ಮಾದಕಟ್ಟೆ ಅನುದಾನಿತ ಶಾಲೆಯಲ್ಲಿ ಮಾರ್ದನಿಸಿದ ಉಳಿವಿನ ಕೂಗು – ಅಭಿವೃದ್ದಿಯ ಶಕೆ ಕಾಣಿಸಲು ಪಣತೊಟ್ಟಿದೆ ಯುವಕರ ತಂಡ

0

ವಿಟ್ಲ: ವಿದ್ಯೆಯೆಂಬ ಜ್ಞಾನಧಾರೆಯನ್ನು ಎರೆದು ಸಮಾಜದಲ್ಲಿ ಸಜ್ಜನ ವ್ಯಕ್ತಿಗಳನ್ನಾಗಿ ರೂಪಿಸಿ, ಹಲವು ಕ್ಷೇತ್ರಗಳಲ್ಲಿ ಮಿಂಚುವಂತೆ ಮಾಡಿ ಊರಿನ ಕೀರ್ತಿಯನ್ನು ನಾಡಿನೆತ್ತರಕ್ಕೆ ಬೆಳೆಸಿದ ಶಾಲೆಯದು… ಜ್ಞಾನಸುಧೆ ಪಡೆದ ಹಲವು ಮಂದಿ ಮುಂದಕ್ಕೆ ಹೋದವರೇ ಹೆಚ್ಚು.. ಕಲಿತ ಶಾಲೆಯನ್ನೊಮ್ಮೆ ಹಿಂದೆ ತಿರುಗಿ ನೋಡಿದಾಗ ಕಲಿತ ಕಲಿಸಿದ ಶಾಲೆ ಬರಿಯ ಕಟ್ಟಡವಾಗಿ ಉಳಿಯುವ ದಿನ ಸಮೀಪಿಸುತ್ತಿದೆ ಎಂದು ಭಾವಿಸುವಷ್ಟು ಅಳಿವಿನಂಚಿಗೆ ತಲುಪಿದೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಬಳಿಯ ಮಾದಕಟ್ಟೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಕಾಶಿ, ಗುರುಕುಲ ಎಂದೇ ಕಳೆದ 90 ದಶಕಗಳಿಂದ ಪ್ರಸಿದ್ದಿಯಾಗಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೊಂದು ಗತ ವೈಭವವನ್ನು ಸಾರುತ್ತಿದೆ. 1933ನೇ ಇಸವಿಯಲ್ಲಿ ಸ್ಥಳೀಯ ನಿವಾಸಿ ಹಿರಿಯರಾದ ದಿವಂಗತ ಕೃಷ್ಣಭಟ್ ಹಾಗೂ ನಾರಾಯಣ ಭಟ್ ರವರಿಂದ ಸ್ಥಾಪಿಸಲ್ಪಟ್ಟ ಶಾಲೆ ಊರಿನ ವಿದ್ಯಾ ದೇಗುಲವಾಗಿ ಸ್ಥಳೀಯರ ಸಹಕಾರದೊಂದಿಗೆ ಅಂದು ಪ್ರಾರಂಭವಾಯಿತು. ಅಂದು ಕೇವಲ 12 ಮಂದಿ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆ 1979-80 ರಲ್ಲಿ ಪೂರ್ಣ ಪ್ರಮಾಣವಾಗಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಪರಿವರ್ತನೆಗೊಂಡಿತು.


