ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ 2002ರ ಎಸ್‌ಎಸ್‌ಎಲ್‌ಸಿ ಹಾಗೂ 2004ರ ಪಿಯುಸಿ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಆರಂಭದ ಪ್ರಾರ್ಥನೆಯ ಬಳಿಕ ಪೂರ್ವ ವಿದ್ಯಾರ್ಥಿಗಳು ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ಬಳಿಕ ಗುರುವಂದನಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಕೋಸ್‌ರವರು ಮಾತನಾಡಿ ಇಂತಹ ಕಾರ್ಯಕ್ರಮ ಸಂಘಟಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿ ಹಳೆವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ವ್ಯಕ್ತಿಯು ಮೊದಲು ತನ್ನ ಆರೋಗ್ಯ ಮತ್ತು ಕುಟುಂಬಕ್ಕೆ ಪ್ರಾಧಾನ್ಯತೆ ನೀಡಬೇಕು. ಆ ಬಳಿಕ ವೃತ್ತಿ ಮತ್ತು ಸಾಮಾಜಿಕ ಕಾರ್ಯಗಳೆಡೆಗೆ ಬದ್ಧತೆಯನ್ನು ತೋರ್ಪಡಿಸಬೇಕು. ಗೆಳೆತನವೆನ್ನುವುದು ಚಿನ್ನದ ಉಡುಗೊರೆ. ಅಮೂಲ್ಯವಾದ ಈ ಸಂಬಂಧಗಳು ಎಂದಿಗೂ ಜೋಪಾನವಾಗಿರಲಿ ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಿಕ್ಷಕರು, ಆಗಿನ ಕಚೇರಿ ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಕಾಸ್ ಸ್ವಾಗತಿಸಿ, ಸಯ್ಯದ್ ಜಮೀಲ್ ಪಾಷ ವಂದಿಸಿದರು. ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಮತ್ತು ಬಳಗದವರು ಪ್ರಾರ್ಥಿಸಿದರು.