ಮುಂದಿನ ಕಲ್ಯಾಣೋತ್ಸವದೊಳಗೆ ಬೃಹತ್ ಗೋ ಶಾಲೆ ನಿರ್ಮಾಣಕ್ಕೆ ಸಂಕಲ್ಪ – ಪೇಜಾವರ ಶ್ರೀ
ಪುತ್ತೂರು: ಶೂರರಾಜ ಪೌತ್ರನಾದ ವಸುದೇವನ ಪುತ್ರ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಪದ್ಮಾವತಿಯ ಕಲ್ಯಾಣೋತ್ಸವ ಡಿ.29ರಂದು ಸಂಜೆ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ಮತ್ತು ಭಕ್ತಿ ಪ್ರಧಾನವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಭವ್ಯವಾದ ವೇದಿಕೆಯಲ್ಲಿ ನಿರ್ಮಿಸಿದ ತಿರುಪತಿ ಮಾದರಿಯ ಮಂಟಪದಲ್ಲಿ ನಡೆಯಿತು.
ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಶುಭಗಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ತಿರುಪತಿ ಶ್ರೀ ಕ್ಷೇತ್ರ ಮೂಲದ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಮತ್ತು ಸುಮಾರು 27 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು.
ಮುಂದಿನ ಕಲ್ಯಾಣೋತ್ಸವದೊಳಗೆ ಬೃಹತ್ ಗೋ ಶಾಲೆ ನಿರ್ಮಾಣಕ್ಕೆ ಸಂಕಲ್ಪ:
ರಾತ್ರಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕಲ್ಯಾಣೋತ್ಸವಕ್ಕೆ ಆಗಮಿಸಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು. ಪುತ್ತಿಲ ಪರಿವಾರ ಟ್ರಸ್ಟ್ನ ಸಾರಥ್ಯದಲ್ಲಿ ಶ್ರೀನಿವಾಸ ಕಲ್ಯಾಣ ಅತೀ ವೈಭವದಿಂದ ನಡೆಯುತ್ತಿದೆ. ಇದರ ಅಂಗವಾಗಿ ನಿನ್ನೆ ಧರ್ಮ ಸಂಗಮವೂ ನಡೆದಿದೆ. ಭಗವಂತನ ಆದೇಶದಂತೆ ಸತ್ಯ ವಧ, ಧರ್ಮಂ ಚರ. ಧರ್ಮ ಸಂಸ್ಥಾಪನಾಯ ಸಂಭವಾನಿ ಯುಗೆ ಯುಗೆ ಎಂಬಂತೆ ಧರ್ಮ ರಕ್ಷಣೆಗೆ ನಮ್ಮ ಹಿಂದೆ ಭಗವಂತನ ಆಶೀರ್ವಾದ ನಿರಂತರವಾಗಿ ಇದೆ. ಗೋವಿನ ರಕ್ಷಣೆ ನಾವು ಹೇಗೆ ಮಾಡಬೇಕು ಎಂಬುದಕ್ಕೆ ಶ್ರೀನಿವಾಸ ದೇವರೇ ಸ್ಪೂರ್ತಿ. ಶ್ರೀನಿವಾಸ ದೇವರು ಇದ್ದಾರೆಂದು ನಮಗೆ ತೋರಿಸಿಕೊಟ್ಟದ್ದು ಗೋವು. ಧರ್ಮ ರಕ್ಷಣೆಗೆ ಕಟಿಬದ್ದರಾಗಿ ನಾವು ನಿಲ್ಲಬೇಕಾದರೆ ಧರ್ಮದ ಪ್ರತೀಕವಾಗಿರುವಂತಹ ಗೋವಿನ ಸಂರಕ್ಷಣೆಗೆ ನಾವು ನಿಂತರೆ ಶ್ರೀನಿವಾಸ ದೇವರ ಪರಿಪೂರ್ಣ ಅನುಗ್ರಹ ನಮಗೆ ಸಿಗುತ್ತದೆ. ಹಾಗಾಗಿ ಮುಂದಿನ ಕಲ್ಯಾಣೋತ್ಸವದೊಳಗಾಗಿ ಬೃಹತ್ ಗೋ ಶಾಲೆ ನಿರ್ಮಾಣ ಆಗಬೇಕೆಂದು ಸಂಕಲ್ಪ ಮಾಡೋಣ. ದೇವರು ಅದನ್ನು ನಡೆಸಿಕೊಡುತ್ತಾರೆ ಎಂದು ಹೇಳಿದರು.
