ಬ್ರಹ್ಮಶ್ರೀ ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಡಿ.22ರಂದು ಸಾಯಂಕಾಲ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಮಾತನಾಡಿ ಭಕ್ತಾಧಿಗಳ ಶ್ರಮಸೇವೆ ಇಲ್ಲಿ ಎದ್ದು ಕಾಣುತ್ತಿದೆ. ದೇವಸ್ಥಾನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ನಮ್ಮ ತಂದೆ ತಾಯಿಯರಲ್ಲಿ ನಿಜವಾದ ದೇವರನ್ನು ಕಾಣಲು ಸಾಧ್ಯ. ಉತ್ತಮ ಕಾರ್ಯವನ್ನು ಎಲ್ಲರೂ ಒಂದಾಗಿ ಮಾಡೋಣ. ನಮ್ನ ಧರ್ಮದ ಅರಿವು ನಮಗಿರಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಾಲೇ ಐದು ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರದ ಕೆಲಸದಲ್ಲಿ ಭಾಗಿಯಾಗಿ ಧನ್ಯತಾ ಮನೋಭಾವ ಎಲ್ಲರಲ್ಲೂ ಮೂಡಿದೆ‌. ಮಾತೃಭೂಮಿ ಜಗತ್ತಿಗೆ ಸಂಸ್ಕೃತಿಯ ಸಂದೇಶವನ್ನು ಸಾರಿದೆ. ಧರ್ಮದ ಕಾರ್ಯದಲ್ಲಿ ಎಲ್ಲರೂ ಒಂದಾಗಬೇಕು. ನಮ್ಮ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಇಂತಹ ಧಾರ್ಮಿಕ ಕಾರ್ಯಗಳ ಮುಖಾಂತರ ದೇಶದಲ್ಲಿ ಧರ್ಮೋತ್ಥಾನ ಸಾಧ್ಯ. ಸಂಘಟನೆಯ ಶಕ್ತಿಗೆ ಈ ಒಂದು ಕಾರ್ಯಕ್ರಮ ಸಾಕ್ಷಿಯಾಗಿದೆ. ಧರ್ಮಾಧಾರಿತ ಬದುಕು ನಮ್ಮದಾಗಬೇಕು ಎಂದರು.

ಪ್ರಮುಖರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ದೈವರಾಧನೆಗೆ ಅದರದೇ ಆದ ಮಹತ್ವವಿದೆ. ದೈವ ದೇವರ ಆರಾಧನೆಯಲ್ಲಿ ಪರಿಮಿತಿ‌ ಇಲ್ಲ. ಎಲ್ಲರೂ ಸೇರಿ ಮಾಡಿದ ಕಾರ್ಯ ಅತ್ಯಂತ ಯಶಸ್ಸಾಗಿದೆ. ಕಾರ್ಯಕ್ರಮಕ್ಕೆ ಶುಭವಾಗಲಿ ಎಂದರು.

ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು ಮಾತನಾಡಿ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಆಶ್ಚರ್ಯ ಪಡಿಸುವಂತಹ ಕೆಲಸ ಇಲ್ಲಿ ನಡೆದಿದೆ. ದೈವ ದೇವರ ಆರಾಧನೆಯಿಂದ ನೆಮ್ಮದಿ ಪ್ರಾಪ್ತಿ. ನಮ್ಮ ಸಂಪಾದನೆಯಲ್ಲಿ ಒಂದಂಶವನ್ನು ಧಾರ್ಮಿಕ ಶ್ರದ್ಧಾಕೇಂದ್ರಗಳ ಏಳಿಗೆಗೆ ವಿನಿಯೋಗಿಸುವ ಕೆಲಸವಾಗಬೇಕು ಎಂದರು.

ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ರವರು ಮಾತನಾಡಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕಾರ್ಯಕ್ರಮವಿದು. ಇಂತಹ ಕಾರ್ಯಕ್ರಮದೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸೋಣ. ಹಿರಿಯರ ಮಾರ್ಗದರ್ಶನದಂತೆ ನಡೆಯೋಣ. ನಮ್ಮ ಮಕ್ಕಳಿಗೆ ಸಂಸ್ಕೃತಿಯ ಬೋಧನೆ ಮಾಡುವ ಅಗತ್ಯವಿದೆ ಎಂದರು.

ನವಚೇತನ ಚಿಟ್ ಫಂಡ್ ನ ಆಡಳಿತ ನಿರ್ದೇಶಕರಾದ ಲೊಕೇಶ್ ಶೆಟ್ಟಿ ಕಲ್ಲಂದಡ್ಕರವರು ಮಾತನಾಡಿ ಎಲ್ಲರ ಸಹಕಾರದೊಂದಿಗೆ ಬಹಳಷ್ಟು ಸುಂದರ ಕ್ಷೇತ್ರ ನಿರ್ಮಾಣವಾಗಿದೆ. ಬಹಳಷ್ಟು ಕುಶಿಕೊಡುವ ಕೆಲಸ ಇಲ್ಲಿ ನಡೆದಿದೆ. ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದರು.

ವಿಟ್ಲ ಅರಮನೆಯ ಬಂಗಾರು ಅರಸರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌. ಉದ್ಯಮಿಗಳಾದ ಮಿತ್ರಂಪಾಡಿ ಜಯರಾಮ ರೈ,ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಶಾಖಾ ಮಠದ ಅಧ್ಯಕ್ಷರಾದ ಹಾರೆಕೆರೆ ನಾರಾಯಣ ಭಟ್,ಪ್ರಮುಖರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕಂಬಳಬೆಟ್ಟು ಆಕೃತಿ ಕನ್ಸ್ ಸ್ಟ್ರಕ್ಷನ್ ನ ಮಾಲಕರಾದ ದಿನೇಶ್ ಮಾಡ್ತೇಲು, ವಿಟ್ಲ ಶ್ರವಣ ಜ್ಯುವೆಲ್ಲರ್ಸ್ ನ ಮಾಲಕರಾದ ಸದಾಶಿವ ಆಚಾರ್ಯ ಕೈಂತಿಲ, ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಪ್ರಮುಖರಾದ ವಿಶ್ವನಾಥ ಅಮೈ, ತಾರಾನಾಥ ಗೋಳಿಗದ್ದೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರಣ್ ಅಮೈ ಪ್ರಾರ್ಥಿಸಿದರು. ನವೀನ್ ಮೂಡೈಮಾರು ಸ್ವಾಗತಿಸಿದರು. ಕಾರ್ತಿಕ್ ಮೂಡೈಮಾರ್ ವಂದಿಸಿದರು.

LEAVE A REPLY

Please enter your comment!
Please enter your name here