ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಸಮಿತಿ ಇದರ ವತಿಯಿಂದ ಕಲ್ಲೇಗ ಮಸೀದಿಯ ವಠಾರದಲ್ಲಿ ಶಂಶುಲ್ ಉಲಮಾ ನಗರ ಪುತ್ತೂರು ತಂಙಳ್ ವೇದಿಕೆಯಲ್ಲಿ ಸಮಸ್ತ ಯುವ ಸಮಾವೇಶವು ಜ.8 ರಂದು ನಡೆಯಲಿದೆ.
ಈ ಸಮಾವೇಶದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯಾ ತಂಙಳ್ ರವರು ನೆರವೇರಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಂ ಇಯ್ಯತುಲ್ ಖುತುಬಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಯುವ ಸಮೂಹ ಮಾದಕ ದ್ರವ್ಯದ ದಾಸರಾಗುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ದೈನಂದಿನ ಕೆಡುಕುಗಳು ಅನ್ಯಾಯ ಹಿಂಸೆ ಹಾಗೂ ಅಪರಾಧ ಕೃತ್ಯಗಳು ವೃದ್ಧಿಸುತ್ತಾ ಇದೆ. ಅದೇ ರೀತಿ ಮದುವೆ ಇನ್ನಿತರ ಶುಭ ಕಾರ್ಯಗಳ ಹೆಸರಿನಲ್ಲಿ ದುಂದುವೆಚ್ಚ ಅನಾಚಾರಗಳು ಕೂಡ ನಿಯಂತ್ರಿಸಲಾರದಷ್ಟು ಬೆಳೆಯುತ್ತಿದೆ. ಇದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಯುವಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಯುವ ಸಮೂಹವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಪ್ರತಿ ಮೊಹಲ್ಲಾಗಳ ಇಮಾಮುಗಳು, ಜಮಾಅತ್ ಮತ್ತು ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬೆಳಿಗ್ಗೆ ಕಲ್ಲೇಗ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿರವರು ಸಮಸ್ತದ ಧ್ವಜಾರೋಹಣ ಗೈಯಲಿದ್ದಾರೆ. ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸೈಯದ್ ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯದ್ ಅಹಮದ್ ಪೂ ಕೋಯಾ ತಂಙಳ್ ದುವಾ ನೆರವೇರಿಸಲಿದ್ದಾರೆ. ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯರ್‌ರವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಕಾರ್ಯಾಧ್ಯಕ್ಷರಾದ ಕೆ.ಎಮ್. ಉಸ್ಮಾನುಲ್ ಫೈಝಿ ತೋಡಾರ್ ಭಾಷಣ ಮಾಡಲಿದ್ದಾರೆ.
ಪಿ ಎಮ್ ಅಬ್ದುಲ್ ಸಲಾಂ ಬಾಖವಿ ವಡಕ್ಕೆಕಾಡ್ ಮತ್ತು ಅನ್ವರಲಿ ಮುಹಿಯುದ್ದೀನ್ ಹುದವಿ ಅಲುವಾ ರವರು ವಿಷಯ ಮಂಡಿಸಲಿದ್ದಾರೆ. ಸಯ್ಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ ಸಹಿತ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಸ್ತ ಕರ್ನಾಟಕ ಮುಶಾವರ ಸದಸ್ಯ ಪಿ.ಎಂ. ಉಮ್ಮರ್ ದಾರಿಮಿ ಸಾಲ್ಮರ, ಪುತ್ತೂರು ತಾಲೂಕು ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ದ.ಕ.ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಶುದ್ದೀನ್ ದಾರಿಮಿ, ದ.ಕ.ಜಿಲ್ಲಾ ಈಸ್ಟ್ ಎಸ್‌ಕೆಎಸ್‌ಎಸ್‌ಎಫ್ ಇದರ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಉಪಸ್ಥಿತರಿದ್ದು ಮಾಹಿತಿ ನೀಡಿದರು.