ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯು ದ.30 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಇದರ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮದ 6 ಶಾಲೆಗಳ ಆಯ್ದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಮಸ್ಯೆ, ಭಾವನೆಗಳನ್ನು ಅಧಿಕಾರಿಗಳ ಮುಂದೆ ಹಂಚಿಕೊಂಡರು. ಬಹಳ ವಿಶೇಷವಾಗಿ ನಡೆದ ಸಭೆಯಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಬಹಳ ಸೌಮ್ಯವಾಗಿ ಉತ್ತರಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆಯವರು ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದರು. ಗ್ರಾಪಂ ವ್ಯಾಪ್ತಿಯ 6 ಶಾಲೆಗಳ ಸುಮಾರು 73 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಪುಸ್ತಕ ಬಹುಮಾನ ಕೊಡುವ ಮೂಲಕ ಗೌರವಿಸಲಾಯಿತು. ಸಭೆಯಲ್ಲಿ ನಡೆದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಬೀದಿ ನಾಯಿಗಳು ಹೆಚ್ಚುತ್ತಿದ್ದು ಶಾಲಾ ಆವರಣದೊಳಗೆ ಬಂದು ಬೀಡು ಬಿಡುತ್ತಿದ್ದು ಶಾಲಾ ಸುತ್ತಮುತ್ತ ಗಲೀಜು ಮಾಡಿ ಹಾಕುತ್ತವೆ. ನಾಯಿಗಳ ಉಪದ್ರದಿಂದ ಭಯವಾಗುತ್ತಿದೆ ಎಂದು ಕುಂಬ್ರ ಕೆಪಿಎಸ್, ದರ್ಬೆತ್ತಡ್ಕ, ಕುಟ್ಟಿನೋಪಿನಡ್ಕ ಶಾಲೆಯ ವಿದ್ಯಾರ್ಥಿಗಳು ತಿಳಿಸಿದರು. ಶಾಲೆಗೆ ಆಗಾಗ ಬೀಟ್ ಪೊಲೀಸ್ ಅಧಿಕಾರಿಯವರು ಬರುತ್ತಿರಬೇಕು ಎಂದು ದರ್ಬೆತ್ತಡ್ಕ ಶಾಲಾ ವಿದ್ಯಾರ್ಥಿಗಳು ತಿಳಿಸಿದರು. ಶಾಲಾ ಮೈದಾನಕ್ಕೆ ಹೊರಗಿನಿಂದ ಆಟವಾಡಲು ಬಂದು ಶಾಲೆಯ ವಸ್ತುಗಳಿಗೆ ಪೈಪು ಲೈನ್, ಕಿಟಕಿ ಗಾಜು ಇತ್ಯಾದಿಗಳನ್ನು ಹಾಳು ಮಾಡಿ ಹಾಕ್ತಾರೆ ಎಂದು ಕೆಪಿಎಸ್ ಕುಂಬ್ರ, ಪರ್ಪುಂಜ ಹಾಗೂ ಕುಟ್ಟಿನೋಪಿನಡ್ಕ ಶಾಲಾ ವಿದ್ಯಾರ್ಥಿಗಳು ತಿಳಿಸಿದರು. ಈ ಬಗ್ಗೆ ಬೀಟ್ ಪೊಲೀಸ್ ಅಧಿಕಾರಿಯವರು ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ನಾಗರೀಕರು ತಮ್ಮ ಶಾಲೆಯ ಸೊತ್ತುಗಳ ಬಗ್ಗೆ ಗಮನ ಹರಿಸುವಂತೆ ಮತ್ತು ಯಾವುದೇ ಹಾನಿಯುಂಟು ಮಾಡದಂತೆ ನೋಡಿಕೊಳ್ಳಬೇಕು, ಯಾಕೆಂದರೆ ನಮ್ಮ ಮಕ್ಕಳು ಓದುವ ಶಾಲೆ, ಈ ಬಗ್ಗೆ ಗಮನ ಇರಲಿ ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮನವಿ ಮಾಡಿಕೊಂಡರು. ಪ್ರತಿ ಶಾಲೆಗೆ ನ್ಯಾಪ್‌ಕಿನ್ ಬರ್ನರ್ ಬೇಕು ಎಂಬ ಬೇಡಿಕೆಯನ್ನು ಕುಂಬ್ರ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಸಭೆಯ ಗಮನಕ್ಕೆ ತಂದರು. ನಮಗೆ ಅಂಗನವಾಡಿಯಲ್ಲಿ ಕಟ್ಲೀಸ್ ಕೊಡೋದಿಲ್ಲ, ನಮಗೆ ಕಟ್ಲೀಸ್ ಬೇಕು ಎಂದು ಪುಟಾಣಿ ಹಂಶಿಕಾ ರೈ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಇಲಾಖಾಧಿಕಾರಿ ಆರತಿಯವರು, ಸರಕಾರದಿಂದಲೇ ಕಟ್ಲೀಸ್(ಚಿಕ್ಕಿ) ಕೊಡುವುದನ್ನು ನಿಲ್ಲಿಸಿ 1 ವರ್ಷ ಆಗಿದೆ. 1 ಮಗುವಿಗೆ 8 ರೂಪಾಯಿಯಂತೆ ಖರ್ಚು ಮಾಡಲಾಗುತ್ತಿದ್ದು ಅದರ ಬದಲಿಗೆ ಬೇರೆ ಫುಡ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಶತಮಾನೋತ್ಸವ ಸಂಭ್ರಮದಲ್ಲಿ ನಮ್ಮ ಕೈಕಾರ ಶಾಲೆಯ ಆವರಣದಲ್ಲಿ ಒಂದು ಹೈಮಾಸ್ಕ್ ಲೈಟ್‌ನ ಅವಶ್ಯಕತೆ ಇದೆ. ಹಾಗೇ ಶಾಲಾ ಆವರಣದಲ್ಲಿರುವ ಅಪಾಯಕಾರಿ ಮರವನ್ನು ತೆರವು ಮಾಡಿಕೊಡಿ ಎಂದು ವಿದ್ಯಾರ್ಥಿಗಳು ವಿನಂತಿಸಿಕೊಂಡರು. ಕುಂಬ್ರ ಕೆಪಿಎಸ್ ಶಾಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂಬುದನ್ನು ವಿದ್ಯಾರ್ಥಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಈ ಬಗ್ಗೆ ಕೂಡಲೇ ಗಮನ ಹರಿಸಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಕೆಪಿಎಸ್ ಹೈಸ್ಕೂಲ್ ವಿಭಾಗಕ್ಕೆ ಹುಡುಗಿಯರಿಗೆ ಹೆಚ್ಚುವರಿ ಶೌಚಾಲಯ ವ್ಯವಸ್ಥೆಯೂ ಆಗಬೇಕು ಎಂದು ವಿದ್ಯಾರ್ಥಿಗಳು ಕೇಳಿಕೊಂಡರು. ಸಂಜೆ ಮತ್ತು ಬೆಳಗ್ಗಿನ ಜಾವ ಶಾಲಾ ಧ್ವಾರದ ಬಳಿ ರಸ್ತೆ ದಾಟಲು ಕಷ್ಟವಾಗುತ್ತಿದೆ ಎಂದು ಕೆಪಿಎಸ್ ವಿದ್ಯಾರ್ಥಿಗಳು ತಿಳಿಸಿದರು. ಈ ಬಗ್ಗೆ ಬೀಟ್ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶೌಚಾಲಯದ ಕೊರತೆ ಇದೆ ಎಂದು ಅಜ್ಜಿಕಲ್ಲು ಶಾಲಾ ವಿದ್ಯಾರ್ಥಿಗಳು ತಿಳಿಸಿದರು.
ವೇದಿಕೆಯಲ್ಲಿ 6 ಶಾಲೆಗಳ ಶಾಲಾ ನಾಯಕರುಗಳು, ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ರೇಖಾ ಯತೀಶ್, ಸುಂದರಿ, ಶಾರದಾ, ಚಿತ್ರಾ ಬಿ.ಸಿ, ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಗುರು ಜ್ಯೂಲಿಯಾನ ಮೊರಸ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ಪಂಚಾಯತ್ ಮಾಹಿತಿಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಯಂತಿ ವಂದಿಸಿದರು. ಸಿಬ್ಬಂದಿಗಳಾದ ಕೇಶವ, ಲೋಕನಾಥ, ಗ್ರಂಥಪಾಲಕಿ ಸಿರಿನಾ ಸಹಕರಿಸಿದರು.
