ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘದಿಂದ ಸಾಮಾಜಿಕ ಕಾರ್ಯಚಟುವಟಿಕೆ ,ಸಾಂಸ್ಕೃತಿಕ ಕಾರ್ಯಕ್ರಮ,ರಕ್ತದಾನ ಶಿಬಿರ

0

ಸರಕಾರಿಂದ ಚಾಲಕರನ್ನು ಕಾರ್ಮಿಕ ಸಂಘಟನೆಗೆ ತರುವ ಕೆಲಸ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಆಟೋ ಚಾಲಕರು ವೈದ್ಯರಂತೆ ದಿನದ 24 ಗಂಟೆಯೂ ದುಡಿಯುವ ಶ್ರಮ ಜೀವಿಗಳು. ಇವರ ಜೀವನಕ್ಕೆ ಭದ್ರತೆ ಕಲ್ಪಿಸಲು ಕರ್ನಾಟಕ ಸರಕಾರ ಮುಂದಾಗಿದ್ದು, ಚಾಲಕರನ್ನು ಕಾರ್ಮಿಕ ಸಂಘಟನೆಯ ವ್ಯಾಪ್ತಿಗೆ ತರುವ ಕೆಲಸ ಮಾಡಿದೆ. ಇದರಿಂದ ಚಾಲಕರಿಗೆ, ಅವರ ಪತ್ನಿ ಮತ್ತು ಮಕ್ಕಳಿಗೆ ಸರಕಾರದಿಂದ ಹಲವು ಸಹಾಯ ಧನ ದೊರೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಇಲ್ಲಿನ ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘದ ವತಿಯಿಂದ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ಜ.5ರಂದು ನಡೆದ ಸಾಮಾಜಿಕ ಕಾರ್ಯಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮತ್ತು ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ನಾನು ಶಾಸಕನಾದ ಬಳಿಕ ಈಗಾಗಲೇ ಸುಮಾರು 28 ಕಡೆ ವ್ಯವಸ್ಥಿತ ಆಟೋ ರಿಕ್ಷಾ ನಿಲ್ದಾಣಕ್ಕೆ ಅನುದಾನವನ್ನು ಒದಗಿಸಿಕೊಟ್ಟಿದ್ದೇನೆ. ಜಾಗದ ವ್ಯವಸ್ಥೆ ಇದ್ದಲ್ಲಿ ಆಟೋ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದರೆ ಇನ್ನೂ ಅನುದಾನ ನೀಡಲು ಬದ್ಧನಿದ್ದೇನೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಚಾಲಕರನ್ನು ಕಾರ್ಮಿಕ ಸಂಘಟನೆಗೆ ಸೇರಿಸುವ ಕೆಲಸ ಮಾಡಿದೆ. ಇದರಿಂದ ಚಾಲಕರು ಅಪಘಾತದಲ್ಲಿ ನಿಧನ ಹೊಂದಿದರೆ ಐದು ಲಕ್ಷ ರೂ., ಸಹಜ ಮರಣಕ್ಕೆ 10 ಸಾವಿರ ರೂ., ಚಾಲಕರ ಪತ್ನಿಯ ಹೆರಿಗೆ 10, ಸಾವಿರ ರೂ., ಮಕ್ಕಳ ಶಿಕ್ಷಣ, ಮದುವೆಗೆ ಸಹಾಯಧನ ದೊರೆಯಲಿದೆ. ಇದರ ನೋಂದಣಿಗೆ ಸುಮಾರು 50 ರೂ.ನಷ್ಟು ಶುಲ್ಕವಿದ್ದು, ಆದರೆ ಇದನ್ನು ತಾನು ರೈ ಎಸ್ಟೇಟ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮೂಲಕ ಉಚಿತವಾಗಿ ನೋಂದಣಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇನೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾಯಕವೇ ಕೈಲಾಸವೆಂದು ಕೆಲಸ ಮಾಡುತ್ತಿರುವ ಆಟೋ ಚಾಲಕರು ಜನರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಾರೆ. ಹೀಗಾಗಿ ಊರಿನ ಜನರೊಂದಿಗೆ ರಕ್ತಸಂಬಂಧವನ್ನು ಮೀರಿ ಬಂಧುತ್ವವನ್ನು ಹೊಂದಿದವರಾಗಿದ್ದಾರೆ. ಆಟೋ ಚಾಲಕರು ಸಂಘಟಿತರಾಗಿ ಸಮಾಜಮುಖಿಗಳಾಗಿ ಸಮಾಜದಲ್ಲಿ ಗೌರವದ ಸ್ಥಾನಕ್ಕೇರಿರುವುದು ಅಭಿನಂದನಾರ್ಹವೆಂದರು.


ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಪೌರ ಕಾರ್ಮಿಕರಿಗೆ ಮತ್ತು ಆಟೋ ಚಾಲಕರ ಮಕ್ಕಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ವಿಕಲಾಂಗರಿಗೆ ಸಾಧನಗಳ ವಿತರಣೆ ಮಾಡಲಾಯಿತು. ಆಟೋ ಚಾಲಕರ ಬೇಡಿಕೆಗಳಿಗೆ ಸ್ಪಂದಿಸಿ ತನ್ನ ಶಾಸಕತ್ವದ ಅವಧಿಯಲ್ಲಿ ಅನುದಾನ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಲಾಯಿತು. ಚಲನಚಿತ್ರ ನಟ ಎಂ.ಕೆ. ಮಠ, ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡೀಸ್, ರೋಟರಿ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರವೂ ಈ ಸಂದರ್ಭ ನಡೆಯಿತು.


ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಸಂಘದ ಸ್ಥಾಪಕಾಧ್ಯಕ್ಷ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಗೌರವಾಧ್ಯಕ್ಷ ಶಬೀರ್ ಕೆಂಪಿ, ನೂರಾನಿಯಾ ಮಸೀದಿ ಅಧ್ಯಕ್ಷ ಹಮೀದ್ ಕರಾವಳಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ದಡ್ಡು, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನೆಲ್ಲಿಕಟ್ಟೆ, ಪ್ರಮುಖರಾದ ಜೆ.ಕೆ. ಪೂಜಾರಿ, ಅನಿ ಮಿನೇಜಸ್, ಶೌಕತ್ ಅಲಿ, ಮೊಯ್ದೀನ್ ಕುಟ್ಟಿ, ಸಜನಿ ಮಾರ್ಟಿಸ್, ಡಾ. ನಿರಂಜನ ರೈ, ಮಜೀದ್, ಕೈಲಾರು ರಾಜಗೋಪಾಲ ಭಟ್, ಝಕಾರಿಯಾ ಕೊಡಿಪ್ಪಾಡಿ, ಅಶೋಕ್ ಕುಮಾರ್, ಕಲಂದರ್ ಶಾಫಿ, ಡಾ. ಕೃಷ್ಣಾನಂದ, ಅಣ್ಣಿ ಗೌಡ ಮಲ್ಲಕಲ್ಲು, ಇರ್ಷಾದ್ ಯು.ಟಿ., ತಾಸೀಫ್ ಯು.ಟಿ., ಅಸ್ಕರ್ ಅಲಿ, ಹನುಮಂತಯ್ಯ, ವಂದನಾ, ಸಿದ್ದೀಕ್, ಶುಕೂರ್ ಮೇದರಬೆಟ್ಟು, ಗುಣವತಿ, ಇಸ್ಮಾಯೀಲ್ ತಂಙಳ್, ಸೇಸಪ್ಪ ನೆಕ್ಕಿಲು ಮತ್ತಿತರರು ಉಪಸ್ಥಿತರಿದ್ದರು.
ಅಬ್ದುರ್ರಹ್ಮಾನ್ ಯುನಿಕ್ ಸ್ವಾಗತಿಸಿದರು. ಲೊಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here