ಗುಣಮಟ್ಟದ ಉತ್ಪನ್ನಗಳಿಂದ ಸಂಸ್ಥೆ ಯಶಸ್ವಿಯಾಗಿದೆ-ಅಶೋಕ್ ಕುಮಾರ್ ರೈ
ಪುತ್ತೂರು: ಕಳೆದ 75 ವರ್ಷಗಳಿಂದ ಪುತ್ತೂರನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ ಮತ್ತು ಪರಿಸರ ಸ್ನೇಹಿ ಕಾಳಜಿಯೊಂದಿಗೆ ಗುಣಮಟ್ಟದ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ನೆಹರೂನಗರದಲ್ಲಿರುವ ಮಾಸ್ಟರ್ ಪ್ಲಾನರಿ ಸಂಸ್ಥೆಯ 75ನೇ ವರ್ಷದ ಸಂಭ್ರಮಾಚರಣೆಯು ನವೀಕೃತ ಕಟ್ಟಡ ಉದ್ಘಾಟನೆ ಮತ್ತು ಎಸ್.ಕೆ.ಆನಂದ್‌ರವರ ಜೀವನಗಾಥೆಯ “ನಂದಾದೀಪ” ಕೃತಿ ಬಿಡುಗಡೆ ಕಾರ್ಯಕ್ರಮಗಳೊಂದಿಗೆ ಮಾಸ್ಟರ್ ಪ್ಲಾನರಿ ಆವರಣದಲ್ಲಿ ನಡೆಯಿತು.
ನವೀಕೃತ ಕಛೇರಿ ಕಟ್ಟಡ ಉದ್ಘಾಟನೆ:
ಮಾಸ್ಟರ್ ಪ್ಲಾನರಿಯ ನವೀಕೃತ ಕಛೇರಿ ಕಟ್ಟಡವನ್ನು ಅಶೋಕ್ ಕುಮಾರ್ ರೈರವರು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿದರು.
ಎಸ್.ಕೆ.ಆನಂದ್‌ರವರು ಸಮಾಜಕ್ಕೆ ನಿಸ್ವಾರ್ಥ ಸೇವೆ ಕೊಟ್ಟಿದ್ದಾರೆ-ಪಂಜಿಗುಡ್ಡೆ ಈಶ್ವರ ಭಟ್:
ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿದ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಜನಸಾಮಾನ್ಯರಿಗೆ ಒಳ್ಳೆಯದನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಸಮಾಜವು ಗೌರವಿಸುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜವೇ ನನ್ನ ಕುಟುಂಬ ಎಂದು ಕೆಲಸ ಮಾಡಿಕೊಂಡಿರುವುದು ಎಸ್.ಕೆ.ಆನಂದ್‌ರವರು. ಅವರ ನಿಸ್ವಾರ್ಥ ಸೇವೆಯಿಂದ ಸಮಾಜ ಅವರನ್ನು ಗುರುತಿಸುವ ಹಾಗೆ ಆಗಿದೆ. ಆನಂದ್‌ರವರ ಕುಟುಂಬ ಸಮಾಜಕ್ಕೆ ಆಸ್ತಿ ಎಂದರು. ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೀಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ದೇವಾಲಯದ ಅಭಿವೃದ್ಧಿಯ ಕೆಲಸಗಳು ತುಂಬಾ ಇದೆ. ಭಕ್ತರ ಸಲಹೆಗಳನ್ನು ನಾನು ಈಡೇರಿಸುತ್ತೇನೆ. ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಹಕಾರ ನೀಡಿ. ಎಂದರು.
