ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ವಲಯದ ಕುಂಬ್ರ ಕಾರ್ಯಕ್ಷೇತ್ರದ ಬೆಳಕು ಜ್ಞಾನವಿಕಾಸ ಸಭೆಯು ಜ್ಞಾನವಿಕಾಸದ ಅಧ್ಯಕ್ಷೆ ಬೇಬಿರವರ ಅಧ್ಯಕ್ಷತೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರ ದುಂದುವೆಚ್ಚ ನಿರ್ವಹಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪತ್ರಕರ್ತ ಸಿಶೇ ಕಜೆಮಾರ್‌ರವರು ಮಾಹಿತಿ ನೀಡುತ್ತಾ, ಮಹಿಳೆಯರು ಸಮಯವನ್ನು ವ್ಯರ್ಥ ಮಾಡದೆ ತಮ್ಮ ದುಡಿಮೆಯಲ್ಲಿ ಒಂದಂಶವನ್ನು ಕೂಡಿಟ್ಟು ಮಕ್ಕಳ ಭವಿಷ್ಯಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಿಕೊಂಡು ಆ ನೆನಪಿಗಾಗಿ ಆಭರಣಗಳನ್ನು ಖರೀದಿ ಮಾಡಿಟ್ಟುಕೊಂಡರೆ ಕಷ್ಟದ ಸಮಯದಲ್ಲಿ ಅದು ಸಹಾಯಕ್ಕೆ ಬರುತ್ತದೆ ಎಂದರು. ಖರ್ಚು ಮಾಡುವ ಮೊದಲು ತಮ್ಮ ಸಂಪಾದನೆಯ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯರವರು ಸಂಘದ ಬಗ್ಗೆ ಮಾಹಿತಿ ನೀಡಿದರು. ಲೆಕ್ಕಪರಿಶೋಧಕರಾದ ಲತಾ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಶಶಿಕಲಾ ಸಹಕರಿಸಿದರು. ಜ್ಞಾನವಿಕಾಸದ ಸದಸ್ಯೆ ನೀಲಮ್ಮ ಸ್ವಾಗತಿಸಿ, ಜಯಂತಿ ವಂದಿಸಿದರು. ಜ್ಞಾನವಿಕಾಸ ಸಂಯೋಜಕಿ ರಾಜೀವಿ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.