ಉಪ್ಪಿನಂಗಡಿ: ಕೀ ಯ ಚಮತ್ಕಾರದಿಂದ ವಾಹನ ಬದಲಾದರೂ ತಿಳಿಯದೆ ಕೊಂಡೊಯ್ದ ಯುವಕರು, ಬದಲಿ ವಾಹನವನ್ನು ಕಂಡು ಕಂಗೆಟ್ಟ ಅಂಗಡಿ ಮಾಲಕ ಕೊನೆಗೂ ವಾಹನದ ಮೂಲ ಮಾಲಕರನ್ನು ಪತ್ತೆ ಹಚ್ಚಿ ಅದಲು ಬದಲಾದ ತಮ್ಮ ವಾಹನವನ್ನು ಮರಳಿ ದಕ್ಕಿಸಿಕೊಂಡ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಬಳಿ ಇರುವ ಸೌದಿ ಫ್ಯಾನ್ಸಿಗೆ ಕಳೆದ ರಾತ್ರಿ ಕೊನೆಯ ಗ್ರಾಹಕರಾಗಿ ಬಂದಿದ್ದ ಇಬ್ಬರು ಯುವಕರು ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಹಿಂದಿರುಗುವಾಗ ತಾವು ಬಂದಿದ್ದ ಆಕ್ಟೀವಾ ದ ಬದಲು ಅಲ್ಲೇ ಇದ್ದ ಅಂಗಡಿ ಮಾಲಕರ ಆಕ್ಟೀವಾವನ್ನು ತಮ್ಮಲ್ಲಿದ್ದ ಕೀ ಬಳಸಿ ಚಲಾಯಿಸಿಕೊಂಡು ಹೋಗಿದ್ದರು. ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ಹೊರಡಲೆಂದು ಮುಂದಾದಾಗ ತನ್ನ ಆಕ್ಟೀವಾದ ಬದಲು ಬೇರೊಂದು ಆಕ್ಟೀವಾ ಇರುವುದು ಫ್ಯಾನ್ಸಿ ಮಾಲಕರ ಗಮನಕ್ಕೆ ಬಂದಿತ್ತು. ಪರೀಕ್ಷಿಸುವ ನಿಟ್ಟಿನಲ್ಲಿ ಅದಕ್ಕೆ ತನ್ನಲ್ಲಿದ್ದ ಕೀ ಯನ್ನು ಬಳಸಿ ಚಾಲನೆಗೆ ಯತ್ನಿಸಿದಾಗ ಅದೂ ಕೂಡಾ ಚಾಲನೆಗೊಂಡಿತು. ಇದರಿಂದಾಗಿ ಕೀ ಯ ಚಮತ್ಕಾರದಿಂದಾಗಿ ವಾಹನ ಬದಲಾವಣೆಗೊಂಡಿರುವುದಾಗಿ ಅಂದಾಜಿಸಲಾಯಿತಾದರೂ, ಕದ್ದು ತಂದ ವಾಹನವನ್ನು ಇಲ್ಲಿ ಇಟ್ಟು ಹೋಗಲಾಗಿದೆಯೇ ಎಂಬ ಬಗ್ಗೆಯೂ ಸಂಶಯ ಕಾಡತೊಡಗಿತು.
ಮರು ದಿನ ಸಾರಿಗೆ ಇಲಾಖೆಯ ಮೂಲಕ ವಾಹನ ಸಂಖ್ಯೆಯನ್ನಾಧರಿಸಿ ಅದರ ಮೂಲ ಮಾಲಕರನ್ನು ಪತ್ತೆ ಹಚ್ಚಲಾಯಿತ್ತಾದರೂ , ಅದರ ಆರ್‌ಸಿ ಓನರ್ ಮಂಗಳೂರಿನ ವ್ಯಕ್ತಿ ಎಂದು ತಿಳಿದು ಬಂತು. ಅವರನ್ನು ಸಂಪರ್ಕಿಸಿದಾಗ ಅವರು ವಾಹನವನ್ನು ತನ್ನ ಸಂಬಂಧಿಕರಿಗೆ ನೀಡಿರುವ ಬಗ್ಗೆ ಮಾಹಿತಿ ನೀಡಿದರು.
ಕೊನೆಗೂ ವಾಹನದ ನೈಜ ವಾರೀಸುದಾರನನ್ನು ಹಿರೆಬಂಡಾಡಿಯಲ್ಲಿ ಪತ್ತೆ ಹಚ್ಚಿ ವಿಚಾರ ತಿಳಿಸಿದಾಗಲೇ ಅವರಿಗೆ ತಾವು ಉಪ್ಪಿನಂಗಡಿಯಿಂದ ಚಲಾಯಿಸಿಕೊಂಡು ಬಂದಿದ್ದ ವಾಹನವು ತಮ್ಮ ವಾಹನವಾಗಿರದೆ ಬೇರೊಬ್ಬರ ವಾಹನವಾಗಿದೆ ಎಂಬುವುದು ತಿಳಿದದ್ದು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮನೆ ಮಕ್ಕಳು ಮನೆಯ ನೇಮೋತ್ಸವಕ್ಕೆ ಬಂದವರು ಸಾಮಗ್ರಿ ಖರೀದಿಗೆಂದು ಮನೆಯಲ್ಲಿದ್ದ ಆಕ್ಟೀವಾವನ್ನು ತೆಗೆದುಕೊಂಡು ಹೋದವರಿಗೆ ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ಆಕ್ಟೀವಾ ಯಾವುದೆಂದು ತಿಳಿಯದೆ ಅಂಗಡಿಯ ಮುಂಭಾಗದಲ್ಲಿ ಇದ್ದ ಆಕ್ಟೀವಾವನ್ನು ತಮ್ಮದೆಂದು ತಿಳಿದು ಕೀ ಹಾಕಿದ್ದಾರೆ. ವಾಹನ ಚಲಾಯಿಸಲ್ಪಟ್ಟ ಕಾರಣ ಅದನ್ನು ಚಲಾಯಿಸಿಕೊಂಡು ಮನೆಗೆ ತಂದಿದ್ದರು. ಒಟ್ಟಾರೆ ಕೀ ಯ ಚಮತ್ಕಾರ ವಾಹನವನ್ನು ಅದಲು ಬದಲುಗೊಳಿಸಿತ್ತು. ತಮ್ಮ ಅಚಾತುರ್ಯಕ್ಕಾಗಿ ಕ್ಷಮಾಪಣೆ ಕೇಳಿ ವಾಹನವನ್ನು ಬದಲಾಯಿಸಿಕೊಳ್ಳಲಾಯಿತು. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.
ಆದರೆ ಇತ್ತ ಕೀ ಪ್ರಹಸನದ ನೈಜಾಂಶ ತಿಳಿಯುವ ಮುನ್ನಾ ಬೇರೊಂದು ಕಡೆ ಕದ್ದು ತಂದ ವಾಹನವನ್ನು ತಮ್ಮ ಅಂಗಡಿ ಮುಂಭಾಗದಲ್ಲಿ ಇರಿಸಿ, ನಮ್ಮ ವಾಹನವನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಯನ್ನು ಶಂಕಿಸಿ ಸಂಭಾವ್ಯ ಅಪಾಯದ ಬಗ್ಗೆ ನಿದ್ರೆಗೆಡುವ ಸ್ಥಿತಿ ಫ್ಯಾನ್ಸಿ ಅಂಗಡಿಯ ಮಾಲಕರದ್ದಾಗಿತ್ತು.