ಹಿಂದು ಧಾರ್ಮಿಕ, ದೇವರ ಕಾರ್ಯಕ್ರಮಕ್ಕೆ ಹೋಗಬಾರದೆಂದು ಪ್ರಶ್ನಿಸುವಂತಿಲ್ಲ – ಯು ಪೂವಪ್ಪ
ಅರುಣ್ ಕುಮಾರ್ ಪುತ್ತಿಲರಿಂದಾಗಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನೋಡುವ ಭಾಗ್ಯ- ಈಶ್ವರ ಭಟ್ ಪಂಜಿಗುಡ್ಡೆ
ಈ ಹಿಂದಿನ ಸಮಿತಿ ಸಹಕಾರ ನೀಡಿರಿರಲಿಲ್ಲ – ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಕಳೆದ ವರ್ಷ ಒಳ್ಳೆಯ ರೀತಿಯಲ್ಲಿ ಆಗಿದೆ. ನಾನು ಕೂಡಾ ಬಂದಿದ್ದೆ. ಈ ವರ್ಷ ಕೂಡಾ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನವರು ಊರಿನ ಜನರಿಗಾಗಿ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನ್ನನ್ನು ಕೆಲವರು ಪ್ರಶ್ನಿಸಿದ್ದಾರೆ. ಹಿಂದು ಧಾರ್ಮಿಕ, ದೇವರ ಕಾರ್ಯಕ್ರಮಕ್ಕೆ ಹೋಗಬಾರದೆಂದು ಯಾರು ಪ್ರಶ್ನಿಸುವಂತಿಲ್ಲ. ನಾನು ಧಾರ್ಮಿಕ ಕಾರ್ಯಕ್ರಮ ಎಲ್ಲಿದ್ದರೂ ಹೋಗುತ್ತೇನೆ ಎಂದು ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರು ಹೇಳಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಇದರ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ್ವಿತೀಯ ಬಾರಿಗೆ ಡಿ.28 ಮತ್ತು 29ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.28ರಂದು ಬೆಳಿಗ್ಗೆ ನಡೆದ ಭಜನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ಆಗಿದೆ. ನಾನು ಕೂಡಾ ಬಂದಿದ್ದೆ. ಈ ವರ್ಷ ಕೂಡಾ ಪುತ್ತಿಲ ಪರಿವಾರ ಟ್ರಸ್ಟ್‌ನವರು ಈ ಕಾರ್ಯಕ್ರಮ ಹಾಕಿಕೊಂಡು ಎಲ್ಲ ಊರಿನ ಜನರು ಬರಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದಾರೆ.
ಬೇರೆ ಬೇರೆ ಸಂಸ್ಥೆ, ಪಕ್ಷದಲ್ಲಿರಬಹುದು ಆದರೆ ಹಿಂದುಗಳಾದ ನಾವೆಲ್ಲ ಒಂದೇ ರೀತಿಯಲ್ಲಿ ಒಂದೆ ವೇದಿಕೆಯಲ್ಲಿ ಕೆಲಸ ಮಾಡಿದಾಗ ಮಾತ್ರ ನಾವೆಲ್ಲ ಸಂಘಟಿತರಾಗಿ ಕೆಲಸ ಮಾಡಲು ಸಾಧ್ಯವಿದೆ. ಆಗ ಹಿಂದು ಸಂಸ್ಕೃತಿ ಉಳಿಯುತ್ತದೆ. ನಾನು ಹಲವಾರು ವರ್ಷಗಳಿಂದ ಸಂಘಟನೆಯಲ್ಲಿ ದುಡಿದವ. ನಮ್ಮಲ್ಲಿ ಸಂಘಟಿತರಾಗಿ ಕೆಲಸ ಮಾಡುವ ಮನೋಸ್ಥಿತಿ ಇನ್ನೂ ಬಂದಿಲ್ಲ. ನಾವು ಪಕ್ಷ ಪಕ್ಷದ ವೈಮನಸ್ಸಿನಿಂದಾಗಿ ಸಂಘಟನೆಯನ್ನು ಹಾಳು ಮಾಡುತ್ತಿದ್ದೇವೆ.
