ಪುತ್ತೂರು: ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಹಿರಿಯ ನ್ಯಾಯವಾದಿ ಡಾ|ಅರುಣ್ ಶ್ಯಾಮ್ರವರಿಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸ್ಪೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅತೀ ಕಿರಿಯ ವಯಸ್ಸಿನ ಹಿರಿಯ ನ್ಯಾಯವಾದಿ ಎಂಬ ಹೆಗ್ಗಳಿಕಗೆ ಪಾತ್ರರಾಗಿರುವ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಖಿಲ ಹವ್ಯಕ ಮಹಾಸಭಾ ವತಿಯಿಂದ ಡಿ.27ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮ್ಮೇಳನದಲ್ಲಿ 81 ಸಾಧಕರನ್ನು ಗುರುತಿಸಿ ಹವ್ಯಕ ಸ್ಪೂರ್ತಿ ಪ್ರಶಸ್ತಿ ನೀಡಲಾಯಿತು.
ಡಾ|ಅರುಣ್ ಶ್ಯಾಮ್
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪಂಜಿಗದ್ದೆ ಕುಸುಮಾ ಭಟ್ ಮತ್ತು ಈಶ್ವರ್ ಭಟ್ ದಂಪತಿ ಪುತ್ರರಾದ ಅರುಣ ಶ್ಯಾಮ್ರವರು ತಮ್ಮ ಕಾನೂನು ಪದವಿಯನ್ನು 2004ರಲ್ಲಿ ಪೂರ್ಣಗೊಳಿಸಿ ಶಿವಮೊಗ್ಗದ ನ್ಯಾಯವಾದಿ ಎಮ್. ಆರ್. ಸತ್ಯನಾರಾಯಣ ನಂತರ ಹಿರಿಯ ನ್ಯಾಯವಾದಿ ಈಶ್ವರಮಂಗಲ ನಿವಾಸಿ ಕೆ. ಎಮ್. ನಟರಾಜರವರ ಮಾರ್ಗದರ್ಶನದಲ್ಲಿ ವೃತ್ತಿ ಪ್ರಾರಂಭಿಸಿದರು. ವೃತ್ತಿಯ ಜೊತೆ ಕಾನೂನು ಶಿಕ್ಷಣದ ಸ್ನಾತಕೋತ್ತರ ಪದವಿ ಜೊತೆಗೆ ಕಾನೂನು ವಿಷಯಕ್ಕೆ ಸಂಬಂಧಿಸಿ PHD ಪದವಿ ಪೂರ್ಣಗೊಳಿಸಿರುತ್ತಾರೆ. ಪ್ರಸ್ತುತ ಅರುಣ ಶ್ಯಾಮ ಅಸೋಸಿಯೇಟ್ಸ್ ಎಂಬ ವಕೀಲರ ಸಂಸ್ಥೆಯ ಪ್ರವರ್ತಕರಾಗಿದ್ದು ಭಾರತದ ಸರ್ವೋಚ್ಚನ್ಯಾಯಾಲಯ ಹಾಗೂ ಕರ್ನಾಟಕದ ಉಚ್ಚನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ನಡೆಸಿ ಅನುಭವ ಮತ್ತು ಪ್ರಸಿದ್ಧಿ ಪಡೆದಿರುವ ಇವರು ನ್ಯಾಷನಲ್ ಲಾ ಸ್ಕೂಲ್ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದಾರೆ.
2021ರಲ್ಲಿ ಗೌರವಾನ್ವಿತ ಉಚ್ಚನ್ಯಾಯಾಲಯವು ಇವರನ್ನು ಹಿರಿಯನ್ಯಾಯವಾದಿ ಎಂದು ಪರಿಗಣಿಸಿದೆ. “ಅತೀ ಕಿರಿಯ ವಯಸ್ಸಿಗೆ ಹಿರಿಯ ನ್ಯಾಯವಾದಿ” ಆಗಿರುವ ಇವರ ಸಾಧನೆ ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ಪೂರ್ತಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇವರು ಪತ್ನಿ ಸುಷ್ಮಾ ಅರುಣ್ ಶ್ಯಾಮ್, ಮಕ್ಕಳಾದ ಆದ್ಯಶ್ರೀ, ಅಮೃತಶ್ರೀ ಹಾಗೂ ಅದ್ವಿತಾಶ್ರೀ ಯವರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ.