ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಸಮತಾ ಸ್ವೀಟ್ಸ್ ಮಳಿಗೆಯಲ್ಲಿ ಬೆಂಕಿ ಹತ್ತಿಕೊಂಡ ಘಟನೆ ತಡರಾತ್ರಿ ನಡೆದಿದ್ದು, ಮಳಿಗೆಯೂ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಮಳಿಗೆಯನ್ನು ಬಂದ್ ಮಾಡಿ ಮಾಲಕರು ಮನೆಗೆ ತೆರಳಿದ್ದು, ತಡರಾತ್ರಿ ಮಳಿಗೆಯೊಳಗಿನಿಂದ ಹೊಗೆ ಬರುತ್ತಿರವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಮಾಲಕರಿಗೆ ಸುದ್ದಿ ಮುಟ್ಟಿಸಿದರು. ಅವರು ಬಂದು ಮಳಿಗೆಯ ಷಟರ್ ತೆರೆಯುತ್ತಲೇ ಮಳಿಗೆಯೊಳಗೆ ಸಂಪೂರ್ಣ ಬೆಂಕಿಯ ಜ್ವಾಲೆ ತುಂಬಿ ಹೋಗಿತ್ತು. ಎಣ್ಣೆಯಂಶವುಳ್ಳ ಸಿಹಿತಿಂಡಿಗಳು ಇನ್ನಷ್ಟು ಬೆಂಕಿ ವ್ಯಾಪಿಸಲು ಕಾರಣವಾಯಿತು. ಸಾರ್ವಜನಿಕರು ಬೆಂಕಿ ನಂದಿಸಲು ನೆರವಾದರಾದರೂ ಬೆಂಕಿ ಹತೋಟಿಗೆ ಬಂದಿರಲಿಲ್ಲ.
ಆ ಬಳಿಕ ಬೆಳ್ತಂಗಡಿ ಹಾಗೂ ಪುತ್ತೂರಿನಿಂದ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಮಳಿಗೆಯಲ್ಲಿದ್ದ ಫ್ರಿಡ್ಜ್ , ಕಪಾಟುಗಳು, ಸಿಹಿತಿಂಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.