puttur:ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಪರೀಕ್ಷಾ ಸಮಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಗೊಂದಲಗಳನ್ನು ಪರಿಹರಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಡೆಸಲಾದ ಈ ಸಭೆಯಲ್ಲಿ ಮುಖ್ಯವಾಗಿ ಮುಂಬರುವ ಪೂರ್ವಸಿದ್ಧತಾ ಪರೀಕ್ಷೆಗಳು, ಹಾಗೂ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ನಿಯಮಾವಳಿಗಳು, ಅದಕ್ಕಾಗಿ ವಿದ್ಯಾರ್ಥಿಗಳು ಮಾಡಬೇಕಾದ ತಯಾರಿಗಳ ಬಗ್ಗೆ ಮಾಹಿತಿಗಳನ್ನು ಪೋಷಕರಿಗೆ ನೀಡಲಾಯಿತು.
ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಅರುಣ ಇವರು ಪರೀಕ್ಷಾ ತಯಾರಿಯ ಕುರಿತು, ಪ್ರಶ್ನೆ ಪತ್ರಿಕಾ ಮಾದರಿಯಲ್ಲಿನ ಬದಲಾವಣೆಗಳು, ಗಣಕಶಾಸ್ತ್ರ ವಿಭಾಗದ ಪ್ರಾಯೋಗಿಕ ಪರೀಕ್ಷೆ, ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗಾಗಿ ಪರಿಹಾರ ಬೋಧನೆಯ ತರಗತಿಗಳು ಹಾಗೂ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದರು. ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಅವರು ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ವಹಿಸಿಕೊಳ್ಳಬೇಕಾದ ಎಚ್ಚರಿಕೆಯ ಕುರಿತು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್ ರೈ, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಯಶವಂತಿ ಕಾರ್ಯಕ್ರಮ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ್ ಶೆಟ್ಟಿಗಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ವಂದಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.