ಜಿ.ಎಸ್.ಟಿ ನೋಂದಾಯಿತರಿಗೆ ಸೌಲಭ್ಯ ಒದಗಿಸಲು ಪ್ರಯತ್ನ-ಜ.13ಕ್ಕೆ ಉಪ್ಪಿನಂಗಡಿಯಲ್ಲಿ ನೋಂದಾವಣೆ ಅಭಿಯಾನ
ಪುತ್ತೂರು: ರಾಜ್ಯ ಸರಕಾರ ಚುನಾವಣೆಯಲ್ಲಿ ಮಾಡಿದ ಪಂಚ ಗ್ಯಾರಂಟಿ ಯೋಜನೆ ಘೋಷಣೆಯನ್ನು ಈಡೇರಿಸಿದ್ದು, ಒಟ್ಟು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.20ರ ತನಕದ ಮಾಹಿತಿಯಂತೆ ಗ್ಯಾರಂಟಿ ಯೋಜನೆಯಲ್ಲಿ ಸುಮಾರು261,32,02,668 ಹಣ ಫಲಾನುಭವಿಗಳಿಗೆ ತಲುಪಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಂಚ ಗ್ಯಾರಂಟಿಯಲ್ಲಿ ನೂರಕ್ಕೆ ಶೇ.98 ಫಲಾನುಭವಿಗಳಿಗೆ ಮುಟ್ಟಿದೆ ಎಂದ ಅವರು ಚುನಾವಣೆಯಲ್ಲಿ ಮಾಡಿದ ಘೋಷಣೆಗೆ ರಾಜ್ಯದ ಜನತೆ ಸ್ಪಂದಿಸಿ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ನಡೆಸಲು ಅಧಿಕಾರ ನೀಡಿದರು. ಬಳಿಕ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರೆಂಟಿ ಯೋಜನೆಯನ್ನು ಈಡೇರಿಸಿದ್ದಾರೆ ಎಂದರು. ಅದರಲ್ಲಿ ಪ್ರಥಮವಾಗಿ ಅನ್ನಭಾಗ್ಯ. ಯೋಜನೆ ಜಾರಿಗೊಳಿಸಲಾಯಿತು. ಅದರಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಒಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಕೊಡುವ ಮಹತ್ವಾಕಾಂಕ್ಷೆ ಯೋಜನೆ ಇತ್ತು. ಸರಕಾರ ಬರುವಾಗ ಅಕ್ಕಿ ದಸ್ತಾನು ಕೊರತೆಯಿಂದಾಗಿ 5 ಕೆ.ಜಿ ಅಕ್ಕಿ ನೀಡಿ. ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ಪ್ರತಿಯೊಬ್ಬ ಸದಸ್ಯರ ಖಾತೆಗೆ ಹಾಕಲಾಯಿತು. 2023ರ ಆ.1 ಕ್ಕೆ ಅನ್ನಭಾಗ್ಯ ಆರಂಭಿಸಲಾಯಿತು.
