ಬಡಗನ್ನೂರು: ಮಾಡನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.21ರಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು, ಊರಿನವರ ಸಹಕಾರದಿಂದ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು. ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತೀ ಅಗತ್ಯವಾಗಿದೆ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಹಕರಿಸಿ ಪ್ರೋತ್ಸಾಹಿಸಬೇಕು. ಮಕ್ಕಳು ಮುಂದೆ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ಆಸ್ತಿ ಸಂಪಾದಿಸದೆ ಮಕ್ಕಳನ್ನೆ ಆಸ್ತಿವಂತರನ್ನಾಗಿ ಬೆಳೆಸುವಂತೆ ಹೇಳಿದ ಅವರು ಊರಿನ ಒಂದು ಶಾಲೆಯ ಅಭಿವೃದ್ಧಿ ಹೊಂದಬೇಕಾದರೆ ಆ ಊರಿನ ಶಿಕ್ಷಣಾಭಿಮಾನಿಗಳಾದ ತಾವೆಲ್ಲರೂ ಒಟ್ಟಾಗಿ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಸರಕಾರಿ ಶಾಲೆಯ ಉಳಿಸಿ ಅಭಿವೃದ್ಧಿ ಪಥದತ್ತ ಬೆಳೆಸಲು ಸಾಧ್ಯ ಎಂದು ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಹಾಗೇನೇ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಿ ತಮ್ಮ ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು
ಶಿಕ್ಷಣ ಸಂಯೋಜಕರಾದ ಅಮೃತ ಕಲಾ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತಿ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅರಿಯಡ್ಕ ಗ್ರಾ.ಪಂ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮೂಲೆ, ಜಯಂತಿ ಪಟ್ಟುಮೂಲೆ, ವಿನಯ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜುಬೈರ್ ಕೆ, ಉಪಾಧ್ಯಕ್ಷೆ ಲೀಲಾವತಿ, ಹಿರಿಯ ವಿದ್ಯಾರ್ಥಿ ಸಿರಾಜ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾನಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಮತ್ತು ಕಾರ್ಯಕ್ರಮಕ್ಕೆ ಭಾಗವಹಿಸಿರುವ ಎಲ್ಲಾ ಗಣ್ಯರಿಗೆ ಹಾಗೂ ಶಾಲೆಗೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿರುವ ದಾನಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಸಂತೋಷ್ ಮಿಸ್ಕಿತ್ ಸ್ವಾಗತಿಸಿ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಸಹ ಶಿಕ್ಷಕಿ ಸುಪ್ರಿಯ ಎಸ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕರಾದ ದಿವ್ಯಾ, ರೇವತಿ, ಗೌರವ ಶಿಕ್ಷಕರಾದ ಗಾಯತ್ರಿ, ಖದೀಜತ್ ಶಮೀಮಾ ಮತ್ತು ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ, ಅಂಗನವಾಡಿ ಪುಟಾಣಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.