ಎಸಿ ಜುಬಿನ್ ಮೊಹಾಪಾತ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ಯತೀಶ್, ಜಿಪಂ ಸಿಇಒ ಡಾ|ಆನಂದ್‌ಗೆ ಭಡ್ತಿ

0

ಪುತ್ತೂರು: ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಸೇರಿದಂತೆ 65 ಐಎಎಸ್ ಅಧಿಕಾರಿಗಳು ಮತ್ತು ದ.ಕ.ಪೊಲೀಸ್ ಅಧಿಕ್ಷಕ ಯತೀಶ್ ಎನ್ ಸಹಿತ 65 ಐಪಿಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶಿಸಿದೆ.ಹೊಸ ವರ್ಷದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 65 ಐಎಎಸ್, 65 ಐಪಿಎಸ್ ಮತ್ತು 23 ಐಎಫ್ಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ಆದೇಶಿಸಿದೆ.


ಐಎಎಸ್ ಅಧಿಕಾರಿಗಳು:
ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಆನಂದ್ ಸೇರಿದಂತೆ 65 ಐಎಎಸ್ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ.ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಅಮಿತ್ ಸಿಂಗ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ಅವರು ಸೇರಿದಂತೆ 65 ಐಪಿಎಸ್ ಅಧಿಕಾರಿಗಳಿಗೂ ಭಡ್ತಿ ನೀಡಲಾಗಿದೆ.ಭಡ್ತಿ ಹೊಂದಿರುವ ಅಧಿಕಾರಿಗಳು ಸದ್ಯ ಇರುವ ಹುದ್ದೆಯಲ್ಲಿಯೇ ಮುಂದುವರಿಯಲಿದ್ದು ಅದಾದ ಬಳಿಕ ಬೇರೆ ಕಡೆಗಳಿಗೆ ನಿಯುಕ್ತಿ ಹೊಂದಲಿದ್ದಾರೆ ಎಂದು ತಿಳಿದು ಬಂದಿದೆ.


ದ.ಕ.ಜಿ.ಪಂ. ಸಿಇಒ ಡಾ|ಆನಂದ್ ಅವರು ಕಳೆದ ಎರಡು ವರ್ಷಗಳಿಂದ ದ.ಕ.ಜಿಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಅವರು ಕಳೆದ ಒಂದು ವರ್ಷದಿಂದ ಪುತ್ತೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಐಪಿಎಸ್ ಅಧಿಕಾರಿಗಳ ಪೈಕಿ ದ.ಕ.ಜಿಲ್ಲಾ ಪೊಲೀಸ್ ಅಧಿಕ್ಷಕ ಯತೀಶ್ ಎನ್.ಅವರು ಕಳೆದ ಒಂದು ವರ್ಷದಿಂದ ಮತ್ತು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರೂ ಕಳೆದ ಒಂದು ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಜುಬಿನ್ ಮೊಹಾಪಾತ್ರ:
2021ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜುಬಿನ್ ಮೊಹಾಪಾತ್ರ ಅವರು 2023ರ ದಶಂಬರ್ 27ರಂದು ಪುತ್ತೂರು ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಒಡಿಸ್ಸಾ ರಾಜ್ಯದ ಭುಭನೇಶ್ವರ್ ಮೂಲದವರಾಗಿರುವ ಇವರು ಆರಂಭದಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು.ಐಎಎಸ್ ಮಾಡುವ ಮೊದಲು 2019ರಲ್ಲಿ ಐಪಿಎಸ್ ಪೂರ್ಣಗೊಳಿಸಿ 26 ತಿಂಗಳುಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.ಅದಾದ ಬಳಿಕ 46ನೇ ರ‍್ಯಾಂಕ್‌ನೊಂದಿಗೆ ಐಎಎಸ್ ಪೂರ್ಣಗೊಳಿಸಿ ಕಾರವಾರದಲ್ಲಿ ಪ್ರೊಬೇಷನರಿ ಅವಧಿ ಮುಗಿಸಿ ಪ್ರಥಮ ನೇಮಕಾತಿಯಾಗಿ ಪುತ್ತೂರು ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಇದೀಗ ಅವರು ಭಡ್ತಿ ಹೊಂದಿ ಹಿರಿಯ ಸಹಾಯಕ ಆಯುಕ್ತರಾಗಿ ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ.


ಎಸ್ಪಿ ಯತೀಶ್ ಎನ್:
ಮಂಡ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಎನ್.ಅವರನ್ನು ಕಳೆದ ಜುಲೈ 3ರಂದು ರಾಜ್ಯ ಸರಕಾರ ದ.ಕ.ಜಿಲ್ಲಾ ಪೊಲೀಸ್ ಅಧಿಕ್ಷಕರಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಿತ್ತು.ಇವರು 2016ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ.


ಜಿಪಂ ಸಿಇಒ ಡಾ|ಆನಂದ್:
ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ.ಕುಮಾರ್ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಬಳಿಕ ಸರಕಾರ ಡಾ|ಆನಂದ್ ಅವರನ್ನು ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿ 2023ರ ಜೂನ್ 29ರಂದು ಆದೇಶ ಹೊರಡಿಸಿತ್ತು.

ಐಜಿಪಿ ಅಮಿತ್ ಸಿಂಗ್:
ಈ ಹಿಂದೆ ಎನ್‌ಐಎಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಸಿಂಗ್ ಅವರು ಕಳೆದೊಂದು ವರ್ಷದಿಂದ ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನಾಲ್ಕು ವರ್ಷಗಳ ಕಾಲ ಕೇಂದ್ರದಿಂದ ನಿಯೋಜನೆ ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯಲ್ಲಿ ಕರ್ತವ್ಯದಲ್ಲಿದ್ದ ಇವರು 2023ರ ದಶಂಬರ್ ಎರಡನೇ ವಾರದಲ್ಲಿ ಮರಳಿ ಕರ್ನಾಟಕದಲ್ಲಿ ಸೇವೆಗೆ ನಿಯೋಜಿತರಾಗಿದ್ದರು.ಡಾ|ಚಂದ್ರಗುಪ್ತ ಅವರ ವರ್ಗಾವಣೆ ಬಳಿಕ ಪಶ್ಚಿಮ ವಲಯ ಐಜಿಪಿಯಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದರು.ಅವರು ಆರಂಭದಲ್ಲಿ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here