73 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಗ್ರಾಮದ 6 ಶಾಲೆಗಳ 73 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂವಿಧಾನ ಸಂಭ್ರಮ ಮತ್ತು ಮಕ್ಕಳ ಗ್ರಾಮಸಭೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ದೇಶಭಕ್ತಿಗೀತೆ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಮಾಡಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗ್ರಾಮಸಭೆಯಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೂಡ ಪಂಚಾಯತ್ ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಕ.ಸಾ.ಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ.ಪುತ್ತೂರು, ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ಹಾಗೂ ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರೊ.ನರೇಂದ್ರ ರೈ ದೇರ್ಲರವರುಗಳು ಪುಸ್ತಕಗಳನ್ನು ಪಂಚಾಯತ್‌ಗೆ ಕೊಡುಗೆಯಾಗಿ ನೀಡಿದ್ದರು. ಗ್ರಂಥಪಾಲಕಿ ಸಿರಿನಾ ಉರ್ವರವರು ಶಾಲೆಗಳಲ್ಲಿ ಸ್ಪರ್ಧೆಗಳನ್ನು ನಡೆಸಿಕೊಟ್ಟಿದ್ದರು.
ಮಾದರಿಯಾದ ಮಕ್ಕಳ ಗ್ರಾಮಸಭೆ
ಮಕ್ಕಳ ಗ್ರಾಮಸಭೆಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಆರತಿ, ಮೆಸ್ಕಾಂ ಇಲಾಖೆಯ ರವೀಂದ್ರ, ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾಶ್ರೀ, ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್.ಪಾಟೀಲ್‌ರವರು ಮಾಹಿತಿ ನೀಡುವ ಮೂಲಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಕೊನೆಯಲ್ಲಿ ಮಕ್ಕಳು ಹಾಡು ಹಾಡುವ ಮೂಲಕ ಮನರಂಜಿಸಿದರು. ಒಟ್ಟಾರೆಯಾಗಿ ಒಂದು ಮಾದರಿ ಮಕ್ಕಳ ಗ್ರಾಮಸಭೆಯಾಗಿ ಮೂಡಿಬಂತು.
ಅಂಗನವಾಡಿಗೆ ಹಾವು ಬರ‍್ತದೆ, ಹೊಸ ಕಟ್ಟಡ ಕೊಡಿ ಮನವಿ ಮಾಡಿಕೊಂಡ ಪುಟಾಣಿ…
ನಮ್ಮ ಅಂಗನವಾಡಿ ಕಟ್ಟಡದೊಳಗೆ ಹಾವು ಬರ‍್ತದೆ ನಮಗೆ ಹೊಸ ಕಟ್ಟಡ ಮಾಡಿಕೊಡಿ ಎಂದು ಮೈಕ್ ಹಿಡಿದು ಕೇಳಿಕೊಂಡ ಕುಂಬ್ರ ಅಂಗನವಾಡಿ ಕೇಂದ್ರದ ಪುಟಾಣಿ ಹಂಶಿಕಾ ರೈಯವರು ಸಭೆಯ ಗಮನ ಸೆಳೆದರು. ಕೇಂದ್ರಕ್ಕೆ ಆಗಾಗ ಹಾವುಗಳು ಬರುತ್ತಿದ್ದು ನಮಗೆ ಕುಳಿತುಕೊಳ್ಳಲು ಹೆದರಿಕೆಯಾಗ್ತಿದೆ ಎಂದು ಹಂಶಿಕಾ ತಿಳಿಸಿದರು. ಇದಕ್ಕೆ ಇಲಾಖಾಧಿಕಾರಿ ಆರತಿಯವರು ಸಮರ್ಪಕ ಉತ್ತರ ನೀಡಿದರು.
‘ ಮಕ್ಕಳ ಬೇಡಿಕೆ,ಮನವಿಗಳನ್ನು ದಾಖಲಿಸಿಕೊಂಡಿದ್ದೇವೆ. ಪಂಚಾಯತ್‌ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ಮಾಡುತ್ತೇವೆ. ಗ್ರಾಮದ 6 ಶಾಲೆಗಳ 73 ವಿದ್ಯಾರ್ಥಿಗಳನ್ನು ಗೌರವಿಸಿರುವುದು ಖುಷಿ ತಂದಿದೆ. ಸರಕಾರಿ ಶಾಲೆಗಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಂಡು ಶಾಲಾಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾಗಿದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