1983 ರಲ್ಲಿ ಸ್ವರ್ಣ, 1993 ರಲ್ಲಿ ವಜ್ರ ಮಹೋತ್ಸವ ನಡೆಸಿರುವ ಈ ಸಂಸ್ಥೆಯು ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಇಲ್ಲಿನ ಅನೇಕ ಹಿರಿಯ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿದ್ದಾರೆ. ಆದರೆ ಶಾಲೆಯ ಮೂಲಭೂತ ವ್ಯವಸ್ಥೆಗಳು ಅಧೋಃಗತಿಗೆ ತಲುಪಿದೆ. ಪಕ್ಕಾಸಿನಿಂದ ಹಿಡಿದು ಕಿಟಕಿ ಬಾಗಿಲವರೆಗೂ ಬೀಳುವ ಸ್ಥಿತಿಗೆ ಬಂದು ನಿಂತಿದೆ. ಈ ಭಾಗದ 3- 4 ಗ್ರಾಮಗಳ ಬಡವರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿರುವ ಈ ಶಾಲೆಯ ಉಳಿವಿಗಾಗಿ ಊರಿನ ಸಮಸ್ತ ಭಾಂದವರು ಇಂದು ಒಗ್ಗಟ್ಟಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ದಾನಿಗಳ ಮತ್ತು ಜನಪ್ರತಿನಿದಿಗಳ ಸಹಾಯ ಹಸ್ತ ಸಾಕಾಗುತ್ತಿಲ್ಲ ಎಂಬ ನೋವು ಅವರಲ್ಲಿದೆ.


ಊರಿನ ಶಾಲೆ 91 ವರ್ಷಗಳು ಪೂರೈಸಿದೆ ಎಂಬ ಸಂತಸ ಒಂದೆಡೆಯಾದರೆ ಮತ್ತೊಂದೆಡೆ ಶಾಲೆ ಅಳಿವಿನಂಚಿಗೆ ಬಂದು ನಿಂತಿದೆ ಎಂಬ ನೋವು ಕೂಡ ಆವರಿಸಿದೆ. ಜನಪ್ರತಿನಿದಿನಗಳ ಮೂಲಕ ಸರಕಾರದ ಸಹಾಯ ಪಡೆಯಬಹುದೆಂದರೆ ʻಅನುದಾನಿತʼ ಶಾಲೆ ಎಂಬ ತಲೆಬರಹ ಬೇರೆ ಅಡ್ಡಿಯಾಗುತ್ತಿದೆ.


ಆದರೆ ಛಲವನ್ನು ಬಿಡದ ಸ್ಥಳೀಯ ಯುವಕರು ಮತ್ತು ಹಳೆ ವಿದ್ಯಾರ್ಥಿಗಳು ಶಾಲೆಗೆ ಆಧುನಿಕ ಟಚ್ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಜೊತೆಗೆ ಮುಂದೆ ಭವ್ಯ ಮಂದಿರವಾಗಿ ಮಾಡುವ ದೃಡ ಭರವಸೆ ಇಟ್ಟುಕೊಂಡು ವಿಶ್ವಾಸ ಭರಿತರಾಗಿ ನಿಂತಿದ್ದಾರೆ. ಇದರ ಆರಂಭ ಎಂಬಂತೆ ಇತ್ತೀಚೆಗೆ ಯುವಕರ ತಂಡವು ಶಾಲಾಭಿವೃಧಿ ಸಮಿತಿಯ ಆಶ್ರಯದಲ್ಲಿ ವಿಜೃಂಭಣೆಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವ ಮೂಲಕ ನೂರಾರು ಹಿರಿಯ ವಿದ್ಯಾರ್ಥಿಗಳನ್ನು, ಜನ ನಾಯಕರುಗಳನ್ನು ಹಾಗೂ ಹತ್ತು ಹಲವಾರು ದಾನಿಗಳನ್ನು ಒಂದೇ ಸೂರಿನಡಿಗೆ ತರುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.


