ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಾಣಿಜ್ಯ ಸಂಬಂಧಿತ ಕಾನೂನು’ಗಳ ಕುರಿತು ಕಾರ್ಯಾಗಾರ

0

ವಾಣಿಜ್ಯ ಕ್ಷೇತ್ರದಲ್ಲಿ ಕಾನೂನು ಪರಿಣಿತರಿಗೆ ಅವಕಾಶಗಳ ಮಹಾಪೂರವಿದೆ: ಬಲರಾಮ ಆಚಾರ್ಯ

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಾಣಿಜ್ಯ ಸಂಬಂಧಿತ ಕಾನೂನು’ಗಳ ಕುರಿತು ಕಾರ್ಯಾಗಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಕಾನೂನು ಶಿಕ್ಷಣ ಎಂಬುದು ಎಲ್ಲದರ ಮೂಲವಾಗಿದೆ. ಕಾನೂನು ಸರಿಯಾಗಿದ್ದರೇ ಮಾತ್ರ ದೇಶದ ಭವಿಷ್ಯ ಉತ್ತಮ ರೀತಿಯಲ್ಲಿ ರೂಪುಗೊಳ್ಳಲು ಸಾಧ್ಯವಿದೆ. ಇಂದು ಕಾನೂನು ಶಿಕ್ಷಣ ಬಹಳಷ್ಟು ಕವಲುಗಳಾಗಿ ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ. ವಾಣಿಜ್ಯ ಕ್ಷೇತ್ರದಲ್ಲಿಯೂ ಬಹಳಷ್ಟು ಬದಲಾವಣೆಗಳಾಗಿದ್ದು, ಕಾನೂನು ಶಿಕ್ಷಣ ಪಡೆದವರಿಗೆ, ಕಾನೂನು ಪರಿಣಿತರಿಗೆ ಅವಕಾಶಗಳ ಮಹಾಪೂರವಿದೆ ಎಂದರು. ಕಳೆದ ಹಲವು ವರ್ಷಗಳಿಂದ ಮುನ್ನಲೆಗೆ ಬಂದ ವಾಣಿಜ್ಯ ಕ್ಷೇತ್ರವು ಇಂದು ಬಹು ದೊಡ್ಡ ಜನಾಕರ್ಷನಾ ವಿಭಾಗವಾಗಿದೆ. ದೇಶದಲ್ಲಿ ವಾಣಿಜ್ಯ ಸಂಬಂಧಿಸಿದ ಕಾನೂನುಗಳ ಪ್ರಾಮುಖ್ಯತೆಯು ಇಂದು ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಇದರ ಅವಕಾಶವನ್ನು ಕಾನೂನು ಕ್ಷೇತ್ರದ ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕರಾದ ವಿಜಯನಾರಾಯಣ ಕೆ.ಎಂ. ಮಾತನಾಡಿ, ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕಾನೂನು ವಿದ್ಯಾಭ್ಯಾಸವು ವಿದ್ಯಾರ್ಥಿಗಳ ಮುಂದಿರುವ ಅತ್ಯುತ್ತಮ ಆಯ್ಕೆಯಾಗಿದೆ. ವಾಣಿಜ್ಯ ನಿಕಾಯದಲ್ಲಿ ಶಿಕ್ಷಣ ಪಡೆದು ಬರುವ ವಿದ್ಯಾರ್ಥಿಗಳಿಗೆ ಕಾನೂನು ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಜೊತೆಗೆ ಅದನ್ನು ಪಡೆಯಲು ಬೇಕಾದ ಎಲ್ಲಾ ರೀತಿಯ ಮೌಲ್ಯಯುತವಾದ ಕಾನೂನು ಶಿಕ್ಷಣವನ್ನು, ಅದಕ್ಕೆ ಬೇಕಿರುವ ವಿದ್ಯಾರ್ಥಿಸ್ನೇಹಿ ಪರಿಸರವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ನೀಡುತ್ತಿದೆ ಎಂದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಮೂರು ವಿಶೇಷ ವಿಚಾರಗೋಷ್ಠಿಗಳು ನಡೆಯಿತು. ಮೊದಲ ಗೋಷ್ಠಿಯನ್ನು ಉಪ್ಪಿನಂಗಡಿಯ ಲೆಕ್ಕ ಪರಿಶೋಧಕರಾದ ಶ್ರೀಕೃಷ್ಣ ಕಾಂತಿಲ, ‘ವಾಣಿಜ್ಯ ಸಂಬಂಧಿತ ಕಾನೂನು’ಗಳ ಕುರಿತು ವಿಚಾರ ಮಂಡಿಸಿದರು. ನಂತರ ಪುತ್ತೂರಿನ ವಕೀಲರು ಹಾಗೂ ಅತಿಥಿ ಉಪನ್ಯಾಸಕರಾಗಿರುವ ಸುಧೀರ್ ಕುಮಾರ್ ತೋಲ್ಪಾಡಿ ಯವರು ‘ಕಾನೂನು ಕ್ಷೇತ್ರದಲ್ಲಿ ಅವಕಾಶಗಳು’ ಹಾಗೂ ಪುತ್ತೂರಿನ ವಕೀಲರು ಹಾಗೂ ಅತಿಥಿ ಉಪನ್ಯಾಸಕರಾಗಿರುವ ಮನೋಹರ್ ಎ. ರವರು ‘ಕಾನೂನು ಶಿಕ್ಷಣ ಮತ್ತು ಶಿಸ್ತು’ ಎನ್ನುವ ವಿಷಯದ ಕುರಿತು ವಿಚಾರಗೋಷ್ಠಿಗಳನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here