ನೆಲ್ಯಾಡಿ: ರಬ್ಬರ್ ಮರವೊಂದು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿ ಹಾನಿಗೊಂಡಿರುವ ಘಟನೆ ಆಲಂತಾಯದಲ್ಲಿ ಡಿ.28ರಂದು ಮಧ್ಯಾಹ್ನ ನಡೆದಿದೆ.
ಗೋಳಿತ್ತೊಟ್ಟು-ರಾಮಕುಂಜ ರಸ್ತೆಯ ಆಲಂತಾಯ ಸಮೀಪ ರಬ್ಬರ್ ಮರವೊಂದು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರ ಪರಿಣಾಮ ಸಮೀಪದ ಮೂರು ವಿದ್ಯುತ್ ಕಂಬಗಳು ತುಂಡಾಗಿ ನೆಲಕ್ಕುರಳಿವೆ. ಈ ಪೈಕಿ ಎರಡು ಕಂಬಗಳು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಸದ್ರಿ ರಸ್ತೆಯಲ್ಲಿ ಸುಮಾರು 1 ತಾಸಿಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿದ್ಯುತ್ ಕಂಬ ನೆಲಕ್ಕುರುಳಿದ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು ಮೆಸ್ಕಾಂ ಸಿಬ್ಬಂದಿ ತಕ್ಷಣ ಸ್ಪಂದಿಸಿ ವಿದ್ಯುತ್ ಸ್ಥಗಿತಗೊಳಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಹೆದ್ದಾರಿಗೆ ಬಿದ್ದ ಕಂಬ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತು.