ಶಾಸಕರಿಂದ ಎರಡು ಕಡೆಯೂ ಗುದ್ದಲಿಪೂಜೆ; ಸೌಹಾರ್ದ ಇತ್ಯರ್ಥ
ಕಡಬ: ತಾಲೂಕಿನ ಬಿಳಿನೆಲೆ ಹಾಗೂ ಐತ್ತೂರು ಗ್ರಾಮ ಪಂಚಾಯಿತಿಯ ಗಡಿಭಾಗದ ಓಟೆಕಜೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಜಟಾಪಟಿ ನಡೆದ ಹಿನ್ನೆಲೆಯಲ್ಲಿ ಶಾಸಕರು ಎರಡು ಕಡೆಯೂ ಗುದ್ದಲಿಪೂಜೆ ಮಾಡುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಿರುವ ಘಟನೆ ಜ.5ರಂದು ನಡೆದಿರುವುದಾಗಿ ವರದಿಯಾಗಿದೆ.
ರಾಜ್ಯ ಸರಕಾರದ ನೂತನ ಕಾಲು ಸಂಕ ನಿರ್ಮಾಣ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ಮೂಲಕ ಐತ್ತೂರು ಹಾಗೂ ಬಿಳಿನೆಲೆ ಗ್ರಾಮ ಪಂಚಾಯಿತಿಯ ಗಡಿಭಾಗದ ಓಟೆಕಜೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 60 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿತ್ತು. ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗುವಲ್ಲಿ ಕಾಂಗ್ರೆಸ್‌ನ ಪಾತ್ರ ಕೂಡಾ ಇದೆ. ವಿಧಾನಸಭಾ ದೂರು ಅರ್ಜಿಗಳ ಸಮಿತಿಯ ಸದಸ್ಯ ಸುರೇಶ್ ಕುಮಾರ್ ಅವರಿಗೆ ಸೇತುವೆಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿರುವುದು ನಾವು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ನಮ್ಮ ನೇತೃತ್ವದಲ್ಲಿ ಗುದ್ದಲಿಪೂಜೆ ನೆರವೇರಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದರು. ಕ್ಷೇತ್ರದ ಶಾಸಕರಿಂದ ಐತ್ತೂರು ಭಾಗದಲ್ಲೇ ಗುದ್ದಲಿಪೂಜೆ ಮಾಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದರಿಂದ ಗೊಂದಲ ಉಂಟಾಗಿತ್ತು. ಐತ್ತೂರು ಭಾಗದಲ್ಲಿ ಐತ್ತೂರು ಗ್ರಾ.ಪಂ.ಸದಸ್ಯ ಮನಮೋಹನ ಗೋಳ್ಯಾಡಿಯವರ ನೇತೃತ್ವದಲ್ಲಿ ಶಿಲಾನ್ಯಾಸಕ್ಕೆ ಸಿದ್ದತೆ ಮಾಡಲಾಗಿತ್ತು. ಬಿಳಿನೆಲೆ ಭಾಗದಲ್ಲಿ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್‌ರವರ ನೇತೃತ್ವದಲ್ಲಿ ಶಿಲಾನ್ಯಾಸಕ್ಕೆ ಸಿದ್ಧತೆ ಮಾಡಲಾಗಿತ್ತು.
ಎರಡು ಕಡೆಯೂ ಗುದ್ದಲಿ ಪೂಜೆ:
ಈ ಗೊಂದಲ ನಡುವೆಯೇ ಮೊದಲು ಐತ್ತೂರು ಭಾಗಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿ ಪೂಜೆಗೆ ಆಗಮಿಸಿದರು. ಇದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ನೀವು ರಾಜಕೀಯ ಮಾಡುತ್ತಿದ್ದೀರಿ. ಬಿಳಿನೆಲೆ ಭಾಗದಲ್ಲಿ ಗುದ್ದಲಿಪೂಜೆ ನೆರವೇರಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅಧಿಕಾರಿಗಳೂ ಗೊಂದಲಕ್ಕೀಡಾದರು. ಬಳಿಕ ಎರಡು ಭಾಗದವರನ್ನು ಸಮಾಧಾನಪಡಿಸಿದ ಶಾಸಕರು ಎರಡೂ ಬದಿಯಲ್ಲೂ ಗುದ್ದಲಿಪೂಜೆ ನಡೆಸುವ ನಿರ್ಧಾರಕ್ಕೆ ಬಂದರು. ಬಿಜೆಪಿ ಕಾರ್ಯಕರ್ತರ ಮನವೊಲಿಸಿ ಮೊದಲು ಐತ್ತೂರು ಭಾಗದಲ್ಲಿ ಗುದ್ದಲಿಪೂಜೆ ನೆರವೇರಿಸಿ ಅಲ್ಲಿ ಚಹಾ, ತಿಂಡಿ ಮುಗಿಸಿ ಅಲ್ಲಿಂದ ಐತ್ತೂರು ಭಾಗದ ಜನರನ್ನು ಸೇರಿಸಿಕೊಂಡು ನದಿ ದಾಟಿ ಬಿಳಿನೆಲೆ ಭಾಗಕ್ಕೆ ತೆರಳಿ ಅಲ್ಲಿ ಕಾಂಗ್ರೆಸ್ ಮುಖಂಡರು ಹೇಳಿದ ಜಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅಲ್ಲಿ ಸಹ ಚಹಾ, ತಿಂಡಿ ಸ್ವೀಕರಿಸಿದರು. ಈ ಮೂಲಕ ಶಿಲಾನ್ಯಾಸ ವಿಚಾರದಲ್ಲಿ ಉಂಟಾಗಿದ್ದ ಗೊಂದಲವು ಶಾಸಕರ ಮೂಲಕ ಸೌಹಾರ್ದಯುತವಾಗಿ ಕೊನೆಗೊಂಡಿತು ಎಂದು ವರದಿಯಾಗಿದೆ.
ಲೋಕೋಪಯೋಗಿ ಇಲಾಖಾಧಿಕಾರಿ ಪ್ರಮೋದ್ ಕುಮಾರ್ ಕೆ.ಕೆ., ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮಿರಾ ಸಾಹೇಬ್, ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಬಿಳಿನೆಲೆ, ಸತೀಶ್ ಕಳಿಗೆ, ಮಾಜಿ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಶಿವಕುಮಾರ್, ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ, ಮಾಜಿ ಅಧ್ಯಕ್ಷೆ ಶ್ಯಾಮಲ, ಸದಸ್ಯ ಮನಮೋಹನ ಗೋಳ್ಯಾಡಿ, ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮದುಸೂಧನ್ ಒಡೋಳಿ, ಬಿಜೆಪಿ ಮುಖಂಡ ಎ.ಬಿ. ಮನೋಹರ್ ರೈ, ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಗಣೇಶ್ ಮುಜೂರು, ನಿರ್ದೆಶಕ ಉಮೇಶ್ ಬ್ರಹ್ಮಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ:
ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಅಭಿವೃದ್ಧಿಯ ವಿಚಾರದಲ್ಲಿ ನಾವು ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.