ಪುತ್ತೂರು:ಶಿಕ್ಷಕರ ಮಾನಸಿಕ ಕಿರುಕುಳದಿಂದಾಗಿ ಪುತ್ತೂರಿನ ಸರಕಾರಿ ಪ್ರೌಢ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರು ಕೈಗೆ ಸಿಕ್ಕಗುಳಿಗೆಗಳನ್ನು ನುಂಗಿ ಅಸ್ವಸ್ಥಗೊಂಡ ಘಟನೆ ಡಿ.30ರಂದು ನಡೆದ ಬಗ್ಗೆ ವರದಿಯಾಗಿದೆ.
ಬೆಳ್ತಂಗಡಿಯ ತಣ್ಣೀರುಪಂಥ ಗ್ರಾಮದವರಾಗಿದ್ದು, ಬಲ್ನಾಡು ಉಜ್ರುಪಾದೆ ಅಜ್ಜಿ ಮನೆಯಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿ, ತನಗೆ ಶಾಲೆಯಲ್ಲಿ ಶಿಕ್ಷಕರು ಪ್ರತಿನಿತ್ಯ ಮಾನಸಿಕ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯ ಪೋಷಕರು ಮಕ್ಕಳ ಹಕ್ಕು ಕಾಯ್ದೆಯಡಿ ದೂರು ನೀಡಿದಾಗ ಮಕ್ಕಳ ಸಹಾಯವಾಣಿ ಕೇಂದ್ರದಿಂದ ಶಾಲೆಗೆ ಬಂದು ವಿಚಾರಿಸಿ ಹೋಗಿದ್ದಾರೆ. ಇದೇ ನೆಪವನ್ನು ಇಟ್ಟು ಶಿಕ್ಷಕರು ಮತ್ತೆ ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಡಿ.26ರಂದು ವಿದ್ಯಾರ್ಥಿನಿ ಅಜ್ಜಿ ಮನೆಯಿಂದ ತಣ್ಣೀರುಪಂಥ ತನ್ನ ಮನೆಗೆ ಹೋಗಿ ತಂದೆಯಲ್ಲಿ, ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.ಡಿ.30ರಂದು ಬೆಳಿಗ್ಗೆ ಶಾಲೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿ ತಂದಿಟ್ಟಿದ್ದ ಗುಳಿಗೆಗಳನ್ನು ನುಂಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಮನೆ ಮಂದಿ ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಚೇತರಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ವಿದ್ಯಾರ್ಥಿನಿಯ ಪೋಷಕರನ್ನು ಮತ್ತು ಶಾಲಾ ಶಿಕ್ಷಕರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.