ಮಾದಕಟ್ಟೆ, ಮದಕ, ಪಡಾರು, ಬಾರೆಬೆಟ್ಟು, ಪಂಜಿ ಗದ್ದೆ, ಬಸಪೆಟ್ಟು, ಮುಂಡತ್ತಜೆ, ಕಲ್ಲು ಮಜಲು, ಮುಂತಾದ ಪ್ರದೇಶಗಳ ಮಕ್ಕಳಿಗೆ ಶೈಕ್ಷಣಿಕ ಕೇಂದ್ರವಾಗಿರುವ ಈ ಶಾಲೆಯಲ್ಲಿ ಕಲಿತು ಸ್ವಂತ ಉದ್ದಿಮೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ದಾನಿಗಳಾದ ಹಮೀದ್ ಕುಲ್ಯಾರ್, ಹೈ ಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಸೇರಿದಂತೆ, ಮಾಧ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಿರಿಯ ವಿದ್ಯಾರ್ಥಿಗಳ ಸಹಕಾರದ ನಿರೀಕ್ಷೆಯಲ್ಲಿದೆ ಸಂಘಟಕರ ತಂಡ. ಒಟ್ಟಾರೆಯಾಗಿ ಸ್ಥಳೀಯ ಯುವಕರ ಮನಸ್ಸಿನಲ್ಲಿ ರುವ ‘ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯ ಘೋಷಣೆ’ ಯಶಸ್ವಿಯಾಗಲು ಸರಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ.

ʻಶಾಲೆಗಾಗಿ ಮಿಡಿಯಲಿ ನಮ್ಮ ಹೃದಯʼ
ಶಾಲೆಯ ಉಳಿವಿಗಾಗಿ ಶ್ರಮವಹಿಸುತ್ತಿರುವ ಊರಿನ ತಂಡ ʻಶಾಲೆಗಾಗಿ ಮಿಡಿಯಲಿ ನಮ್ಮ ಹೃದಯʼ ಎಂಬ ದ್ವೇಯದಡಿ ಶಿಕ್ಷಣ ಮಟ್ಟ ಹೆಚ್ಚಿಸುವ ಪಣತೊಟ್ಟಿದೆ. ಶಾಲೆಯೊಂದು ಬೆಳಗಿದರೆ ದೇಗುಲವೊಂದು ಬೆಳಗಿದಂತೆʼ ಈ ಮಾತಿಗೆ ಪೂರಕವಾಗಿ ಶಾಲೆಯ ಅಭ್ಯುದಯಕ್ಕೆ ಹೊರಟ ಊರಿನ ಮಂದಿಗೆ ಜನಪ್ರತಿನಿಧಿಗಳು, ದಾನಿಗಳು ಸಹಾಯ ಹಸ್ತ ಚಾಚಿ ಮುನ್ನಡೆಸಬೇಕಾಗಿದೆ.

ಶಾಲೆಯ ಅಭಿವೃದ್ಧಿಗೆ ಸಹಕಾರ ಅಗತ್ಯ
ಈಗಾಗಲೇ ನಮ್ಮ ಶಾಲೆ 91 ವರುಷವನ್ನು ಪೂರೈಸಿದೆ. ಅನುದಾನಿತ ಶಾಲೆಯಾಗಿರುವ ಹಿನ್ನೆಲೆಯಲ್ಲಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ನಮ್ಮ ಶಾಲೆಯ ಉಳಿವಿಗೆ ಹಳೆ ವಿದ್ಯಾರ್ಥಿಗಳ ಸಹಿತ ದಾನಿಗಳು ಹಾಗೂ ಗ್ರಾಮಸ್ಥರ ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ‌. ಈಗಾಗಲೇ ಇನ್ಕಷ್ಟು ಹಳೇ ವಿದ್ಯಾರ್ಥಿಗಳನ್ನು ಒಟ್ಟು ಗೂಡಿಸುವ ಪ್ರಯತ್ನ‌ ನಡೆಯುತ್ತಿದೆ. ಕಟ್ಟಡ ಸಹಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರಕಾರದ ಸಹಕಾರವನ್ನು ಬಯಸುತ್ತಿದ್ದೇವೆ.

ಹರೀಶ್ ಕುಮಾರ್
ಮುಖ್ಯೋಪಾದ್ಯಾಯರು, ಮಾದಕಟ್ಟೆ ಅನುದಾನಿತ ಹಿ.ಪ್ರಾ. ಶಾಲೆ

LEAVE A REPLY

Please enter your comment!
Please enter your name here