ವಿಟ್ಲ: ವಿವಾಹಿತ ಮಹಿಳೆಗೆ ಪತಿ, ಮನೆಯವರಿಂದ ದೌರ್ಜನ್ಯ ಆರೋಪ – ಪ್ರಕರಣ ದಾಖಲು

0

ವಿಟ್ಲ: ವಿವಾಹಿತ ಮಹಿಳೆಯೋರ್ವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ವಿಚಾರದಲ್ಲಿ ಪತಿ, ಮಾವ, ಅತ್ತೆ ಸಹಿತ ಐದು ಮಂದಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ದೈಹಿಕ ಹಲ್ಲೆಯಿಂದ ಗಾಯಗೊಂಡ ಮಹಿಳೆ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ನೀರ್ಕಜೆ ನಿವಾಸಿಗಳಾದ ಪತಿ ದಿನೇಶ್ ಕುಮಾರ್, ಅತ್ತೆ ಸುಂದರಿ, ಮಾವ ಬಾಬು ಮೂಲ್ಯ ಸಂಬಂಽಕರಾದ ಜಯಪ್ರಕಾಶ್, ಮಂಜುಳಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.


2023ರಲ್ಲಿ ವಿವಾಹ ನಡೆದಿದ್ದು, ತಿಂಗಳ ಕಾಲ ಉತ್ತಮವಾಗಿ ಸಂಸಾರ ನಡೆದಿದ್ದು, ಆ ಬಳಿಕ ಪತಿಗೆ ಬೇರೆ ಯುವತಿಯೊಂದಿಗಿರುವ ಸಂಬಂಧವನ್ನು ಪತ್ನಿ ಪ್ರಶ್ನಿಸಿದ್ದರೆನ್ನಲಾಗಿದೆ. ಅಲ್ಲಿಂದ ವಿನಾಕಾರಣಕ್ಕೆ ಜಗಳ ನಡೆಸಿ ಪತ್ನಿಗೆ ಹಲ್ಲೆ ನಡೆಸಲಾಗಿದೆ. ಇದಕ್ಕೆ ಅತ್ತೆ ಹಾಗೂ ಮಾವ ಕುಮ್ಮಕ್ಕು ನೀಡಿದ್ದಲ್ಲದೇ ಅವರು ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಜಯಪ್ರಕಾಶ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ನಡುವೆ ಬಿಸಿರೋಡಿನ ವಕೀಲರಲ್ಲಿಗೆ ಬಲಾತ್ಕಾರದಿಂದ ಕರೆದುಕೊಂಡು ಹೋಗಿ ವಿವಾಹ ವಿಚ್ಛೇಧನ ನೀಡುವುದಕ್ಕೆ ಮುಂದಾಗಿದ್ದಾರೆ. ಅಲ್ಲಿಂದ ತಪ್ಪಿಸಿ ಮನೆಗೆ ಬಂದ ಸಂದರ್ಭ ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಕುತ್ತಿಗೆ, ಸೊಂಟ, ಹೊಟ್ಟೆಗೆ ಹೊಡೆದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರ ದಬ್ಬಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.


ನೊಂದ ಮಹಿಳೆ ಬಂಟ್ವಾಳದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿದ್ದು, ಅವರ ಸೂಚನೆಯಂತೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಈ ಬಗ್ಗೆ ಮಾನಸಿಕ, ದೈಹಿಕ, ಲೈಂಗಿಕ ದೌರ್ಜನ್ಯ ನೀಡಿ ಹಿಂಸೆ ನೀಡಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

LEAVE A REPLY

Please enter your comment!
Please enter your name here