ಕಡಬ: ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಯ 2024-25ನೇ ಸಾಲಿನ ವಾರ್ಷಿಕೋತ್ಸವ ’ವಳಕಡಮ ಸಂಭ್ರಮ’ ಜ.3ರಂದು ನಡೆಯಿತು.
ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದು ಈ ಊರಿನ ಜನರ ಕರ್ತವ್ಯವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ತ ಪುಷ್ಪಾಸುಭಾಷ್ ಶೆಟ್ಟಿ ಮಾತನಾಡಿ, ಇಲ್ಲಿನ ಶಾಲಾ ವಾರ್ಷಿಕೋತ್ಸವ ವಳಕಡಮ ಸಂಭ್ರಮ ಕಂಡು ತುಂಬಾ ಸಂತೋಷವಾಯಿತು. ಮಕ್ಕಳ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿದೆ. ಈ ಶಾಲೆಯು ಇನ್ನೂ ಒಳ್ಳೆಯ ಸಾಧನೆ ಮಾಡಲಿ ಎಂದು ಶುಭಹಾರೈಸಿದರು. ಅತಿಥಿಗಳಾಗಿದ್ದ ಕೊಯಿಲ ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ಮಾಳ, ಸೀತಾರಾಮ ಗೌಡ ಬಲ್ತಕುಮೇರ್, ಲತಾನವೀನ್ ಪೂಜಾರಿ ಎಡೆಚ್ಚಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ವಳಕಡಮ ಶಾಲೆಯಲ್ಲಿ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿ ಬಂಟ್ವಾಳ ತಾಲೂಕಿನ ನಡುಮೊಗರು ಶಾಲೆಗೆ ಆಂಗ್ಲಭಾಷಾ ಶಿಕ್ಷಕರಾಗಿ ವರ್ಗಾವಣೆಗೊಂಡ ಸಂದೇಶ್ ಎಂ.ಎಸ್.ಅವರು ದಿಕ್ಸೂಚಿ ಭಾಷಣ ಮಾಡಿ, ವಳಕಡಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಗಳಿಸಿದ ಅನುಭವ ಮತ್ತು ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಮತ್ತು ಊರವರ ಕರ್ತವ್ಯಗಳ ಕುರಿತು ತಿಳಿಸಿದರು.
ಸನ್ಮಾನ:
ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಲಾವಣ್ಯ ಲೋಕೇಶ್, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಮೋಹನದಾಸ ಗೌಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ, ಪೋಷಕರಿಗೆ,ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಊರವರಿಗೆ ನಡೆಸಿದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಮೇಶ್ ಗೌಡ ಹಿರೆಬಂಡಾಡಿಯವರ ಹೆಸರಿನ ದತ್ತಿನಿಧಿ ಬಹುಮಾನಗಳನ್ನು ಅರ್ಹರಿಗೆ ನೀಡಲಾಯಿತು. ಕ್ಲಸ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋವಿತ್, ನಿಟಕಪೂರ್ವಾಧ್ಯಕ್ಷ ಮೋಹನದಾಸ ಗೌಡ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ನಾರಾಯಣ ಪಿ.ಎಸ್.ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ.ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ರಕ್ಷಿತಾ ಬಹುಮಾನಿತರ ಪಟ್ಟಿ ವಾಚಿಸಿದರು. ಬಳಿಕ ವಳಕಡಮ, ಕೊನೆಮಜಲು ಅಂಗನವಾಡಿ ಮಕ್ಕಳಿಂದ, ಶಾಲಾ ಮಕ್ಕಳಿಂದ ಮತ್ತು ಪೋಷಕರು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.