@ ಸಿಶೇ ಕಜೆಮಾರ್
ಇಂದು ಹೊಸ ವರುಷದ ಮೊದಲ ದಿನದ ಸಂಭ್ರಮ. ನಾವೆಲ್ಲ 2024 ಅನ್ನು ಕಳೆದು 2025 ರ ಹೊಸ ಕ್ಯಾಲೆಂಡರ್‌ನ ಹೊಸ ವರುಷದ ಹೊಸ್ತಿಲನ್ನು ದಾಟಿದ್ದೇವೆ. ಹೊಸ ವರುಷದ ಮೊದಲ ದಿನದ ಬೆಳಗನ್ನು ನೋಡಿದ್ದೇವೆ ಬದಲಾಗಿಲ್ಲ..!? ಬೆಳಗ್ಗೆ ಮೂಡಣದಿ ಕಂಡಿದ್ದು ಅದೇ ಸೂರ್ಯ, ಬೀಸಿದ್ದು ಅದೇ ಗಾಳಿ, ಅದೇ ಚಂದ್ರ, ಅದೇ ವಸಂತ ಎಲ್ಲವೂ ಅದೇ ಯಾವುದೂ ಬದಲಾಗಿಲ್ಲ, ಬದಲಾಗೋದು ಇಲ್ಲ. ಬದಲಾಗಬೇಕಾಗಿರುವುದು ನಮ್ಮ ಮನಸ್ಸು, ನಮ್ಮೊಳಗಿನ ಯೋಚನೆ, ಯೋಜನೆ, ಕನವರಿಕೆ, ಆಸೆ, ಆಕಾಂಕ್ಷೆ, ಭಾವನೆಗಳು ಅಷ್ಟೇ…
ಕೆಟ್ಟದ್ದನ್ನೂ ಮರೆತು ಒಳ್ಳೆಯದನ್ನು ಸ್ವೀಕರಿಸಿಕೊಳ್ಳಬೇಕು. ನಿನ್ನೆಗಳು ಮಸುಕಾದಂತೆ ನಾಳೆಗೆ ಪ್ರಭೆ. ಭವಿಷ್ಯದ ಬೆಳಕನ್ನು ಕಾಣಲು ನಿನ್ನೆಯ ಇರುಳನ್ನು ಕಳೆಯಲೇಬೇಕು. ವರುಷಗಳು ಉರುಳುವುದು ಸೃಷ್ಟಿಯ ನಿಯಮ. ಕಾಲವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಕಾಲದ ಹಕ್ಕಿಯ ರೆಕ್ಕೆಗಳಿಗೆ ಧಣಿವೇ ಎಂಬುದೇ ಇಲ್ಲ…!
ಒಂದು ವರ್ಷದ ಅಂತ್ಯದೊಡನೆ ಮತ್ತೊಂದು ವರ್ಷ ಉದಯಿಸುವುದು ಸಹಜ ಆಪ್‌ಕೋರ್ಸ್ ಬದಲಾಗಬೇಕಾದ್ದು ವರ್ಷಗಳಲ್ಲ, ಸೂರ್ಯ ಚಂದ್ರರಲ್ಲ…ನಾವುಗಳು, ನಮ್ಮ ಮನಸ್ಸು, ನಮ್ಮೊಳಗೆ ಅವಿತು ಕುಳಿತಿರುವ ಹೃದಯ. ಕಳೆದ ವರ್ಷದಲ್ಲಾದ ತಪ್ಪುಗಳು, ಅನಾಹುತಗಳು ದುರಂತಗಳು ಎಲ್ಲವೂ ಒಂದು ಕೆಟ್ಟ ಕನಸು ಎಂದು ಮರೆತುಬಿಡೋಣ…
ಒಳ್ಳೆಯದನ್ನೂ ಮರೆಯುವುದು ಸಲ್ಲ, ಒಳ್ಳೆಯದನ್ನು ಹೆಕ್ಕಿಕೊಂಡು ಕಾಲದ ಹಕ್ಕಿಯ ರೆಕ್ಕೆಗಳಿಗೆ ಕಟ್ಟಿಬಿಡೋಣ.. ಕೆಟ್ಟದ್ದನ್ನು ಈ ಕ್ಷಣ ಸುಟ್ಟು ಹಾಕೋಣ. ಹಕ್ಕಿ ಹಾರುತ್ತಿರಲಿ. ಕಾಲದ ಹಕ್ಕಿಯ ಯಾನದ ನಡುವಿನಲ್ಲಿ ಅದೆಷ್ಟೋ ಅಭೂತಪೂರ್ವ ಘಟನೆಗಳು ಕಥೆಯಾಗಿ, ಇತಿಹಾಸವಾಗಿ ಕ್ರಮೇಣ ದಂತಕಥೆಯಾಗಿ ಮಸುಕಾಗಿ ಹೋಗಿವೆ. ಹೊಸ ಕನಸು, ಆಸೆ, ಆಕಾಂಕ್ಷೆಗಳೊಂದಿಗೆ ಹೊಸ ವರುಷ ಬಂದು ನಿಂತಿದೆ. ಬನ್ನಿ ಹೃತ್ಪೂರ್ವಕವಾಗಿ ಸ್ವಾಗತಿಸೋಣ. ಮನುಷ್ಯ ಜೀವನ ದೀರ್ಘವಾದ ಸುಖ ಪ್ರಯಾಣವೇನಲ್ಲ ಹಲವಾರು ಮಿಶ್ರಿತ ಪ್ರಸಂಗಗಳ ಸಿಹಿ, ಕಹಿ, ನೋವು ನಲಿವು, ಸುಖ ದುಃಖಗಳ ಸಂಗಮ. ಜೀವ ಜಂತುಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದದ್ದು ಎಂದು ಜಂಭಪಟ್ಟುಕೊಳ್ಳುತ್ತಿದ್ದೇವೆ. ಬುದ್ದಿ ಶಕ್ತಿಯಲ್ಲಿ ವೈಜ್ಞಾನಿಕವಾಗಿ ಏನನ್ನೂ ಬೇಕಾದರೂ ಸಾಧಿಸಬಲ್ಲೆವು ಎನ್ನುವ ಹುಮ್ಮಸ್ಸು ನಮ್ಮಲ್ಲಿದೆ. ಆದರೆ ಇದೆಲ್ಲದರ ನಡುವೆ ನಾವು ಒಮ್ಮೊಮ್ಮೆ ಶಿಲಾಯುಗಕ್ಕೆ ಮರಳುವ ಪ್ರಾಣಿಗಿಂತಲೂ ಕೀಳು ಮಟ್ಟದ ವರ್ತನೆ ತೋರುವುದನ್ನು ಮರೆಯವುದಿಲ್ಲ.
ಈ ಸಲದ ಹೊಸ ವರ್ಷದ ಆಚರಣೆ ನಮ್ಮ ಹೃದಯದೊಳಗೆ ನಡೆಯಲಿ. ಬದಲಾಗಲಿ ಮನಸ್ಸು, ಹೃದಯ.ತುಂಬಿಕೊಳ್ಳಲಿ ಸತ್ಯ,ಕರುಣೆ, ಶಾಂತಿ, ಪ್ರೀತಿ. ಜೀವನದ ಗುರಿ ತಲುಪಲು ಈ ಕ್ಷಣ ಹೊರಡೋಣ. ಕೊನೆಯಾಗಿ ಒಂದು ಮಾತು, ಯಾರು ಏನೇ ಅನ್ನಲಿ ತಲೆ ಕೆಡಿಸ್ಕೋಬೇಡಿ, ಜೀವನದಲ್ಲಿ ಬರೋ ಒಂದೊಂದು ಕ್ಷಣವನ್ನು ಕೂಡ ಸಂಭ್ರಮಿಸಿ. ಇಲ್ಲಿರುವುದು ಯಾವುದೂ ನಮ್ಮದಲ್ಲ ಆಪ್‌ಕೋರ್ಸ್ ಈ ದೇಹ, ಆತ್ಮವೂ ನಮ್ಮದಲ್ಲ ಎಲ್ಲವೂ ದೇವರದ್ದು ನಮ್ಮದು ಅಂತ ಇದ್ದರೆ ಅದು ಒಂದೊಂದು ಕ್ಷಣಗಳು ಮಾತ್ರ ಅದನ್ನು ಎಂಜಾಯ್ ಮಾಡೋಣ…ಎಷ್ಟೇ ವರ್ಷಗಳೇ ಕಳೆದರೂ, ಎಷ್ಟೇಷ್ಟೇ ಹೊಸ ವರ್ಷಗಳೇ ಮರಳಿ ಬಂದರೂ ಹೃದಯದಲ್ಲಿ ಪ್ರೀತಿ ಎಂದೆಂದೂ ಶಾಶ್ವತವಾಗಿರಲಿ… ಸಮಸ್ತ ಜನತೆಗೆ ಹೊಸ ವರುಷ ಒಳಿತನ್ನೇ ಮಾಡಲಿ..ಶುಭಾಶಯಗಳೊಂದಿಗೆ…