ಪುತ್ತೂರು:ಪುರಾತನ ಕಾರಣಿಕ ಕ್ಷೇತ್ರಗಳಲ್ಲೊಂದಾದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 4 ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೆ ‘ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಜ.6ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಸಂಜೆ ದೈವಗಳ ನೇಮೋತ್ಸವ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಜ.5ರಂದು ಬೆಳಿಗ್ಗೆ ಗಣಪತಿಹೋಮ, ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ನಾಗ ದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ, ರಾತ್ರಿ ಶ್ರೀದೇವರ ಬಲಿ ಹೊರಟು ಪೆರಿಯ ಬಲಿ ಉತ್ಸವ, ಕಟ್ಟೆಪೂಜೆ, ಸಾರ್ವಜನಿಕ ಕಟ್ಟೆ ಪೂಜೆ, ನಂತರ ಸಂಪ್ಯ ಶ್ರೀ ಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ದೇವರ ಸವಾರಿ ನಡೆಯಿತು.
ಜ.6ರಂದು ಬೆಳಿಗ್ಗೆ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ, ಮಧ್ಯಾಹ್ನ ಶ್ರೀ ವ್ಯಾಘ್ರಚಾಮುಂಡಿ ಮತ್ತು ಮೂಕಾಂಬಿಕ ಗುಳಿಗ ದೈವದ ನೇಮೋತ್ಸವಗಳು ನಡೆದು ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವವು ಸಂಪನ್ನಗೊಂಡಿತು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಆಡಳಿತಾಧಿಕಾರಿ ಕೆ.ಟಿ ಗೋಪಾಲ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸಹಿತ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.