ನಿರ್ಮಾಣದಲ್ಲಿ ಹೊಸತನವನ್ನು ಪರಿಚಯ ಮಾಡಿಕೊಟ್ಟಿದ್ದಾರೆ-ಕೇಶವ ಪ್ರಸಾದ ಮುಳಿಯ
ಪುತ್ತೂರು ಮುಳಿಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಪುತ್ತೂರಿಗೆ ಮತ್ತು ಹತ್ತೂರಿಗೆ ಪರಿಚಯವಾದ ಸಂಸ್ಥೆ ಮಾಸ್ಟರ್ ಪ್ಲಾನರಿ. ಎಸ್.ಕೆ.ಆನಂದ್‌ರವರ ತಂದೆ ಎಸ್.ಕೆ.ಈಶ್ವರ ಭಟ್‌ರವರು ಸ್ಥಾಪಿಸಿದ ಸಂಸ್ಥೆ ಇಂದು ಮೂರು ತಲೆಮಾರಿನ ಹಂತದಲ್ಲಿದೆ. ನಮ್ಮ ಮುಳಿಯ ಸಂಸ್ಥೆಯಲ್ಲಿಯೂ ಮಾಸ್ಟರ್ ಪ್ಲಾನರಿಯ ಮೂರು ತಲೆಮಾರಿನಿಂದ ಕೆಲಸ ಕಾರ್ಯಗಳು ನಡೆದಿದೆ. ಮಾಸ್ಟರ್ ಪ್ಲಾನರಿ ಸದಾ ಹೊಸತನದಲ್ಲಿ ಕೆಲಸ ಮಾಡುತ್ತದೆ. ಅವರ ಕಾಂಕ್‌ವುಡ್ ಉತ್ಪನ್ನಗಳು ಹೊಸತನಕ್ಕೆ ಸಾಕ್ಷಿಯಾಗಿದೆ. ಅಪ್ಪ ಮಾಡಿದ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು ನಾಲ್ಕು ಮಕ್ಕಳು ನಾಲ್ಕು ಪಿಲ್ಲರ್‌ನ ಹಾಗೆ ಇದ್ದಾರೆ ಎಂದು ಹೇಳಿ ಶುಭಹಾರೈಸಿದರು.
ಗ್ರಾಹರಿಗೆ ಬೇಕಾದ ರೀತಿಯಲ್ಲಿ ಉತ್ಪನ್ನ ನಿರ್ಮಾಣ ಮಾಡಿಕೊಟ್ಟಿದ್ದಾರೆ-ಬಂಗಾರಡ್ಕ ರಾಮ ಭಟ್
ಮುಖ್ಯ ಅತಿಥಿ ಬಂಗಾರಡ್ಕ ರಾಮ ಭಟ್ ಮಾತನಾಡಿ ಎಸ್.ಕೆ.ಆನಂದ್‌ರವರು ಜನರಿಗೆ ಬೇಕಾದ ಉತ್ಪನ್ನಗಳನ್ನು ನೀಡಿ ಗ್ರಾಹಕರ ಮನಗೆದ್ದಿದ್ದಾರೆ. ಆಗಿನ ಕಾಲದಲ್ಲಿಯೇ ಆಧುನಿಕ ಸ್ಪರ್ಶದೊಂದಿಗೆ ಉತ್ಪನ್ನಗಳನ್ನು ನಿರ್ಮಾಣ ಮಾಡುತ್ತಿದ್ದರು. ಹುಚ್ಚು ವಾಸ್ತು, ಹುಚ್ಚು ನಂಬಿಕೆಗಳನ್ನು ಬಿಟ್ಟು ಗ್ರಾಹಕರಿಗೆ ಬೇಕಾದುದನ್ನು ನೀಡಿದ್ದಾರೆ. ಅವರ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಮಾಸ್ಟರ್ ಪ್ಲಾನರಿಯ ಅಕ್ಷಯ್, ಆಕಾಶ್, ಅರ್ಜುನ್‌ರವರು ಅತಿಥಿಗಳನ್ನು ಶಾಲು ಹೂ ನೀಡಿ ಗೌರವಿಸಿದರು. ಸಂಸ್ಥೆಯ ಸಿಬಂದಿ ಶ್ಯಾಮಪ್ರಸಾದ್ ಕಾಯರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೃತಿ ಬಿಡುಗಡೆ:
ಎಸ್.ಕೆ.ಆನಂದ್‌ರವರ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕರುಣಾಕರ್‌ರವರ ಸಂಪಾದಕತ್ವದಲ್ಲಿ ಮೂಡಿಬಂದ ನಂದಾದೀಪ ಕೃತಿಯನ್ನು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಕೃತಿ ಬಿಡುಗಡೆಗೊಳಿಸಿದರು.