ಇನ್ನು ಮುಂದೆಯಾದರೂ ಎಲ್ಲಾ ಹಿಂದುಗಳು ಒಗ್ಗಟ್ಟಾಗಿರಬೇಕು. ಆಗ ಯಾವುದೇ ಕೆಲಸ ಸುಸೂತ್ರವಾಗಿ ನಡೆಯಲು ಸಾಧ್ಯವಿದೆ ಎಂದ ಅವರು ಕಳೆದ ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಸುವಾಗ ಹಲವಾರು ಸಮಸ್ಯೆಗಳು ಬಂದಿರುವುದು ನಾನು ಕಂಡು ಕೊಂಡಿದ್ದೇನೆ. ನಾನು ಈ ಕಾರ್ಯಕ್ರಮಕ್ಕೆ ಬಂದಾಗ ಹೇಗೆ ಅವರು ಕಾರ್ಯಕ್ರಮಕ್ಕೆ ಹೋದರೂ ಎಂಬ ಮಾತುಗಳು ಬಂದಿದೆ. ನಾನು ಹಿಂದುಗಳ, ಹಿಂದು ದೇವರ ಕಾರ್ಯಕ್ರಮಕ್ಕೆ ಎಲ್ಲಿ ಕೂಡಾ ಹೋಗಲು ಸಿದ್ದ ಎಂದವರು ಹೇಳಿದರು.
ಅರುಣ್ ಕುಮಾರ್ ಪುತ್ತಿಲರಿಂದಾಗಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನೋಡುವ ಭಾಗ್ಯ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಶ್ರೀಮಂತರು, ದುಡ್ಡಿದ್ದವರು ಮಾತ್ರ ಶ್ರೀನಿವಾಸ ಕಲ್ಯಾಣೋತ್ಸವ ಮಾಡಲು ಸಾಧ್ಯ. ಆದರೆ ಇವತ್ತು ಸಾಮೂಹಿಕವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಮೂಲಕ ಎಲ್ಲ ಬಡವರಿಗೂ ಕೂಡಾ ಅದರಲ್ಲೂ ನನಗೂ ಕೂಡಾ ಶ್ರೀನಿವಾಸ ಕಲ್ಯಾಣೋತ್ಸವ ನೋಡುವ ಅವಕಾಶ ಲಭಿಸಿದೆ. ಯಾಕೆಂದರೆ ನಾನು ಕೂಡಾ ಶ್ರೀನಿವಾಸ ಕಲ್ಯಾಣೋತ್ಸವ ನೋಡಿದ್ದು ಪುತ್ತೂರಿನಲ್ಲಿ. ಹಾಗಾಗಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಎಲ್ಲರಿಗೂ ನೋಡುವಂತೆ ಮಾಡಿದವರು ಅದು ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ತಂಡ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಹಿಂದಿನ ಸಮಿತಿ ಸಹಕಾರ ನೀಡಿರಿರಲಿಲ್ಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಕಳೆದ ಬಾರಿ ಕಾರ್ಯಕ್ರಮ ನಡೆಯುವಾಗ ಒಂದಷ್ಟು ವಿಘ್ನಗಳು ತೊಂದರೆ ಕೊಟ್ಟಿರುವುದು ಉಲ್ಲೇಕವಾಗಿದೆ. ಆದರೆ ಭಗವಂತನ ಆಶೀರ್ವಾದಿಂದ ಅಭೂತಪೂರ್ವವಾಗಿ ಕಾರ್ಯಕ್ರಮ ನಡೆದಿತ್ತು. ಇವತ್ತು ನಾವೆಲ್ಲ ಅತ್ಯಂತ ಸಂತೊಷದಿಂದ ಇಡಿ ಸಮಜವನ್ನು ಒಗ್ಗೂಡಿಸಬೆಕೆಂಬ ಯೋಜನೆಯಡಿಯಲ್ಲಿ ಕಾರ್ಯಕ್ರಮ ವ್ಯವಸ್ಥೆಯ ದೃಷ್ಟಿಯನ್ನು ಗಮನಿಸುವಾಗ ಈ ಭಾರಿ ಅತ್ಯಂತ ಸುಲಭವಾಗಿ ನಮಗೆಲ್ಲರಿಗೂ ಕಾರ್ಯಕ್ರಮ ನಡಸಲು ದೇವಳದ ನೂತನ ಸಮಿತಿ ಪೂರ್ಣ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ತನಕ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದಾಗ ಈ ಹಿಂದೆ ಇರುವ ಯಾವ ಸಮಿತಿಗಳು ಈ ರೀತಿಯ ಸಹಕಾರ ನೀಡಿರಲಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರಲ್ಲದೆ ಈ ಕಾರ್ಯಕ್ರಮ ಇಡಿ ಸಮಾಜ ಒಂದಾಗಿದೆ ಎಂಬ ಸಂದೇಶ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಸಹ ಸಂಚಾಲಕ ಮನೀಶ್ ಕುಲಾಲ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಕಾರ್ಯದರ್ಶಿ ಗಣೇಶ್‌ಚಂದ್ರ ಭಟ್ ಮಕರಂದ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಡಬ ತಾಲೂಕು ಅಧ್ಯಕ್ಷ ವೆಂಕಟ್ರಮಣ ಭಟ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮಹಿಳಾ ಆಧ್ಯಕ್ಷೆ ಪುಷ್ಪಾರಾಜೇಶ್, ವೈದಿಕ ಸಮಿತಿ ಸದಸ್ಯ ಬ್ರಹ್ಮಶ್ರೀ ಕುಂಟಾರು ಗುರು ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಭಜಾನ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಾನು ಸಹಿತ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಕೈ ಜೋಡಿಸುತ್ತೇವೆ
ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಬಹಳ ಕಷ್ಟವಿದೆ. ಇಷ್ಟು ಚಂದವಾಗಿ ಅಚ್ಚುಕಟ್ಟಾಗಿ ವ್ಯವಸ್ಥಿತ ರೂಪದಲ್ಲಿ ಈ ಕಾರ್ಯಕ್ರಮವನ್ನು ಅರುಣ್ ಕುಮಾರ್ ಪುತ್ತಿಲ ಅವರು ಮಾಡುತ್ತಿದ್ದಾರೆ. ಕಳೆದ ಬಾರಿಯಂತೆ ಈ ಭಾರಿಯೂ ಕೆಲವು ಮಂದಿ ಕಾರ್ಯಕ್ರಮ ಆಗುವುದಿಲ್ಲ ಎಂಬ ಮಾತನ್ನು ಹೇಳಿದವರೂ ಇದ್ದಾರೆ. ಆದರೆ ಈ ಕಾರ್ಯಕ್ರಮ ಆಗಿಯೇ ಆಗುತ್ತದೆ ಎಂಬುದನ್ನು ನಾನು ಅವರಿಗೆ ಹೇಳಿದ್ದೇನೆ. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಇಂತಹ ಕಾರ್ಯಕ್ರಮ ಕಾರ್ಯಕ್ರಮ ನಡೆದಾಗ ದೇವಸ್ಥಾನಕ್ಕೂ ಕೀರ್ತಿ, ಇಂತಹ ಕಾರ್ಯಕ್ರಮ ದೇವಳದ ದೇವರಮಾರುಗದ್ದೆಯಲ್ಲಿ ನಿರಂತರವಾಗಿ ನಡೆಯಬೇಕು. ಇದು ಮಾನವಕುಲಕ್ಕೆ ಒಳ್ಳೆಯದಾಗುತ್ತದೆ. ನಮ್ಮ ದೇವಸ್ಥಾನದ ವ್ಯಸ್ಥಾಪನಾ ಸಮಿತಿಯ ಸದಸ್ಯರು ಡಿ.29ರಂದು ಬೆಳಗ್ಗಿನಿಂದ ರಾತ್ರಿಯ ತನಕ ಕಾರ್ಯಕ್ರಮದಲ್ಲಿ ಕೈ ಜೋಡಿಸುತ್ತೇವೆ
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ಮಾದರಿ ಆಡಳಿತಕ್ಕೆ ಮೊದಲ ಹೆಜ್ಜೆ ಈಶ್ವರ ಭಟ್ ಪಂಜಿಗುಡ್ಡೆ
ಧಾರ್ಮಿಕ ಶ್ರದ್ಧೆಯ ಮೂಲಕ ಧಾರ್ಮಿಕ ಪರಂಪರೆಯನ್ನು ಉಳಿಸಬೇಕು. ಈ ಸಂದರ್ಭ ಹಿಂದೆಲ್ಲ ಇಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರುವ ವ್ಯಾಪಾರಿಗಳು ರೂ. 10 ಸಾವಿರ, ರೂ. 20 ಸಾವಿರ ಕೊಟ್ಟು ಸ್ಟಾಲ್ ಪಡೆದ ಸಂದರ್ಭವಿತ್ತು. ಆದರೆ ಧಾರ್ಮಿಕ ಶ್ರದ್ಧಾಕೇಂದ್ರ ವ್ಯಾಪಾರಿಕರಣ ಆಗಬಾರದು ಎಂದು ಒಂದು ಹೆಜ್ಜೆ ಮುಂದಿಟ್ಟಿರುವ ಈಗಿನ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಕೇವಲ ರೂ.1200ಕ್ಕೆ ಸ್ಟಾಲ್‌ಗಳನ್ನು ವ್ಯಾಪಾರಿಗಳಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಈಶ್ವರ ಭಟ್ ಪಂಜಿಗುಡ್ಡೆ ತಂಡದ ಜೊತೆ ಹಿಂದು ಸಮಾಜವಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.