ಪುತ್ತೂರು: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರ ವಾರ್ಡ್‌ನಲ್ಲಿ 15ನೇ ಹಣಕಾಸು ಯೋಜನೆಯಡಿ ರೂ.6ಲಕ್ಷ ವೆಚ್ಚದಲ್ಲಿ ಉರಮಾಲ್ ಸಿದ್ಯಾಳ ಮತ್ತು ಶಾಂತಿನಗರ ತಾರಿಗುಡ್ಡೆ ರಸ್ತೆಯಲ್ಲಿ ಇಂಟರ್‌ಲಾಕ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಜ.7ರಂದು ಸಂಜೆ ಗೋದೋಳಿ ಮುಹೂರ್ತದಲ್ಲಿ ಏಕಕಾಲದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಕಳೆದ 7 ವರ್ಷದಿಂದ ಪುತ್ತೂರು ನಗಸಭೆಯಲ್ಲಿ ಒಂದು ಪರಿವರ್ತನೆ ಅಭಿವೃದ್ದಿ ಕಾಣುತ್ತಿದೆ. ಕಳೆದ 5 ವರ್ಷ ಆಡಳಿತ ಮಾಡಿದ ಬಿಜೆಪಿ ನಗರವಾಸಿಗಳು ಮತ್ತು ಗ್ರಾಮವಾಸಿಗಳಿಗೆ ಯಾವುದೇ ಬೇಧವಿಲ್ಲದೆ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕೆಲಸ ಮಾಡಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಮೂಲಕ ಇವತ್ತು ಪುತ್ತೂರು ನಗರಸಭೆಯಲ್ಲಿ ನಗರೋತ್ಥಾನದ ಅನುದಾನ, ಎಸ್‌ಎಫ್‌ಸಿ ಅನುದಾನ, 15ನೇ ಹಣಕಾಸಿನ ಅನುದಾನ, ನಗರಸಭೆಯ ನಿಧಿ ಸಹಿತ ಬೇರೆ ಬೇರೆ ಅನುದಾನದಿಂದ ನಗರಸಭೆಯ ಪ್ರತಿಯೊಂದು ಭಾಗದ ರಸ್ತೆ ಕಾಂಕ್ರೀಟಿಕರಣ ಗೊಂಡಿದೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಥಾರ್ ರಸ್ತೆ ಇರುವುದಿಲ್ಲ ಬದಲಾಗಿ ಕಾಂಕ್ರೀಟ್ ರಸ್ತೆಗಳೇ ಮೂಡಿ ಬರಲಿದೆ ಅದು ನಮ್ಮ ಗ್ಯಾರೆಂಟಿ ಎಂದರು.
ನಗರಸಭೆ ಅಧ್ಯಕ್ಷೆ ಲೀಲವಾತಿ ಅಣ್ಣು ನಾಯ್ಕ ಉಪಾಧ್ಯಕ್ಷ ಬಾಲಚಂದ್ರ ಮಾತನಾಡಿದರು. ಈ ಸಂದರ್ಭ ನಗರಸಭೆ ಸದಸ್ಯರಾದ ಗೌರಿ ಬನ್ನೂರು, ದೀಕ್ಷಾ ಪೈ, ಮಾಜಿ ಸದಸ್ಯ ಇಸ್ಮಾಯಿಲ್ ಸಾಲ್ಮರ, ಬನ್ನೂರು ಗ್ರಾ.ಪಂ ಸದಸ್ಯ ತಿಮ್ಮಪ್ಪ ಮೂಡಾಯೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್, ಬಿಜೆಪಿ ಪ್ರಮುಖರಾದ ಜಯಲಕ್ಷ್ಮೀ, ಸ್ವರ್ಣಲತಾ ಹೆಗ್ಡೆ, ಯುವರಾಜ್ ಪೆರಿಯತ್ತೋಡಿ, ಸಹಕಾರ ಭಾರತಿಯ ಕಾರ್ಯದರ್ಶಿ ಮೋಹನ್ ಪಕಳ, ನಾಗೇಶ್ ಟಿ.ಎಸ್, ರೈಲ್ವೇ ಬಳಿಯ ಅಬ್ದುಲ್ಲಾ, ಸ್ಥಳೀಯರಾದ ರಾಫಿ, ನಾರಾಯಣ, ಕೇಶವ, ಶಿವಪ್ರಸಾದ್ ಸುವರ್ಣ, ರಮೇಶ್ ತಾರಿಗುಡ್ಡೆ, ಶಿವಾನಂದ, ರವೀಶ್, ಸುಂದರ, ಪುರುಷೋತ್ತ, ದಯಾನಂದ ಸಹಿತ ಹಲವಾರು ಮಂದಿ ಉಪಸ್ಥಿರಿದ್ದರು.
ಉಳಿದ ಎರಡು ರಸ್ತೆಯೂ ಕಾಂಕ್ರೀಟ್ ರಸ್ತೆಯಾಗಲಿದೆ
ಕೇಪುಳು ಸಿದ್ಯಾಳ ರಸ್ತೆ ಬಹಳ ಹದೆಗೆಟ್ಟಿತ್ತು. ಜನರಿಂದ ಬೈಗುಳವೂ ಸಿಕ್ಕಿತ್ತು. ಆದರೆ ಇದು ನಮಗೆ ಬೇಸರ ಇತ್ತು. ಆದರೆ ನಾನು ಕೇಪುಳುವಿನಿಂದ ಸಿದ್ಯಾಳದ ತನಕ ಒಂದೇ ರಸ್ತೆಗೆ ರೂ. 1.15ಕೋಟಿ ಅನುದಾನ ತರಿಸಿದ್ದೇನೆ. ಇನ್ನು ಉಳಿದ ರಸ್ತೆಗೂ ಅನುದಾನ ತರಿಸಿದ್ದೇನೆ. ಈ ಅನುದಾನ ತರಿಸಲು ಕಾರಣಕರ್ತರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗ ನನಗೆ ನೆಮ್ಮದಿ ಇದೆ. ಇನ್ನು ನನ್ನ ವಾರ್ಡ್‌ನಲ್ಲಿ ಉಳಿದ ಎರಡು ರಸ್ತೆಯೂ ಕಾಂಕ್ರೀಟ್ ರಸ್ತೆಯಾಗಲಿದೆ.
ಸುಂದರ ಪೂಜಾರಿ ಬಡಾವು, ಸ್ಥಾಯಿ ಸಮಿತಿ ಅಧ್ಯಕ್ಷರು ನಗರಸಭೆ ಪುತ್ತೂರು