ಗುಣಮಟ್ಟಗಳ ಉತ್ಪನ್ನದಿಂದ ಸಂಸ್ಥೆ ಬೆಳೆಯುತ್ತದೆ-ಅಶೋಕ್ ಕುಮಾರ್ ರೈ:
ಕೃತಿ ಬಿಡುಗಡೆಯ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈರವರು ಸಂಸ್ಥೆಯನ್ನು ಹುಟ್ಟುಹಾಕಿದವರಿಗೆ ಸಿಗುವ ಆನಂದ, ಪ್ರೀತಿ, ಇನ್ನೊಬ್ಬರಿಗೆ ಸಿಗುವುದು ಕಷ್ಟ. ವಿದೇಶದಲ್ಲಿರುವ ಉದ್ಯೋಗ ಬಿಟ್ಟು ತಂದೆ ಆರಂಭಿಸಿದ ಸಂಸ್ಥೆಯನ್ನು ಬೆಳೆಸಬೇಕೆಂಬ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ಎಸ್.ಕೆ.ಆನಂದ್‌ರವರು ಬಡ ಕುಟುಂಬಗಳಿಗೆ ಉದ್ಯೋಗ ನೀಡಿ ಬೆಳೆಸಿದ್ದಾರೆ. ಸಂಸ್ಥೆಯ ಉತ್ತಮ ಗುಣಮಟ್ಟದ ಉತ್ಪನ್ನಗಳು ಹೆಸರುವಾಸಿಯಾಗಿದೆ. ಗುಣಮಟ್ಟದಿಂದ ಉದ್ಯಮ ಬೆಳೆಯುತ್ತದೆ. ಉದ್ಯಮ ಯಶಸ್ವಿಯಾಗಲು ಸಾಧ್ಯ. ಇವರ ಉತ್ಪನ್ನಗಳು ಬೆಂಗಳೂರು, ಬಿಹಾರದವರೆಗೂ ತಲುಪಿದೆ. ಇದೊಂದು ಪುತ್ತೂರಿಗೆ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಹೇಳಿ ಹಾರೈಸಿದರು.
ಅವರ ಬದುಕಿನ ಕ್ಯಾನ್‌ವಾಸ್ ವಿಶಾಲವಾಗಿ ಹಬ್ಬಿದೆ-ಚಂದ್ರಶೇಖರ ದಾಮ್ಲೆ
ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಗಳ ಚಂದ್ರಶೇಖರ ದಾಮ್ಲೆ ಮಾತನಾಡಿ ಎಸ್.ಕೆ.ಆನಂದ್‌ರವರು ಸ್ನೇಹಮಯಿಯಾಗಿದ್ದವರು. ಅವರ ಬದುಕಿನ ಕ್ಯಾನ್‌ವಾಸ್ ವಿಶಾಲವಾಗಿ ಹಬ್ಬಿದೆ. ಬದಲಾವಣೆ ನಿಸರ್ಗದ ನಿಯಮ. ಬದಲಾವಣೆಯೇ ಒಂದು ಬೆಳವಣಿಗೆ. ಈ ರೀತಿ ಬೆಳವಣಿಗೆಯಾಗಿ ಸಮಾಜದ ಚಾಲಕ ಶಕ್ತಿಯಾಗಿ ಬೆಳಗಿದವರು. ಮೂಲಾಧಾರದ ಶಕ್ತಿಯಾಗಿ ಬೆಳಗಿದವರು ಎಸ್.ಕೆ.ಆನಂದ್ ಎಂದರು. ಕಾಂಕ್‌ವುಡ್ ಉತ್ಪನ್ನಗಳು ಮಾಸ್ಟರಿ ಪ್ಲಾನರಿಯ ಪ್ರಸಿದ್ಧ ಉತ್ಪನ್ನಗಳು. ಅವರು ಕಾರ್ಮಿಕರ ರಕ್ಷಣೆ, ಶಿಕ್ಷಣಕ್ಕೆ ಉದಾರವಾಗಿ ಸ್ಪಂದಿಸುತ್ತಿದ್ದರು ಎಂದರು.