ಅರುಣ್ ಪುತ್ತಿಲರ ಮೂಲಕ ಶ್ರೀನಿವಾಸ ದೇವರು ಸಮಾಜವನ್ನು ಒಗ್ಗೂಡಿಸಿದ್ದಾರೆ:
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮಾಂಗಲ್ಯ ಧಾರಣೆಯ ಬಳಿಕ ಆಶೀರ್ವಚನ ನೀಡಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅರುಣ್ ಕುಮಾರ್ ಪುತ್ತಿಲ ಅವರ ಸಾರಥ್ಯದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿರುವುದು ಸಂತೋಷ ಆಗಿದೆ. ಯಾವುದು ಸಮಾಜವನ್ನು ಒಂದು ಗೂಡಿಸುತ್ತದೆಯೋ ಅದೇ ಧರ್ಮ ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಇವತ್ತು ಶ್ರೀನಿವಾಸ ಕಲ್ಯಾಣೋತ್ಸವದ ವೈಭವದ ನೆಪದಲ್ಲಿ ಎಲ್ಲಾ ಸಮಾಜಬಾಂಧವರನ್ನು ಒಗ್ಗೂಡಿಸುವ ಕೆಲಸ ಆಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೆ ಸಮಾಜ ಒಗ್ಗಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಕೆಲಸವನ್ನು ಅರುಣ್ ಕುಮಾರ್ ಪುತ್ತಿಲ ಮಾಡುತ್ತಿದ್ದಾರೆ. ಇದೊಂದು ಹಿಂದೂ ಮಹಾಸಾಗರ. ಆ ಮಟ್ಟದಲ್ಲಿ ಎಲ್ಲಾ ಸಮಾಜ ಬಾಂಧವರನ್ನು ಸೇರಿಸಿದ್ದಾರೆಂದರೆ ಅವರಿಂದ ಶ್ರೀನಿವಾಸ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕೆಲಸ ಮಾಡಿಸಿದ್ದಾರೆ. ದೇವರ ಅನುಗ್ರಹ ಪುತ್ತಿಲ ಪರಿವಾರದ ಮೇಲಿದೆ. ನಂಬಿಕೆ ಗಟ್ಟಿಯಾದಾಗ ಧರ್ಮ ಬೆಳೆಯುತ್ತದೆ. ದೇವರ ನಂಬಿಕೆ ಸ್ಥಿರವಾಗಿದ್ದರೆ ಧರ್ಮ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು. ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದರು. ಅದಾದ ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಶುಭಘಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು.
ಶ್ರೀನಿವಾಸನ ಆಶೀರ್ವಾದ ಪಡೆಯಲು ಸರಥಿ ಸಾಲು:
ಶ್ರೀನಿವಾಸ ದೇವರ ಆಶೀರ್ವಾದ ಪಡೆಯಲು ಮಧ್ಯಾಹ್ನ ಸರಥಿ ಸಾಲಿನಲ್ಲಿ ಭಕ್ತರು ವೇದಿಕೆಗೆ ಬಂದು ಶ್ರೀನಿವಾಸ ದೇವರ ದರುಶನ ಪಡೆದು ಅರ್ಚಕರಿಂದ ತಿರುಪತಿ ತಿಮ್ಮಪ್ಪನ ಕಿರೀಟ ಆಶೀರ್ವಾದ ಪಡೆದರು. ಈ ಸಂದರ್ಭ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೆದಂಬಾಡಿ ಮಠ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಸಹ ಸಂಚಾಲಕ ಮನೀಶ್ ಕುಲಾಲ್ ಸಹಿತ ಹಲವಾರು ಮಂದಿ ವೇದಿಕೆಯಲ್ಲಿ ಭಕ್ತರಿಗೆ ಸಾವಕಾಶವಾಗಿ ದೇವರ ದರುಶನ ಪಡೆಯುವಂತೆ ವಿನಂತಿಸಿದರು.
