ಪುತ್ತೂರು:ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.ಉದ್ಯಮಿರಿನಿತ್ ರೈ ಕರ್ನೂರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸುಂದರ ಪರಿಸರದಲ್ಲಿರುವ ಈ ಶಾಲೆಯು ಉನ್ನತವಾಗಿ ಪ್ರಗತಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಅಭಿವೃದ್ಧಿ ಹೊಂದುತ್ತಿರುವ ಈ ಶಾಲೆಗೆ ಇನ್ನಷ್ಟು ಮೂಲಸೌಕರ್ಯಗಳ ಅವಶ್ಯಕತೆ ಇದ್ದು ಮುಖ್ಯವಾಗಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಈ ಪ್ರದೇಶಕ್ಕೆ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಈ ಪ್ರದೇಶದ ಅಭಿವೃದ್ಧಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದರು .
ದೀಪ ಪ್ರಜ್ವಲಿಸಿ ಮಾತನಾಡಿದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯಾ ಇಬ್ರಾಹಿಂ ಪಠ್ಯ ಮತ್ತು ಸಹಪಠ್ಯಗಳಿಗೆ ವಿಶೇಷವಾದ ಆಸಕ್ತಿಯನ್ನು ತೋರಿಸುತ್ತಿರುವ ಈ ವಿದ್ಯಾ ಸಂಸ್ಥೆ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ ಮಾತನಾಡಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ಹೊಮ್ಮಲು ಶಾಲೆಯು ಮೂಲ ಕಾರಣವಾಗಿರುತ್ತದೆ. ಇದಕ್ಕೆ ಈ ಶಾಲೆಯು ಪೂರಕ ವಾತಾವರಣವನ್ನು ಕಲ್ಪಿಸಿರುತ್ತದೆ ಎಂದರು.
ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು ಇವರು ಮಾತನಾಡಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಶಾಲಾ ಅಭಿವೃದ್ಧಿ ಸಮಿತಿಗೆ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಉತ್ತಮವಾದ ಶಾಲಾ ಅಭಿವೃದ್ಧಿ ಸಮಿತಿಯು ನನ್ನ ಜೊತೆ ಇರುವುದರಿಂದ ಇನ್ನಷ್ಟು ಅಭಿವೃದ್ಧಿಯನ್ನು ಮಾಡಲು ಬದ್ಧರಿದ್ದೇವೆ ಎಂದರು. ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಪ್ಪ ನಾಯ್ಕ ಮಾತನಾಡಿ ಶಾಲೆಯು ಕ್ರೀಡೆ ಮತ್ತು ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರಿಂದ ಇಲ್ಲಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಎಂದರು.
ವೇದಿಕೆಯಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸದಾಶಿವ ರೈ ನಡುಬೈಲು, ಸೂಪಿ ಬಾಂಟಡ್ಕ, ಮಹಾಬಲ ರೈ ಕರ್ನೂರು, ಮೊಹಮ್ಮದ್ ಪಳ್ಳತ್ತೂರು,ಫೌಝಿಯಾ,ದೇವಕಿ, ನಾರಾಯಣ್ ನಾಯ್ಕ, ಶಶಿಕಲಾ ಮಾಧವ ಅಡ್ಡoತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಥುನ್ ರಾಜ್, ಶಾರದ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಶಾಲಾ ಮುಖ್ಯ ಗುರು ಪ್ರೇಮ್ ಕುಮಾರ್ ಸಮಗ್ರ ವರದಿ ವಾಚಿಸಿದರು.ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕಿಯರಾದ ದಮಯಂತಿ,ಮೋನಿಷಾ, ಮಾಲಿನಿ ಮೀನಾಕ್ಷಿ ವಾಚಿಸಿದರು. ಕಚೇರಿ ಸಿಬ್ಬಂದಿಯಾದ ಹೇಮಾವತಿ,ಉಷಾ ವೆಂಕಟರಮಣ,ಲಕ್ಷ್ಮಿ ಕಲ್ಲಾಜಿ, ಮಾಧವ ಗೌಡ, ಕೊರಗಪ್ಪ ಕಲ್ಲಾಜೆ, ವಿಶಾಲಾಕ್ಷಿ , ಜಯಂತಿ,ರತ್ನಾವತಿ ಸಹಕರಿಸಿದರು. ಗಣಿತ ಶಿಕ್ಷಕರಾದ ಪುರುಷೋತ್ತಮ ಬಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.