ಕೃತಿ ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ-ಕರುಣಾಕರ್
ಕೃತಿ ಸಂಪಾದಕ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕರುಣಾಕರ್ ಮಾತನಾಡಿ ನನ್ನ ಮತ್ತು ಎಸ್.ಕೆ.ಆನಂದ್‌ರವರ ಬಿಡಿಸಲಾಗದ ಅತ್ಮೀಯತೆ ಕೃತಿ ಬರೆಯಲು ಪ್ರೇರೆಪಣೆ ಕೊಟ್ಟಿದೆ. ಕೃತಿ ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವಾಗಿದೆ. ನನ್ನನ್ನು ಆತ್ಮೀಯತೆಯಿಂದ ಕಂಡಿದ್ದಾರೆ. ನನ್ನ ಜೀವನದ ವಿಶೇಷ ಸಂದರ್ಭ ಇದಾಗಿದೆ. ಕೃತಿಯಲ್ಲಿ ಏನಾದರೂ ಕೊರತೆ ಬಂದಿದ್ದಲ್ಲಿ ನನ್ನನ್ನು ಕ್ಷಮಿಸಿ ಎಂದು ಹೇಳಿದರು.
ಮೆಲುನುಡಿಯ ಶ್ರೇಷ್ಠವ್ಯಕ್ತಿ ಎಸ್.ಕೆ.ಆನಂದ್-ಎಸ್.ಎಮ್.ಮಹಾಬಲೇಶ್ವರ ಭಟ್
ಕೃತಿ ಬಡುಗಡೆ ಮಾಡಿದ ಕರ್ನಾಟಕ ಬ್ಯಾಂಕ್ ನಿವೃತ್ತ ಆಡಳಿತ ನಿರ್ದೇಶಕ ಎಸ್.ಎಮ್.ಮಹಾಬಲೇಶ್ವರ ಭಟ್ ಮಾತನಾಡಿ ನನಗೆ ಪುಸ್ತ ಓದುವ ಚಟ ಇದೆ. ಆದರೆ ಹಠ ಇಲ್ಲ. ಪುಸ್ತಕ ಬಹಳ ಸೊಗಸಾಗಿ ಬಂದಿದೆ. ಸಾಧಾರಣ ವ್ಯಕ್ತಿ ಅಸಾಧಾರಣ ಸಾಧನೆ ಮಾಡಿದಾಗ ಅಂತಹವರ ಪುಸ್ತಕ ಬರೆಯುವುದು ಉತ್ಪ್ರೇಕ್ಷೆಯಲ್ಲ. ಈ ಪುಸ್ತಕದಲ್ಲಿ ಎಸ್.ಕೆ.ಆನಂದ್‌ರವರ ಬಹುಮುಖ ವ್ಯಕ್ತಿತ್ವದ ಪರಿಚಯ ಆಗಿದೆ. ಇವರು ಆದರ್ಶ ಉದ್ಯಮಿ, ಆದರ್ಶ ಪತಿ, ಆದರ್ಶ ತಂದೆ, ಆದರ್ಶ ಮಾಲಕರಾಗಿ ಮೆರೆದವರು. ಅವರು ನಡೆದಾಡುವ ವಿಶ್ವಕೋಶ. ಸಮಾಜಕ್ಕೆ ಕೆಲಸ ಮಾಡಿ ಆನಂದ್‌ರವರು ಸಮಾಜಕ್ಕೆ ರತ್ನಪ್ರಾಯವಾದವರು. ಮೆಲುನುಡಿಯ ಇಂತಹ ಶ್ರೇಷ್ಠವ್ಯಕ್ತಿಯನ್ನು ಅಭಿನಂದಿಸಿ ಗ್ರಂಥ ಸಮರ್ಪಿಸಿ ನಾವು ಕೃತಾರ್ಥರಾಗಿದ್ದೇವೆ ಎಂದರು.
ಉದ್ಯಮದಲ್ಲಿ ಅವರು ಸಹಕಾರ ತತ್ವ ಅಳವಡಿಸಿಕೊಂಡಿದ್ದಾರೆ-ಡಾ.ಯು.ಪಿ.ಶಿವಾನಂದ
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ ಒಳ್ಳೆಯ ಕೆಲಸಗಳನ್ನು ಮಾಡಿದವರ ಬಗ್ಗೆ ದಾಖಲೆಗಳು ಆಗಬೇಕು. ಇದಕ್ಕೆ ಪೂರಕವಾಗಿ ಎಸ್.ಕೆ.ಆನಂದ್‌ರವರ ಜೀವನದ ಬಗ್ಗೆ ದಾಖಲೀಕರಣ ಆಗಿ ಕೃತಿ ಬಿಡುಗಡೆ ಆಗಿದೆ ಎಂದರು. ಉದ್ಯಮದಲ್ಲಿ ಅವರು ಸಹಕಾರ ತತ್ವ ಅಳವಡಿಸಿಕೊಂಡಿದ್ದಾರೆ. ಅವರಿಗೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಸಿಗಬೇಕಿತ್ತು ಅವರು ಸಂಪಾದನೆಯನ್ನು ಅನುಭವಿಸುತ್ತಾರೆ. ಎಲ್ಲ ಫಲಾನುಭವಿಗಳಿಗೆ ಆದರ್ಶಪ್ರಾಯರು. ಪ್ರಾಮಾಣಿಕವಾಗಿ ತನ್ನ ವ್ಯವಹಾರವನ್ನು ನಿರ್ವಹಿಸಿದವರು ಎಂದರು. ಪತ್ರಿಕೆಯಲ್ಲಿ ನನ್ನ ಲೇಖನಗಳ ಬಗ್ಗೆ ನಾನು ಎಸ್.ಕೆ.ಆನಂದ್‌ರವರೊಂದಿಗೆ ವಿಮರ್ಶೆ, ಚರ್ಚೆ ಮಾಡುತ್ತೇನೆ. ನನ್ನ ಬಂದ್ ವಿರುದ್ಧದ ಆಂದೋಲನ ಸಂದರ್ಭದಲ್ಲಿ ಆಂದೋಲನಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ಮಾಸ್ಟರ್ ಪ್ಲಾನರಿಯ ಅಕ್ಷಯ್, ಆಕಾಶ್, ಅರ್ಜುನ್ ಮತ್ತು ಆರತಿಯವರು ಶಾಸಕ ಅಶೋಕ್ ಕುಮಾರ್ ರೈರವರನ್ನು ಸನ್ಮಾನಿಸಿದರು. ಕೃತಿ ಬಿಡುಗಡೆಗೆ ಕಾರಣರಾದ ನಿವೃತ್ತ ಶಿಕ್ಷಕ ನಾರಾಯಣ ಭಟ್, ಚಂದ್ರಶೇಖರ ದಾಮ್ಲೆ, ಕೃತಿ ಸಂಪಾದಕ, ಪ್ರಾಧ್ಯಾಪಕ ಕರುಣಾಕರ್, ಮಹಾಬಲೇಶ್ವರ ಭಟ್ ಹಾಗೂ ರಘುನಾಥ್ ರಾವ್‌ರವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕ ನಾರಾಯಣ ಭಟ್ ಮತ್ತು ಚಂದ್ರಶೇಖರ ದಾಮ್ಲೆಯವರು ಎಸ್.ಕೆ.ಆನಂದ್ ದಂಪತಿಯನ್ನು ಸನ್ಮಾನಿಸಿದರು. ಎಸ್.ಕೆ.ಆನಂದ್‌ರವರ ಪತ್ನಿ ರೇಖಾ ಆನಂದ್, ರಾಜೇಶ್ ಪವರ್ ಪ್ರಸ್‌ನ ಮಾಲಕ ರಘುನಾಥ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್ಟರ್ ಪ್ಲಾನರಿಯ ಅಕ್ಷಯ್, ಆಕಾಶ್, ಅರ್ಜುನ್‌ರವರು ಅತಿಥಿಗಳನ್ನು ಗೌರವಿಸಿದರು. ನಿವೃತ್ತ ಶಿಕ್ಷಕ ನಾರಾಯಣ ಭಟ್ ರಾಮಕುಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯ ಜಗದೀಶ್, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಸವಣೂರು ಸೀತಾರಾಮ ರೈ, ಅಶ್ವಿನಿ ಎಲ್.