ಅನ್ನಪ್ರಸಾದಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ:
ಶ್ರೀನಿವಾಸ ಕಲ್ಯಾಣೋತ್ಸವ ಸಭಾಂಗಣದ ಮುಂಭಾಗದಲ್ಲಿ 20 ಸಾವಿರ ಚದರ ಅಡಿಯಲ್ಲಿ ನಿರ್ಮಿಸಲಾದ ವಿಶಾಲವಾದ ಪೆಂಡಾಲ್ನಲ್ಲಿ ಅನ್ನಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನ್ನಪ್ರಸಾದಕ್ಕೆ ಸರಥಿ ಸಾಲಿನಲ್ಲಿ ಬಂದ ಭಕ್ತರಿಗೆ ಮೂರು ಕೌಂಟರ್ನಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಪೆಂಡಾಲ್ ಸುತ್ತ ಕುಳಿತು ಕೊಳ್ಳಲು ಚಯರ್ ವ್ಯವಸ್ಥೆ ಮಾಡಲಾಗಿತ್ತು. ಸಣ್ಣ ಮಕ್ಕಳೊಂದಿಗೆ ಬಂದ ತಾಯಂದಿರು, ವಯಸ್ಕರನ್ನು ಕಲ್ಯಾಣೋತ್ಸವದ ಕಾರ್ಯಕರ್ತರು ನೇರವಾಗಿ ಅನ್ನಪ್ರಸಾದ ಕೌಂಟರ್ಗೆ ಕರೆದೊಯ್ದು ಅವರಿಗೆ ಸಾವಕಾಶವಾಗಿ ಊಟ ಮಾಡಲು ವ್ಯವಸ್ಥೆ ಕಲ್ಪಿಸುತ್ತಿದ್ದರು. ಮಧ್ಯಾಹ್ನ ಜರಗಿದ ಅನ್ನಸಂತರ್ಪಣೆಯಲ್ಲಿ ಹದಿನೈದು ಸಾವಿರ ಭಕ್ತಾದಿಗಳು ಅನ್ನದಾನ ಸ್ವೀಕರಿಸಿದರು. ರಾತ್ರಿ 50 ಸಾವಿರ ಮಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಡಿ.28ರಂದು ರಾತ್ರಿ ಸುಮಾರು 20 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಅಡುಗೆ ತಯಾರಿಗೆ ಸ್ವಯಂ ಸೇವಕರು ರಾತ್ರಿ ಹಗಲು ತರಕಾರಿ ಹಚ್ಚಿದರು. ಪ್ರಗತಿ ಮತ್ತು ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಟ್ರಸ್ಟಿನ ಕಾರ್ಯಕರ್ತರು, ಹಲವಾರು ಮಂದಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಭಜನೆ, ಕುಣಿತ ಭಜನೆ ವಿಶೇಷ:
ಮಧ್ಯಾಹ್ನ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ವೇದಿಕೆಯ ಎದುರಿನ ಸಭಾಂಗಣದಲ್ಲಿ ಕುಣಿತ ಭಜನೆ ನಡೆಯಿತು. ಮಹತೋಭಾರ ಶ್ರೀ ಮಹಾಲಿಂಗೇಶ್ವರ ಧಾರ್ಮಿಕ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಕುಣಿತ ಭಜನಾ ಮಂಡಳಿ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ಭಜನಾ ತಂಡ, ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ, ಕಾವು ದುರ್ಗಾವಾಹಿನಿ ಭಜನಾ ತಂಡ, ಆನಡ್ಕ ಶ್ರೀರಾಮ ಭಜನಾ ತಂಡ, ಕೈಕಾರ ಶ್ರೀ ವಿದ್ಯಾನಿಧಿ ಸರಸ್ವತಿ ಭಜನಾ ತಂಡ, ಬನ್ನೂರು ಶನೀಶ್ವರ ಭಜನಾ ತಂಡ, ಕರೋಪಾಡಿ ಶ್ರೀ ರಾಮ ಭಜನಾ ಮಂದಿರ, ಕಬಕ ವಿದ್ಯಾಪುರ ಶ್ರೀ ನಾಗ ಪಂಚಶ್ರೀ ಕುಣಿತ ಭಜನಾ ತಂಡ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ, ಪಾಲ್ತಾಡಿ ಧರ್ಮರಸು ಕುಣಿತ ಭಜನೆ ತಂಡ, ಮಿತ್ತನಡ್ಕ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ಸುಡುಮದ್ದು ಪ್ರದರ್ಶನ:
ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನ ನಡೆಯಿತು. ಬಾನೆತ್ತರದಲ್ಲಿ ಚಿಮ್ಮಿದ ಸಿಡಿಮದ್ದು ಪ್ರದರ್ಶನ ಬಣ್ಣ ಬಣ್ಣದ ಪ್ರಕಾಶವನ್ನು ಚಿಮ್ಮುತ್ತಿತ್ತು. ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಿಸಿದರು. ಸುಮಾರು 20 ನಿಮಿಷಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಿತು. ಧರೇಶ್ ಹೊಳ್ಳ ಅವರ ನೇತೃತ್ವದಲ್ಲಿ ಹೊಳ್ಳ ಕ್ರ್ಯಾಕರರ್ಸ್ ವತಿಯಿಂದ ಸಿಡಿಮದ್ದು ಪ್ರದರ್ಶನಗೊಂಡಿತು.
