ಬನ್ನೂರು ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ರೂ. 7 ಕೋಟಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ

0

ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟಿನ ನಿರ್ಧಾರ – ಅಶೋಕ್ ಕುಮಾರ್ ರೈ

ಪುತ್ತೂರು: ಪುತ್ತೂರಿನ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯವಿಲ್ಲ. ನಗರಸಭೆ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚೆ ಮಾಡಿ ಒಗ್ಗಟಿನ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬನ್ನೂರು ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇಂದ್ರ, ರಾಜ್ಯ ಪುರಸ್ಕೃತ ಯೋಜನೆಯಡಿ ರೂ.7 ಕೋಟಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ಜ.7 ರಂದು ನೆರವೇರಿಸಿ ಮಾತನಾಡಿದರು.

ಪುತ್ತೂರಿನಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುವ ಕೆಲಸ ಆಗಿದೆ. ನಗರದ ಸ್ವಚ್ಚತೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ಪುತ್ತೂರು ಬೆಳೆಯುತ್ತಿರುವ ನಗರದಲ್ಲಿ ಸ್ವಚ್ಚತೆಗೆ ಆದ್ಯತೆ ಕೊಡಲೇ ಬೇಕು. ಪ್ರತಿ ತಿಂಗಳಿಗೆ ಎಲ್ಲರ ಬೇಡಿಕೆ ಹೆಚ್ಚುತ್ತದೆ. ಅದೇ ರೀತಿ ತ್ಯಾಜ್ಯ ಕೂಡಾ ಹೆಚ್ಚು ಉತ್ಪತಿಯಾಗುತ್ತದೆ. ಅದನ್ನು ವಿಲೇವಾರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ. ಮುಂದೆ 10 ವರ್ಷದ ನಂತರ ಗ್ರಾಮೀಣ ಪ್ರದೇಶದಲ್ಲೂ ಕೂಡಾ ತ್ಯಾಜ್ಯ ಸಂಸ್ಕರಣಾ ಘಟಕ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಡ್ರೈನೇಜ್ ಸಿಸ್ಟಮ್ ಬೇಕೆಂದು ಎಲ್ಲರ ಅಭಿಪ್ರಾಯವಿದೆ. ಒಟ್ಟಿನಲ್ಲಿ ಇತ್ತೀಚೆಗೆ ನಗರಸಭೆ ಅಧ್ಯಕ್ಷರು ಸದಸ್ಯರೊಂದಿಗೆ ಚರ್ಚೆ ಮಾಡಿ ಒಗ್ಗಟ್ಟಿನಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯವಿಲ್ಲ. ಪುತ್ತೂರಿನ ಅಭಿವೃದ್ದಿಗೆ ಒಗ್ಗಟಿನಿಂದ ಕೆಲಸ ಮಾಡುತ್ತೆವೆ ಎಂದರು.


ಕಸದಿಂದ ಗೊಬ್ಬರ:
ಬನ್ನೂರಿನಲ್ಲಿ ಇನ್ನು ಡಂಪಿಂಗ್ ಯಾರ್ಡ್ ಹೇಳುವ ಬದಲು ಸಂಸ್ಕರಣಾ ಘಟಕ ಹೇಳುವ ಕುರಿತು ಪೌರಾಯುಕ್ತರು ಉಲ್ಲೇಖಿಸಿರುವುದು ಉತ್ತಮ ವಿಚಾರ. ಇದರ ಜೊತೆಗೆ ಪುತ್ತೂರಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬಯೋ ಸಿಎನ್‌ಜಿ ಘಟಕವೂ ಆಗಿದೆ. ಗ್ರಾಮೀಣ ಭಾಗದ ಮುಂಡೂರಿನಲ್ಲಿ ಎಮ್ ಆರ್ ಪಿ ಎಲ್ ಘಟಕ ತೆರೆದಿದ್ದೇವೆ. ಯಾವುದೇ ಹಣ ಪಡೆಯದೇ ವೇಸ್ಟ್ ಮ್ಯಾನೇಜ್‌ಮೆಂಟ್ ಮಾಡಲಾಗುತ್ತಿದೆ. ಅಲ್ಲಿ ಕಸದಿಂದ ಗೊಬ್ಬರ ಮಾಡಿ ಹಣ ಸಂಪಾದನೆ ಮಾಡುವ ಯೋಜನೆ ಆಗುತ್ತಿದೆ. ಮುಂದಿನ ದಿನ ವೇಸ್ಟ್ ಮೆನೇಜ್ ಮೆಂಟ್ ಹೋಗಿ ಆರ್ಥಿಕ ಲಾಭ ಇಟ್ಟುಕೊಂಡು ಕಂಪನಿಗಳು ಮುಂದೆ ಬರಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ವೇಗವಾಗಿ ಬೆಳೆಯುವ ಪುತ್ತೂರಿಗೆ ಪೂರಕ ವ್ಯವಸ್ಥೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಮಾತನಾಡಿ, ನಾಗರಿಕರಿಗೆ ಸ್ವಚ್ಛ ಸುಂದರ ಹಸಿರು ಪರಿಸರವನ್ನು ನೀಡುವ ಯೋಜನೆ ನಗರಸಭೆಯದ್ದು. ವೇಗವಾಗಿ ಬೆಳೆಯುತ್ತಿರುವ ಪುತ್ತೂರು ಮುಂದೆ ಜಿಲ್ಲಾಕೇಂದ್ರವಾಗುವ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳು ಇರಲೇ ಬೇಕು. ಈ ನಿಟ್ಟಿನಲ್ಲಿ ನಗರಭೆಯಿಂದ ಹಲವು ಯೋಜನೆ ಜನರಿಗಾಗಿ ಮಾಡಲಾಗುತ್ತಿದೆ ಎಂದರು.


ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವರು ಮಾತನಾಡಿ, ಮಾನವನ ಜನ ಜೀವನದ ಸುಧಾರಣೆಗೆ ಮಾಡಿರುವ ಕಾರ್ಯಕ್ರಮ ಇದಾಗಿದೆ. ಹಿಂದೆ ಮಾಡಿದ ತಪ್ಪಿನಿಂದಾಗಿ ಕಸ ತುಂಬಿದೆ. ಇವತ್ತು ಅದಕ್ಕೆ ಜ್ಞಾನ ಭಂಡಾರವಾದ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಂದ ಉತ್ತಮ ಚಿಂತನೆಯ ಮೂಲಕ ವ್ಯವಸ್ಥಿತ ಯೋಜನೆ ಬಂದಿದೆ. ನಗರಸಭೆಗೆ ಉತ್ತಮ ಹೆಸರು ಬಂದಿದೆ. ಇದರ ಜೊತೆಗೆ ಬಯೋ ಸಿಎನ್‌ಜಿ ಘಟಕದ ರೂವಾರಿ ಕೃಷ್ಣನಾರಾಯಣ ಮುಳಿಯ ಮತ್ತು ರಾಜೇಶ್ ಬೆಜ್ಜಂಗಳ ಅವರನ್ನು ಅಭಿನಂದಿಸಬೇಕೆಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಮಾತನಾಡಿ,7 ವರ್ಷದ ಹಿಂದೆ ಈ ಭಾಗದಲ್ಲಿ ಭಾರಿ ಸಮಸ್ಯೆಯ ಕೂಗು ಕೇಳಿ ಬರುತ್ತಿತ್ತು. ಇದೀಗ ಅದಕ್ಕೆ ಪೂರ್ಣ ಪ್ರಮಾಣದ ಪರಿಹಾರ ದೊರೆತಿದೆ ಎಂದರು. ನಗರಸಭೆ ಸದಸ್ಯರಾದ ಯುಸೂಪ್ ಡ್ರೀಮ್, ವಿದ್ಯಾ ಆರ್ ಗೌರಿ, ದೀಕ್ಷಾ ಪೈ, ಮೋಹಿನಿ ವಿಶ್ವನಾಥ ಗೌಡ, ಪೂರ್ಣಿಮ ಚೆನ್ನಪ್ಪ ಗೌಡ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಭರಿನಾಥ ಅತಿಥಿಗಳನ್ನು ಗೌರವಿಸಿದರು. ವಾಣಿ ಪ್ರಾರ್ಥಿಸಿದರು. ನಗರಸಭೆ ಸ್ಥಳೀಯ ಸದಸ್ಯೆ ಗೌರಿ ಬನ್ನೂರು ಸ್ವಾಗತಿಸಿದರು. ಪೌರಾಯುಕ್ತ ಮಧು ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ನಾಮನಿರ್ದೇಶಿತ ಸದಸ್ಯ ರೋಶನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಸಹಿತ ನಗರಸಭೆ ಅಧಿಕಾರಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಇನ್ನು ಮುಂದೆ ಬನ್ನೂರು ಡಂಪಿಂಗ್ ಯಾರ್ಡ್ ಬದಲು ಸಂಸ್ಕರಣಾ ಘಟಕವಾಗಲಿದೆ
ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬನ್ನೂರಿನ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಕಳೆದ 20 ವರ್ಷದಿಂದ ನಿರ್ವಹಣೆ ಮಾಡುತ್ತಾ ಬಂದಿದ್ದೇವೆ. ಇದನ್ನು ಅಭಿವೃದ್ಧಿ ಪಡಿಸಲು ಹಲವಾರು ಯೋಜನೆಗಳಲ್ಲಿ ಕಸವನ್ನು ಸಂಸ್ಕರಣ, ಗೊಬ್ಬರ ಸಹಿತ ಹಲವಾರು ಯೋಜನೆ ರೂಪಿಸಿದ್ದೆವು. ಆದರೆ ಕಸದ ಪ್ರಮಾಣ ಮಾತ್ರ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಾ ಇತ್ತು. ಇದನ್ನು ಒಂದು ರೀತಿಯಲ್ಲಿ ಮುಕ್ತಾಯಗೊಳಿಸಲು ಈ ಭಾರಿಯ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ ಡಿಪಿಆರ್ ತಯಾರು ಮಾಡಿ ಇಲ್ಲಿರುವ ಒಟ್ಟು 40ಸಾವಿರ ಟನ್‌ನ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅದರಕ್ಕೆ ಪೂರ್ಣ ಪ್ರಮಾಣದ ಸಹಕಾರ ಸಿಕ್ಕಿ ಶಿಲಾನ್ಯಾಸ ನೆರವೇರಿದೆ. ಇದರಿಂದಾಗಿ ಮುಂದೆ ಬನ್ನೂರು ವಾಡ್‌ನಲ್ಲಿ ಹಿಂದೆ ಇದ್ದ ವಾಸನೆ, ನೀರಿನ ಸಮಸ್ಯೆಗೆ ಮುಕ್ತಿ ಹಾಡುವ ದಿನ ಬಂದಿದೆ. ಇದರೊಂದಿಗೆ ರೋಟರಿ, ಕೃಷ್ಣಮುಳಿಯ ಗ್ರೀನ್ ಎನರ್ಜಿ, ರೀಟಾ ಸಂಸ್ಥೆಯ ವತಿಯಿಂದ ಬಯೋ ಸಿಎನ್‌ಜಿ ನಿರ್ಮಾಣ ಮಾಡಲಾಗಿದೆ. ಅದು ಚಾಲನೆಯಲ್ಲಿದೆ. ಅದರ ಇಂಧನವನ್ನು ವಾಹನಗಳಿಗೆ ಉಪಯೋಗ ಮಾಡಲಾಗುತ್ತಿದೆ. ಒಣ ತ್ಯಾಜ್ಯಕ್ಕೂ ಮುಕ್ತಿ ನೀಡುವ ನಿಟ್ಟಿನಲ್ಲಿ ಎಮ್‌ಆರ್‌ಎಫ್ ಘಟಕವನ್ನು ನಿರ್ಮಾಣ ಮಾಡಲಾಗುವುದು. ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಸ್ಕರಣೆ ಮಾಡುವ ಘಟಕ ಆಗಲಿದೆ. ಇದು ರಾಜ್ಯಕ್ಕೆ ಮಾದರಿ ಕಾರ್ಯಕ್ರಮ, ಯಾಕೆಂದರೆ ಒಂದೇ ಕಡೆ ಬಯೋ ಸಿಎನ್‌ಜಿ ಘಟಕ, ಎಮ್‌ಆರ್‌ಎಫ್ ಘಟಕ, ತ್ಯಾಜ್ಯ ಸಂಸ್ಕರಣ ಒಟ್ಟಿಗೆ ನಡೆಯುತ್ತಿರುವುದು ರಾಜ್ಯದಲ್ಲೇ ಪ್ರಥಮ. ತ್ಯಾಜ್ಯಗಳನ್ನು ಸಂಪೂರ್ಣ ವಿಲೆವಾರಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿಗೆ ಬರುವ 25 ಟನ್ ತ್ಯಾಜ್ಯದಲ್ಲಿ ಸುಮಾರು 2 ಟನ್ ನಿರುಪಯುಕ್ತ ತ್ಯಾಜ್ಯ ಬರುತ್ತದೆ. ಅದಕ್ಕೆ ಲ್ಯಾಂಡ್ ಪಿಲ್ ಘಟಕ ನಿರ್ಮಾಣ ಆಗುತ್ತಿದೆ. ಮುಂದಿನ ದಿನ ಝೀರೋ ವೇಸ್ಟ್ ಘಟಕವನ್ನು ಡಂಪಿಂಗ್ ಯಾರ್ಡ್ ಬದಲು ಸಂಸ್ಕರಣಾ ಘಟಕ ಎಂದು ಉಲ್ಲೇಖಿಸುವುದು ಉತ್ತಮ ಎಂದರು.
ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ

LEAVE A REPLY

Please enter your comment!
Please enter your name here