ಕುಂತೂರು: ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ ಹಾಗೂ ಶೈಕ್ಷಣಿಕ ವರ್ಷದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾಲೇಜಿನ ಸ್ಥಾಪನೆಗೆ ಕಾರಣೀಭೂತರಾದ ವಂ|ಫಾ| ಫಿಲಿಪ್ ನೆಲ್ಲಿವಿಳ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿ, ಕ್ರಿಸ್ಮಸ್ ಹಬ್ಬದ ಧ್ಯೇಯ ಸಂದೇಶವನ್ನು ನೀಡಿದರು. ವಂ|ಫಾ| ಫಿಲಿಪ್ ನೆಲ್ಲಿವಿಳ ಅವರು ಧರ್ಮಗುರುಗಳಾಗಿ 25 ವರ್ಷಗಳನ್ನು ಪೂರೈಸಿರುವುದರ ಧ್ಯೋತಕವಾಗಿ ಕೇಕ್ ಕತ್ತರಿಸಿ ಶುಭ ಹಾರೈಸಲಾಯಿತು ಮತ್ತು ಅಭ್ಯಾಗತರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಶೈಕ್ಷಣಿಕ ವರ್ಷದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಂಚಾಲಕರಾದ ವಂ|ಫಾ|ಡಾ| ಎಲ್ಟೋ ಪುತ್ತೆನ್‌ಕಂಡತ್ತಿಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಉಷಾ ಎಂ.ಎಲ್. ಸ್ವಾಗತಿಸಿ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಹರ್ಷಿಣಿ ಬಿ.ಎನ್ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ಹಲೀಮತ್ ಅಜ್ಮೀನಾ ಮತ್ತು ಸರಿತಾ ಮರೀತಾ ಗೋಮ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಪ್ರದರ್ಶನಗೊಂಡವು.