ಅನ್ನಭಾಗ್ಯದಲ್ಲಿ ಪುತ್ತೂರು ತಾಲೂಕಿಗೆ ಸಂಬಂಧಿಸಿ 25,424 ಪಡೀತರದಾರರಿಗೆ ಇಲ್ಲಿನ ತನಕ ರೂ. 22,70,38,570 ನೀಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲದ 12 ಗ್ರಾಮ ಸೇರುವುದರಿಂದ ಅಲ್ಲಿ 8,966 ಪಡಿತರದಾರರಿಗೆ ರೂ.6,50,00,000 ಹಣವನ್ನು ಖಾತೆಗೆ ಜಮೆ ಮಾಡಲಾಗಿದೆ. 2023ರ ಜೂ.2ಕ್ಕೆ ಯುವ ನಿಧಿ ಆರಂಭಿಸಿದ್ದೆವು. ಅಲ್ಲಿಯೂ ಕೂಡಾ ಪುತ್ತೂರು ತಾಲೂಕಿಗೆ ಸಂಬಂಧಿಸಿ 392 ಮಂದಿಗೆ ರೂ. 48,81,000 ಹಣ ಪಾವತಿ ಮಾಡಲಾಗಿದೆ. 3ನೇ ಕಾರ್ಯಕ್ರಮವಾಗಿ 2025ರ ಆ.1ಕ್ಕೆ ಗೃಹಜ್ಯೋತಿ ಯೋಜನೆ ಆರಂಭಿಸಿದ್ದೆವು. ಇದು ರಾಜ್ಯದ ಎಲ್ಲಾ ಜನರಿಗೂ ಪ್ರಯೋಜವಾಗುವಂತಹ ಯೋಜನೆಯಾಗಿದ್ದು, ಅಲ್ಲಿಯೂ ಕೂಡಾ ಪುತ್ತೂರು ತಾಲೂಕಿಗೆ ಸಂಬಂಧಿಸಿ 42,198ವಿದ್ಯುತ್ ಬಳಕೆದಾರರಿಗೆ ರೂ 51,35, 47,000 ಹಣ ಪಾವತಿ ಮಾಡಲಾಗಿದೆ ವಿಟ್ಲಕ್ಕೆ ಸಂಬಂಧಿಸಿ 12,852 ವಿದ್ಯುತ್ ಬಳಕೆದಾರರಿಗೆ ರೂ. 12,64,08,547 ಹಣ ವಿದ್ಯುತ್ ಇಲಾಖೆಗೆ ಪಾವತಿ ಮಾಡಲಾಗಿದೆ. ಇನ್ನೊಂದು ಗೃಹಲಕ್ಷ್ಮೀ ಯೋಜನೆ 2023ರ ಆ.15ಕ್ಕೆ ಆರಂಭಗೊಂಡಿದ್ದು, ಇದರಲ್ಲಿ ಪುತ್ತೂರು ತಾಲೂಕಿಗೆ ಸಂಬಂಧಿಸಿ ರೂ. 38,082 ಫಲಾನುಭವಿಗಳಿಗೆ ರೂ. 98,98,34,000 ಹಣ ಅವರ ಖಾತೆಗೆ ಜಮೆ ಮಾಡಿದ್ದೇವೆ. ವಿಟ್ಲ ಭಾಗದಲ್ಲಿ 10,231ಫಲಾನುಭವಿಗಳಿಗೆ ರೂ.30,69,30,000 ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಶಕ್ತಿ ಯೋಜನೆಯಲ್ಲಿ ಪುತ್ತೂರು ತಾಲೂಕಿಗೆ ಸಂಬಂಧಿಸಿ ಕಳೆದ ಒಂದು ವರ್ಷದಲ್ಲಿ 1,68,33,303 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದು, ಅವರು ರೂ. 37,95,63,551 ಮೌಲ್ಯದ ಉಚಿತ ಪ್ರಯಾಣ ಮಾಡಿದ್ದಾರೆ. ಈ ಐದು ಗ್ಯಾರೆಂಟಿ ಯೋಜನೆಯಲ್ಲಿ ಒಟ್ಟು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.30ರ ತನಕದ ಮಾಹಿತಿಯಂತೆ ಸುಮಾರು 261,32,02,668 ಹಣ ಫಲಾನುಭವಿಗಳಿಗೆ ತಲುಪಿದೆ ಎಂದರು.
ಚರ್ಚೆಗೆ ಉತ್ತರ ನೀಡಿದ ಸರಕಾರ:
ಇವತ್ತು ಸರಕಾರದ ಯೋಜನೆ ಕುರಿತು ಇದು ಆಗ್ಲಿಕ್ಕಿದೆಯಾ, ಹೋಗ್ಲಿಕ್ಕಿದೆಯಾ, ಪ್ರಯೋಜನ ಉಂಟಾ, ಅವರಿಗೆ/ ಇವರಿಗೆ ಕೊಡಬಾರದಿತ್ತು ಎಂಬ ಚರ್ಚೆಯು ನಡೆಯುತ್ತಿದೆ. ಪ್ರತಿಯೊಬ್ಬ ಜನತೆ ತೆರಿಗೆ ಹಣವನ್ನು ಲಿಮಿಟ್ ಮಾಡುವುದಕ್ಕಿಂತ ಯಾರಿಗೆ ಅಗತ್ಯವಿದೆ ಅವರಿಗೆ ನೀಡುವ ಮೂಲಕ ಚರ್ಚೆಗಳಿಗೆ ಸರಕಾರ ಕಾರ್ಯ ರೂಪದಲ್ಲಿ ಉತ್ತರ ನೀಡಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇಲ್ಲಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಗ್ಯಾರೆಂಟಿ ಜಿಲ್ಲಾ ಸಮಿತಿ ಸದಸ್ಯ ಪೂರ್ಣೇಶ್ ಭಂಡಾರಿ, ತಾಲೂಕು ಸದಸ್ಯ ಅಬ್ಬೂ ವಿಟ್ಲ, ವಿಜಯಲಕ್ಷ್ಮೀ, ವಿಶ್ವಜೀತ್ ಪುತ್ತೂರು ಉಪಸ್ಥಿತರಿದ್ದರು.
ಜಿ.ಎಸ್.ಟಿ ನೋಂದಾಯಿತರಿಗೆ ಸೌಲಭ್ಯ ಒದಗಿಸಲು ಪ್ರಯತ್ನ :
570 ಮಂದಿ ಜಿಎಸ್ಟಿ, ಐಟಿ ನೋಂದಾವಣೆ ಹೊಂದಿದ್ದವರಿದ್ದಾರೆ. ಐಟಿ ಇಲಾಖೆ ಸಂಬಂಧಿಸಿ ಸರಿ ಮಾಡಲು ಕಷ್ಟ. ಆದರೆ ಜಿ.ಎಸ್.ಟಿಯನ್ನು ಸರಿ ಮಾಡಲು ಪ್ರಯತ್ನ ಮಾಡುತ್ತೇವೆ. ಸುಮಾರು ೮೯ ಮಂದಿ ಜಿಎಸ್ಟಿಯನ್ನು ಸರಿ ಮಾಡಲು ಸರಕಾರಕ್ಕೆ ಕಳುಹಿಸಿಕೊಡುತ್ತಿದ್ದೇವೆ ಎಂದು ಉಮಾನಾಥ ಶೆಟ್ಟಿ ಹೇಳಿದರು.
ಜ.13ಕ್ಕೆ ಉಪ್ಪಿನಂಗಡಿಯಲ್ಲಿ ನೋಂದಾವಣೆ ಅಭಿಯಾನ
ಗ್ಯಾರೆಂಟಿ ಯೋಜನೆಯಲ್ಲಿ ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ ಸರಿಪಡಿಸಲು ಮತ್ತು ಬಾಕಿ ಉಳಿದವರ ಅರ್ಜಿಗಳನ್ನು ನೋಂದಾವಣೆ ಮಾಡಲು ಒಟ್ಟು 5 ನೋಂದಾವಣೆ ಅಭಿಯನದ ಶಿಬಿರಗಳು ನಡೆಯಲಿದೆ. ಜ.13ಕ್ಕೆ ಉಪ್ಪಿನಂಗಡಿಯಲ್ಲಿ ಶಿಬಿರ ನಡೆಯಲಿದ್ದು, ತಿರಸ್ಕೃತ ಅರ್ಜಿಗಳನ್ನು ಶಿಬಿರದಲ್ಲಿ ತಂದು ಕೊಟ್ಟರೆ ಅಲ್ಲಿ ಸರಿಪಡಿಸಬಹುದು ಎಂದು ಉಮಾನಾಥ ಶೆಟ್ಟಿ ಹೇಳಿದರು.