ಸ್ವಯಂ ಸೇವಕರಿಂದ ಭಕ್ತರಿಗೆ ಮಾಹಿತಿ, ತುರ್ತು ಸೇವೆಗೆ ಆಂಬುಲೆನ್ಸ್ ಸೇವೆ :
ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ವಿವಿಧ ಮಾಹಿತಿಗಳನ್ನು ಮತ್ತು ವಾಹನ ನಿಲುಗಡೆ ಬಗ್ಗೆ ಆಯಾ ವಿಭಾಗಕ್ಕೆ ಸೇರಿದ ಸ್ವಯಂ ಸೇವಕರು ಮಾಹಿತಿ ನೀಡುತ್ತಿದ್ದರು. ಅದೇ ರೀತಿ ತುರ್ತು ಸೇವೆ ನೀಡುವ ಸಲುವಾಗಿ ಪುತ್ತಿಲ ಪರಿವಾರದ ಆಂಬುಲೆನ್ಸ್ವೊಂದನ್ನು ಸಭಾಂಗಣದ ಬಳಿ ನಿಲ್ಲಿಸಲಾಗಿತ್ತು.
ಹಲವು ಪ್ರಮುಖರು ಭಾಗಿ: ಶ್ರೀನಿವಾಸ ಕಲ್ಯಾಣೋತ್ಸವದ ಈಶ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ದಂಪತಿ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ದಂಪತಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಮಹೇಂದ್ರ ವರ್ಮ, ವಿಶ್ವಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಯು.ಪೂವಪ್ಪ, ಬ್ರಹ್ಮಶ್ರೀ ಕುಂಟಾರು ಶ್ರೀಧರ ತಂತ್ರಿ ಸಹಿತ ಸೇವಾಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಶಶಾಂಕ ಕೊಟೇಚಾ, ಚಂದಪ್ಪ ಮೂಲ್ಯ, ಬೂಡಿಯಾರು ರಾಧಾಕೃಷ್ಣ ರೈ ಸಹಿತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಪದಾಧಿಕಾರಿಗಳು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳಿಂದ ಪುತ್ತಿಲರಿಗೆ ಮಾಲಾರ್ಪಣೆ
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾದ ಪೇಜಾವರ ಶ್ರೀಗಳಿಗೆ ಶ್ರೀನಿವಾಸ ಕಲ್ಯಾಣೋತ್ಸವದ ಪ್ರಸಾದ ರೂಪದಲ್ಲಿ ಅರ್ಚಕರು ಹಾರಾರ್ಪಣೆ ಮಾಡಿದರು. ಶ್ರೀಗಳು ವೇದಿಕೆಯಿಂದ ತೆರಳುವ ಸಂದರ್ಭ ತನಗೆ ದೇವರ ಪ್ರಸಾದ ರೂಪದಲ್ಲಿ ಕೊಟ್ಟ ಹಾರವನ್ನು ಅರುಣ್ ಕುಮಾರ್ ಪುತ್ತಿಲ ಅವರ ಕೊರಳಿಗೆ ಹಾಕಿ ಆಶೀರ್ವದಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವ ಹೀಗೆ ನಡೆಯಿತು…