ಶೆಟ್ಟಿ, ಕಡಮಜಲು ಸುಭಾಷ್ ರೈ, ಚಂದ್ರಹಾಸ ಶೆಟ್ಟಿ, ಕೊಂಕೋಡಿ ಪದ್ಮನಾಭ ಭಟ್, ಮಿತ್ತೂರು ಶ್ಯಾಮ ಭಟ್, ಅಶೋಕ್ ಪಡಿವಾಳ್, ಮಹಮ್ಮದ್ ಬಡಗನ್ನೂರು, ನಿವೃತ್ತ ಅಧಿಕಾರಿ ರಾಮಕುಮಾರ್, ಇಂಜಿನಿಯರ್ ಪ್ರಸನ್ನಭಟ್, ಶ್ರೀಕಾಂತ್ ಶೆಣೈ, ವಿಶ್ವಾಸ್ ಶೆಣೈ, ಸ್ಟ್ರಕ್ಚರಲ್ ಇಂಜಿನಿಯರ್ ಬಾಬು ನಾರಾಯಣ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಲಕ್ಷ್ಮೀಶ ಯೆಡಿಯಾಲ್, ಬಾಬು ನಾರಾಯಣ, ರಾಮಕೃಷ್ಣ ಆಚಾರ್ಯ, ಗೌರಿ ಪೈ, ವಾಮನ ಪೈ, ಡಾ.ಜೋಶಿ, ಹಾರೆಕೆರೆ ವೆಂಕಟರಮಣ ಭಟ್, ವಸಂತ್ ಭಟ್, ಕರ್ನಲ್ ರಮಾಕಾಂತ್, ಕಿರಣ್ ಪಾದೆ, ಶ್ಯಾಮ ಭಟ್ ವಿಟ್ಲ, ರವಿಶಂಕರ್, ಕಲ್ಲೇರಿ ಕೃಷ್ಣಮೂರ್ತಿ, ಡಾ.ಮನೋಹರ ಉಪಾಧ್ಯಾಯ, ಅನ್ನಪೂರ್ಣ ಮಹಾಬಲೇಶ್ವರ, ಕೊಡಿಪ್ಪಾಡಿ ಶ್ರೀವತ್ಸ ಜೋಯಿಷ, ನಾಗೇಶ್ ಕುಂದಲ್ಪಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಾಸ್ಟರ್ ಪ್ಲಾನರಿಯ ಎಚ್.ಆರ್. ಕಿಶೋರ್ ಕುಮಾರ್, ಸಿಬಂದಿಗಳಾದ ಎಂ.ಎನ್.ಪ್ರಭಾಕರ್, ಚಂದ್ರಶೇಖರ ಭಟ್, ಮುಕ್ತ ನಾಯಕ್, ಮಂಗಲ್ ಸ್ಟೋರ‍್ಸ್‌ನ ರಾಘವೇಂದ್ರ, ಸುದರ್ಶನ್ ನಾಯಕ್, ನವೀನ್ ನಾಯಕ್ ಸಹಕರಿಸಿದರು. ಕಾರ್ಯಕ್ರಮ ಬಳಿಕ ಸಹಭೋಜನ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಸ್.ಕೆ.ಆನಂದ್‌ರವರ ಜೀವನಗಾಥೆ “ನಂದಾದೀಪ” ಕೃತಿ ಬಿಡುಗಡೆ
ಎಸ್.ಕೆ.ಆನಂದ್‌ರವರ ಜೀವನಗಾಥೆಯನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕೆನ್ನುವ ಉದ್ದೇಶದಿಂದ, ಅವರ ಆದರ್ಶ ಜೀವನದಿಂದ ಪ್ರೇರಪಣೆಗೊಳ್ಳಲು ರಚಿಸಲಾದ ನಂದಾದೀಪ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಪ್ರಾಧ್ಯಾಪಕ ಕರುಣಾಕರ್ ಸಂಪಾದಕತ್ವದಲ್ಲಿ, ನಿವೃತ್ತ ಶಿಕ್ಷಕ ನಾರಾಯಣ ಭಟ್ ರಾಮಕುಂಜ, ಸ್ನೇಹ ಶಿಕ್ಷಣ ಸಂಸ್ಥೆಗಳ ಚಂದ್ರಶೇಖರ ದಾಮ್ಲೆ, ರಾಜೇಶ್ ಪವರ್‌ಪ್ರೆಸ್‌ನ ರಘುನಾಥ ರಾವ್‌ರವರ ಸಹಕಾರದಲ್ಲಿ ಮೂಡಿದ ಕೃತಿಯನ್ನು ಕರ್ನಾಟಕ ಬ್ಯಾಂಕ್ ನಿವೃತ್ತ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಬಿಡುಗಡೆಗೊಳಿಸಿದರು.
ಅವಕಾಶಗಳನ್ನು ಉಪಯೋಗಿಸಿ ಜೀವನದಲ್ಲಿ ಗೆಲ್ಲಬೇಕು-ಎಸ್.ಕೆ.ಆನಂದ್
ಎಸ್.ಕೆ.ಆನಂದ್‌ರವರು ಮಾತನಾಡಿ ಭಾವನೆಗಳು ಹೆಚ್ಚಾದಾಗ ಶಬ್ದಗಳು ಕಡಿಮೆಯಾಗುತ್ತದೆ. ಪೈಪೋಟಿಯಲ್ಲಿ ಗೆದ್ದವನಿಗೆ ಜಂಭ ಬರುತ್ತದೆ. ಪೈಪೋಟಿ ಬೇಡ ಸಹಕಾರ ಬೇಕು. ಪರಸ್ಪರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯ. ನನ್ನ ಯಶಸ್ಸಿಗೆ ನನ್ನ ಹೆಂಡತಿ ಕಾರಣ. ಒಬ್ಬರಿಗೊಬ್ಬರು ಪೂರಕರಾಗಿದ್ದೇವೆ. ನನ್ನ ನಾಲ್ಕು ಮಕ್ಕಳು ಹೇಳಿ ಕಲಿತಕ್ಕಿಂತ ನೋಡಿ ಕಲಿತವರು. ಆದ ಕಾರಣ ನಾಲ್ವರು ಸಿವಿಲ್ ಇಂಜಿನಿಯರಿಂಗ್ ಓದಲು ಸಹಕಾರಿಯಾಯಿತು. ಇಂದು ಅವಕಾಶಗಳು ತುಂಬಾ ಇದೆ. ಅವಕಾಶಗಳನ್ನು ಉಪಯೋಗಿಸಿ ಜೀವನದಲ್ಲಿ ಗೆಲ್ಲಬೇಕು ಎಂದು ಎಸ್.ಕೆ.ಆನಂದ್ ಹೇಳಿದರು.
ಎಸ್.ಕೆ.ಆನಂದ್ ದಂಪತಿಗೆ ಸನ್ಮಾನ ಕೃತಿ ಸಮರ್ಪಣೆ
ಎಸ್.ಕೆ.ಆನಂದ್ ದಂಪತಿಯನ್ನು ಸನ್ಮಾನಿಸಿ ಅವರ ಕೃತಿಯನ್ನು ಸಮರ್ಪಿಸಲಾಯಿತು. ಹಾರ, ಶಾಲು, ಪೇಟ, ಫಲಪುಷ್ಪ ಹಾಗೂ ನಂದಾದೀಪ ಕೃತಿಯನ್ನು ನೀಡಿ ಎಲ್ಲರ ಪರವಾಗಿ ಎಸ್.ಕೆ.ಆನಂದ್ ಮತ್ತು ರೇಖಾ ಆನಂದ್ ದಂಪತಿಯನ್ನು ಸನ್ಮಾನಿಸಲಾಯಿತು.