ವೈಷ್ಣವ, ಮಧ್ವ ಪರಂಪರೆಯಂತೆ ಡಿ.29ರಂದು ಪ್ರಾತಃ ಕಾಲ ಸುಪ್ರಭಾತ ಸೇವೆ ನಡೆಯಿತು. ಬಳಿಕ ಪುಷ್ಪಮಾಲಿಕೆ ತೋಮಾಲೆ ಸೇವೆ, ತುಪ್ಪ, ಹಾಲು ಮೊಸರು ಸೇರಿದಂತೆ ವಿಶೇಷ ದ್ರವ್ಯ ಅಭಿಷೇಕ, ಮಂಗಳದ್ರವ್ಯ ಅಭಿಷೇಕವಾಗಿ ತಿರುಮಜ್ಜನಾಭಿಷೇಕ. ಹೋಮ ಕೈಂಕರ್ಯ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ, ಇದೇ ಸಂದರ್ಭ ಶ್ರೀನಿವಾಸ ದೇವರ ಪಾದ ತೊಳೆದ ತೀರ್ಥ ವಿತರಣೆ, ಆ ಬಳಿಕ ಸಂಜೆಯ ತನಕ ದರ್ಬಾರ್ ಅಲಂಕಾರ ನಡೆಯಿತು. ಶ್ರೀನಿವಾಸನ ಸಣ್ಣ ವಿಗ್ರಹದೊಂದಿಗೆ ಕಾಶಿಯಾತ್ರೆ ನಡೆಯಿತು. ಇದರಲ್ಲಿ ಕೋಲಾಟ ನಡೆಯಿತು. ಕಾಶಿಯಾತ್ರೆಯಲ್ಲಿ ಗರುಡಾರೂಢನಾಗಿ ಬಂದು ಮರಳಿ ಕಲ್ಯಾಣೋತ್ಸವಕ್ಕೆ ಕರೆ ತಂದು ಲಗ್ನಪತ್ರಿಕೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ವಧುನಿರೀಕ್ಷಣೆ(ಮಂಗಳಮುಹೂರ್ತ), ಬಳಿಕ ಕನ್ಯಾದಾನ, ಕಂಕಣಕ್ಕೆ ನಾಗನ ಆಹವಾನೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ರಾಜಾ ಹೋಮ, ಅಕ್ಷತಾರೋಹಣ ಸೇವೆ, ನಾದೋಪನಾ ಸೇವೆ, ಶೃಂಗಾರ ಕೀರ್ತನೆಗಳಲ್ಲಿ ಲೀನಾ ವಿನೋದ, ಮಾಲಿಕಾ ರೂಪಣಾ, ಮಾಲಾಧಾರಣೆ ಸೇವೆ, ಉಡುಗೊರೆ ಸೇವೆ, ಮೂರು ಬಾರಿ ನರ್ತನ, ಬೋಗ ಮೂರ್ತಿ ಊಂಜಲ್ ಸೇವೆ, ಅಷ್ಟಾವಧಾನ ಸೇವೆ ನಡೆದು, ಕೊನೆಗೆ ಸ್ವಾಮಿ ಪಾದ ತೊಳೆದ ಜಲ, ಅಕ್ಷತೆ ಮತ್ತು ತಿರುಮಲ ದೇವಸ್ಥಾನದ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಬೆಳ್ಳಂಬೆಳಗೆ ಸುಪ್ರಭಾತ ಪೂಜೆಗೆ ಸಾಗರೋಪಾದಿಯಲ್ಲಿ ಬಂದ ಭಕ್ತರು
ಡಿ.29 ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಆರಂಭವಾದ ಸುಪ್ರಭಾತ ಪೂಜೆಗೆ ಭಕ್ತರು ಸಾಗರೋಪಾದಿಯಲ್ಲಿ ಬಂದು ಸುಪ್ರಭಾತ ಪೂಜೆಯನ್ನು ನೋಡಿದರು. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಧನು ಪೂಜೆಗೆ ಬಂದ ಭಕ್ತರೆಲ್ಲರೂ ಶ್ರೀನಿವಾಸ ದೇವರ ಸುಪ್ರಭಾತ ಪೂಜೆಯಲ್ಲಿ ಪಾಲ್ಗೊಂಡರು.